‘ನನ್ನ ಚಿನ್ನಾರಿ ಮುತ್ತನಿಗೆ ಹೀಗೆ ಆಗಿದ್ದು ನನಗೆ ಆಘಾತ ತಂದಿದೆ’: ಸ್ಪಂದನಾ ನಿಧನಕ್ಕೆ ನಾಗಾಭರಣ ಪ್ರತಿಕ್ರಿಯೆ

| Updated By: ಮದನ್​ ಕುಮಾರ್​

Updated on: Aug 07, 2023 | 3:57 PM

Spandana Vijay Raghavendra: ‘ಆ ಕುಟುಂಬದ ಸುತ್ತ ನಿರಂತರವಾಗಿ ಇಂಥ ಛಾಯೆ ಆವರಿಸುತ್ತಿರುವುದು ಬಹಳ ದುಃಖದ ಸಂಗತಿ. ಯಾರನ್ನು ಕಳೆದುಕೊಳ್ಳಬಾರದು ಅಂದುಕೊಳ್ಳುತ್ತೇವೋ ಅವರನ್ನೇ ಕಳೆದುಕೊಳ್ಳುತ್ತಿದ್ದೇವೆ’ ಎಂದಿದ್ದಾರೆ ನಾಗಾಭರಣ.

‘ನನ್ನ ಚಿನ್ನಾರಿ ಮುತ್ತನಿಗೆ ಹೀಗೆ ಆಗಿದ್ದು ನನಗೆ ಆಘಾತ ತಂದಿದೆ’: ಸ್ಪಂದನಾ ನಿಧನಕ್ಕೆ ನಾಗಾಭರಣ ಪ್ರತಿಕ್ರಿಯೆ
ನಾಗಾಭರಣ, ವಿಜಯ್​ ರಾಘವೇಂದ್ರ, ಸ್ಪಂದನಾ
Follow us on

ನಟ ವಿಜಯ್​ ರಾಘವೇಂದ್ರ (Vijay Raghavendra) ಅವರು ಕನ್ನಡ ಚಿತ್ರರಂಗದಲ್ಲಿ ಚಿನ್ನಾರಿ ಮುತ್ತ ಎಂದೇ ಫೇಮಸ್​. ಈಗ ಅವರ ಜೀವನದಲ್ಲಿ ಶೋಕ ಆವರಿಸಿದೆ. ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ (Spandana Vijay Raghavendra) ನಿಧನರಾಗಿದ್ದಾರೆ. ವಿದೇಶಕ್ಕೆ ತೆರಳಿದ್ದ ಸ್ಪಂದನಾ ಅವರಿಗೆ ಭಾನುವಾರ (ಆಗಸ್ಟ್​ 6) ಹೃದಯಾಘಾತ ಸಂಭವಿಸಿತು. ಅವರ ಮೃತದೇಹವನ್ನು ಭಾರತಕ್ಕೆ ತರಲು ಸಿದ್ಧತೆ ನಡೆದಿದೆ. ಸ್ಪಂದನಾ ಅಗಲಿಕೆಯ ಸುದ್ದಿ ಕೇಳಿ ಇಡೀ ಚಿತ್ರರಂಗಕ್ಕೆ ಆಘಾತ ಆಗಿದೆ. ಅನೇಕ ಸೆಲೆಬ್ರಿಟಿಗಳು ಕಂಬನಿ ಮಿಡಿದಿದ್ದಾರೆ. ಚಂದನವನದ ಹಿರಿಯ ನಿರ್ದೇಶಕ ನಾಗಾಭರಣ ಕೂಡ ಸಂತಾಪ ಸೂಚಿಸಿದ್ದಾರೆ. ಬಾಲನಟನಾಗಿ ವಿಜಯ್​ ರಾಘವೇಂದ್ರ ಅಭಿನಯಿಸಿದ್ದ ‘ಚಿನ್ನಾರಿ ಮುತ್ತ’ ಸಿನಿಮಾಗೆ ನಾಗಭರಣ (Nagabharana) ನಿರ್ದೇಶನ ಮಾಡಿದ್ದರು. ವಿಜಯ್​ ರಾಘವೇಂದ್ರ ಪತ್ನಿಯನ್ನು ಕಳೆದುಕೊಂಡಿರುವುದು ತಮಗೆ ಆಘಾತ ತಂದಿದೆ ಎಂದು ನಾಗಾಭರಣ ಹೇಳಿದ್ದಾರೆ.

