ಕನ್ನಡಿಗರಿಗೆ ಅವಮಾನ, ಪ್ರಕರಣ ರದ್ದಿಗೆ ಸೋನು ನಿಗಂ ಮನವಿ
Sonu Nigam: ಗಾಯಕ ಸೋನು ನಿಗಂ ಕನ್ನಡಿಗರ ಭಾಷಾಭಿಮಾನವನ್ನು ಭಯೋತ್ಪಾದನೆಗೆ ಹೋಲಿಸಿ ನೀಡಿದ್ದ ಹೇಳಿಕೆ ವಿರುದ್ಧ ಈಗಾಗಲೇ ದೂರು ದಾಖಲಾಗಿದ್ದು, ನೊಟೀಸ್ ಸಹ ನೀಡಲಾಗಿದೆ. ಇದೀಗ ಬೆಂಗಳೂರು ಪೊಲೀಸರು ಎರಡನೇ ನೊಟೀಸ್ ಕಳಿಸಲು ಸಜ್ಜಾಗುತ್ತಿದ್ದಂತೆ, ಸೋನು ನಿಗಂ ಹೈಕೋರ್ಟ್ ಮೆಟ್ಟಿಲೇರಿದ್ದು ತಮ್ಮ ಮೇಲೆ ದಾಖಲಾಗಿರುವ ದೂರು ರದ್ದು ಮಾಡುವಂತೆ ಮನವಿ ಮಾಡಿದ್ದಾರೆ.

ಕನ್ನಡಿಗರ ಕನ್ನಡಾಭಿಮಾನವನ್ನು ಭಯೋತ್ಪಾದನೆಗೆ ಹೋಲಿಸಿದ್ದ ಗಾಯಕ ಸೋನು ನಿಗಂ ವಿರುದ್ಧ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರು ದಾಖಲಿಸಿಕೊಂಡಿದ್ದ ಪೊಲೀಸರು ಸೋನು ನಿಗಂಗೆ ನೊಟೀಸ್ ಕಳಿಸಿ, ನೋಟೀಸ್ಗೆ ಉತ್ತರ ನೀಡುವಂತೆ ಸೂಚಿಸಿದ್ದರು. ಆದರೆ ಇದೀಗ ಗಾಯಕ ಸೋನು ನಿಗಂ, ತಮ್ಮ ವಿರುದ್ಧ ದಾಖಲಾಗಿರುವ ದೂರನ್ನು ರದ್ದು ಮಾಡುವಂತೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಕೆಲ ದಿನಗಳ ಹಿಂದೆ ಬೆಂಗಳೂರಿನ ಕಾಲೇಜೊಂದರಲ್ಲಿ ಲೈವ್ ಶೋ ಮಾಡುತ್ತಿದ್ದ ಸೋನು ನಿಗಂ ಹಿಂದಿ ಹಾಡುಗಳನ್ನು ಹಾಡುತ್ತಿದ್ದರು. ಈ ವೇಳೆ ವಿದ್ಯಾರ್ಥಿಯೊಬ್ಬ ಹಿಂದಿ ಹಾಡು ಹಾಡುವಂತೆ ಒತ್ತಾಯ ಮಾಡಿದ್ದರು. ಕೂಡಲೇ ಸಿಟ್ಟಾದ ಸೋನು ನಿಗಂ, ‘ಕನ್ನಡ, ಕನ್ನಡ ಇಂಥಹುದರಿಂದಲೇ ಪಹಲ್ಗಾಮ್ ದಾಳಿ ಆಗಿದ್ದು’ ಎಂದಿದ್ದರು. ಕನ್ನಡಿಗರ ಭಾಷಾಭಿಮಾನವನ್ನು ಭಯೋತ್ಪಾದನೆಗೆ ಹೋಲಿಸಿದ ಗಾಯಕನ ಮೇಲೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ಹಲವು ಕನ್ನಡಪರ ಸಂಘಟನೆಗಳು ಸೋನು ನಿಗಂ ವಿರುದ್ಧ ಪ್ರತಿಭಟನೆ ನಡೆಸಿದವು. ಸೋನು ನಿಗಂ ವಿರುದ್ಧ ಫಿಲಂ ಚೇಂಬರ್ಗೆ ದೂರು ಸಹ ನೀಡಲಾಯ್ತು. ಫಿಲಂ ಚೇಂಬರ್ ಸಹ ಈ ಬಗ್ಗೆ ಸಭೆ ನಡೆಸಿ ತಾವು ಸೋನು ನಿಗಂ ವಿರುದ್ಧ ಅಸಹಕಾರ ಪ್ರದರ್ಶಿಸುವುದಾಗಿ ಹೇಳಿತು. ಕನ್ನಡಪರ ಸಂಘಟನೆಗಳು ಬೆಂಗಳೂರಿನ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಸೋನು ನಿಗಂ ವಿರುದ್ಧ ದೂರು ದಾಖಲಿಸಿದ್ದವು. ದೂರು ಸ್ವೀಕರಿಸಿದ್ದ ಪೊಲೀಸರು ಇ-ಮೇಲ್ ಮೂಲಕ ಸೋನು ನಿಗಂಗೆ ನೊಟೀಸ್ ಕಳಿಸಿದ್ದರು. ನೊಟೀಸ್ಗೆ ಉತ್ತರಿಸಲು ಏಳು ದಿನ ಗಡುವು ನೀಡಿದ್ದರು. ನೊಟೀಸ್ಗೆ ಉತ್ತರ ಬಾರದ ಕಾರಣ ಎರಡನೇ ನೊಟೀಸ್ ಕಳಿಸಲು ಪೊಲೀಸರು ಸಜ್ಜಾಗಿದ್ದಾರೆ.
ಇದನ್ನೂ ಓದಿ:‘ಕುಲದಲ್ಲಿ ಕೀಳ್ಯಾವುದೊ’ ಸಿನಿಮಾದಿಂದ ಸೋನು ನಿಗಂ ಹಾಡು ಡ್ರಾಪ್, ನಿರ್ದೇಶಕ ಹೇಳಿದ್ದಿಷ್ಟು?
ಪ್ರಕರಣ ಗಂಭೀರವಾಗುತ್ತಿದ್ದಂತೆ ಗಾಯಕ ಸೋನು ನಿಗಂ ಕನ್ನಡಿಗರ ಕ್ಷಮೆ ಕೇಳಿದರು. ಇದೀಗ ಸೋನು ನಿಗಂ ತಮ್ಮ ಮೇಲೆ ದಾಖಲಾಗಿರುವ ಪ್ರಕರಣವನ್ನು ರದ್ದು ಮಾಡಬೇಕು ಎಂದು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಸೋನು ನಿಗಂ ಅರ್ಜಿಯ ವಿಚಾರಣೆ ಶೀಘ್ರ ನಡೆಯಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