‘ಇದು ಬಹಳ ದುಃಖಕರವಾದ ಸಂಗತಿ. ವಿಜಯ್​ ರಾಘವೇಂದ್ರ ಜೊತೆ ನನಗೆ ಬಹಳ ದೊಡ್ಡ ಒಡನಾಟವಿದೆ. ನನ್ನ ಚಿನ್ನಾರಿ ಮುತ್ತನ ಬೆಳವಣಿಗೆಯನ್ನು ಕಾಣುತ್ತ ಬಂದವನು ನಾನು. ಅವನಿಗೆ ಈ ರೀತಿ ಆಗಿದ್ದು ನನಗೆ ಆಘಾತ ತಂದಿದೆ. ನಿನ್ನೆ (ಆಗಸ್ಟ್​ 6) ಅವನ ಮಗ ಶೌರ್ಯನ ಜೊತೆ ನನ್ನ ಕ್ಲಾಸ್​ ನಡೆಯುತ್ತಿತ್ತು. ಅದನ್ನು ಮುಗಿಸಿಕೊಂಡು ವಿಜಯ್​ ರಾಘವೇಂದ್ರ ಸಂಜೆ 5.30ಕ್ಕೆ ಮಗನನ್ನು ಕರೆದುಕೊಂಡು ಹೋದ. ನನಗೆ ಪ್ರತಿಕ್ರಿಯೆ ನೀಡಲು ಕೂಡ ಆಗುತ್ತಿಲ್ಲ’ ಎಂದು ನಾಗಾಭರಣ ಹೇಳಿದ್ದಾರೆ.

ಇದನ್ನೂ ಓದಿ: Spandana Vijay: ನಟ ವಿಜಯ್​ ರಾಘವೇಂದ್ರ ಸ್ಪಂದನಾ ಜತೆ ಕಳೆದ ಮಧುರ ಕ್ಷಣಗಳು

‘ಆ ಕುಟುಂಬದ ಸುತ್ತ ನಿರಂತರವಾಗಿ ಇಂಥ ಛಾಯೆ ಆವರಿಸುತ್ತಿರುವುದು ಬಹಳ ದುಃಖದ ಸಂಗತಿ. ಯಾರನ್ನು ಕಳೆದುಕೊಳ್ಳಬಾರದು ಅಂದುಕೊಳ್ಳುತ್ತೇವೋ ಅವರನ್ನೇ ಕಳೆದುಕೊಳ್ಳುತ್ತಿದ್ದೇವೆ. ಅಪ್ಪು ಇದ್ದಿದ್ದರೆ? ಸ್ಪಂದನಾ ಇದ್ದಿದ್ದರೆ? ಬಹಳ ಚಿಕ್ಕ ವಯಸ್ಸಿಗೆ ಅವರಿಗೆಲ್ಲ ಹೀಗೆ ಆಗಿದೆ. ಆ ಕುಟುಂಬದಲ್ಲೇ ಈ ರೀತಿ ಆಗುತ್ತಿದೆ ಎಂಬುದು ನೋವಿನ ಸಂಗತಿ’ ಎಂದಿದ್ದಾರೆ ನಾಗಾಭರಣ.

ಇದನ್ನೂ ಓದಿ: ಪುನೀತ್​ ನಿಧನದಿಂದ ಸ್ಪಂದನಾ ಮರಣದ ತನಕ ಡಾ. ರಾಜ್​ ಕುಟುಂಬದಲ್ಲಿ ಒಂದರ ಹಿಂದೊಂದು ದುರಂತ

ನಾಗಾಭರಣ ನಿರ್ದೇಶನ ಮಾಡಿದ್ದ ‘ಚಿನ್ನಾರಿ ಮುತ್ತ’ ಸಿನಿಮಾ 1993ರಲ್ಲಿ ತೆರೆಕಂಡಿತ್ತು. ಆ ಸಿನಿಮಾದಲ್ಲಿ ವಿಜಯ್​ ರಾಘವೇಂದ್ರ ಅವರು ಪ್ರಮುಖ ಪಾತ್ರ ಮಾಡಿ ‘ಅತ್ಯುತ್ತಮ ಬಾಲನಟ’ ರಾಜ್ಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಅಂದಿನಿಂದ ಅವರನ್ನು ಜನರು ‘ಚಿನ್ನಾರಿ ಮುತ್ತ’ ಎಂದು ಕರೆಯಲು ಆರಂಭಿಸಿದರು. ಆ ಚಿತ್ರಕ್ಕೆ ನಿರ್ದೇಶನ ಮಾಡಿದಾಗಿನಿಂದ ವಿಜಯ್​ ರಾಘವೇಂದ್ರ ಅವರ ಜೊತೆ ನಾಗಾಭರಣ ಒಡನಾಟ ಹೊಂದಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.