
ವಿಶೇಷ ಕಾನ್ಸೆಪ್ಟ್ ಹೊಂದಿರುವ ‘ಬಿಳಿಚುಕ್ಕಿ ಹಳ್ಳಿಹಕ್ಕಿ’ (Bili Chukki Halli Hakki) ಸಿನಿಮಾ ಅಕ್ಟೋಬರ್ 24ರಂದು ಬಿಡುಗಡೆ ಆಗಲಿದೆ. ‘ಮಹಿರಾ’ ಖ್ಯಾತಿಯ ಮಹೇಶ್ ಗೌಡ (Mahesh Gowda) ಅವರು ಈ ಸಿನಿಮಾದ ನಿರ್ಮಾಣ, ನಿರ್ದೇಶನ ಮಾಡಿ ನಟಿಸಿದ್ದಾರೆ. ‘ರೋರಿಂಗ್ ಸ್ಟಾರ್’ ಶ್ರೀಮುರಳಿ ಅವರು ಅರ್ಪಿಸುತ್ತಿದ್ದಾರೆ. ಈಗಾಗಲೇ ಹಾಡುಗಳ ಮೂಲಕ ಈ ಚಿತ್ರ ಗಮನ ಸೆಳೆದಿದೆ. ಈಗ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ. ಶ್ರೀಮುರಳಿ (Sri Murali) ಅವರು ಇತ್ತೀಚೆಗೆ ಟ್ರೇಲರ್ ಬಿಡುಗಡೆ ಮಾಡಿದರು. ಟ್ರೇಲರ್ ನೋಡಿದ ಅವರು ಚಿತ್ರತಂಡದ ಶ್ರಮ ಕಂಡು ಭೇಷ್ ಎಂದಿದ್ದಾರೆ.
ಭಾರತೀಯ ಚಿತ್ರರಂಗದಲ್ಲೇ ಮೊದಲ ಬಾರಿಗೆ ತೊನ್ನು ಸಮಸ್ಯೆಯ ಕುರಿತು ಮೂಡಿಬಂದಿರುವ ಸಿನಿಮಾ ‘ಬಿಳಿಚುಕ್ಕಿ ಹಳ್ಳಿಹಕ್ಕಿ’. ಶ್ರೀಮುರಳಿ ಅವರು ಅತ್ಯಂತ ಹುರುಪಿನಿಂದ ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದರು. ಸ್ವತಃ ತೊನ್ನು ಸಮಸ್ಯೆ ಹೊಂದಿರುವ ವ್ಯಕ್ತಿಯೇ ನಿರ್ದೇಶನ ಮಾಡಿ, ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡು ನಟಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿಟಿಲಿಗೋ ಕೇಂದ್ರಿತವಾದ ಈ ಚಿತ್ರವನ್ನು ಮನಸಾರೆ ಮೆಚ್ಚಿಕೊಂಡು ಹೆಮ್ಮೆಯಿಂದ ಅರ್ಪಿಸುತ್ತಿರುವುದಾಗಿ ಶ್ರೀಮುರಳಿ ಹೇಳಿದರು.
ಈ ವೇಳೆ ನೆನಪೊಂದನ್ನು ಅವರು ಹಂಚಿಕೊಂಡರು. ಶಾಲಾ ದಿನಗಳಲ್ಲಿ ವಿಟಿಲಿಗೋ ಸಮಸ್ಯೆಯ ಹೊಂದಿದ್ದ ಗೆಳೆಯನ ಬಗ್ಗೆ ಹೇಳಿದರು. ವಿಟಿಲಿಗೋವನ್ನು ಸಮಸ್ಯೆ ಅಂದುಕೊಳ್ಳಬಾರದು ಎಂಬ ಸಂದೇಶವನ್ನೂ ತಿಳಿಸಿದರು. ಇದೇ ವೇಳೆ ಈ ಸಿನಿಮಾದ ವಿತರಣೆಗೂ ಸಹಾಯ ಮಾಡುವುದಾಗಿ ಭರವಸೆ ನೀಡಿದರು. ನಿರ್ದೇಶಕ ಮಹೇಶ್ ಗೌಡ ಅವರು ಸಿನಿಮಾ ಬಗ್ಗೆ ಒಂದಷ್ಟು ವಿಚಾರಗಳನ್ನು ಹಂಚಿಕೊಂಡರು.
‘ವಿಟಿಲಿಗೋ ಸಮಸ್ಯೆಯ ಸುತ್ತ ಹೆಣೆದಿರುವ ಕಥೆ ಎಂದಮಾತ್ರಕ್ಕೆ ಮನರಂಜನೆ ಇರುವುದಿಲ್ಲ ಅಂತ ತಿಳಿದುಕೊಳ್ಳಬೇಕಿಲ್ಲ. ಇದೊಂದು ಪಕ್ಕಾ ಕಮರ್ಶಿಯಲ್ ಶೈಲಿಯ ಸಿನಿಮಾ. ಈ ರೀತಿಯ ಗಹನವಾದ ಕಥೆಯನ್ನು ಗಂಭೀರವಾಗಿ ಕಟ್ಟಿಕೊಟ್ಟರೆ ಪ್ರೇಕ್ಷಕರಿಗೆ ತಲುಪುವುದು ಕಷ್ಟ. ಹಾಗಾಗಿ ದುಗುಡವನ್ನೂ ಸಹ ತೆಳು ಹಾಸ್ಯದ ಮೂಲಕ ದಾಟಿಸಿ, ಸಾಮಾಜಿಕ ಸಂದೇಶ ನೀಡಲಾಗಿದೆ. ಕುಟುಂಬ ಸಮೇತ ಕುಳಿತು ನೋಡುವಂತಹ ಸಿನಿಮಾ ಇದು’ ಎಂದು ಮಹೇಶ್ ಗೌಡ ಹೇಳಿದ್ದಾರೆ.
ಇದನ್ನೂ ಓದಿ: ತೊನ್ನು ಸಮಸ್ಯೆ ಕುರಿತ ‘ಬಿಳಿಚುಕ್ಕಿ ಹಳ್ಳಿಹಕ್ಕಿ’ ಸಿನಿಮಾ ಅಕ್ಟೋಬರ್ 24ಕ್ಕೆ ಬಿಡುಗಡೆ
‘ಹೊನ್ನುಡಿ ಪ್ರೊಡಕ್ಷನ್ಸ್’ ಮೂಲಕ ಈ ಸಿನಿಮಾ ನಿರ್ಮಾಣ ಆಗಿದೆ. ಈ ಚಿತ್ರದಲ್ಲಿ ಕಾಜಲ್ ಕುಂದರ್ ಅವರು ನಾಯಕಿಯಾಗಿ ಅಭಿನಯಿಸಿದ್ದಾರೆ. ವೀಣಾ ಸುಂದರ್, ರವಿ ಭಟ್, ಜಹಾಂಗೀರ್ ಹಾಗೂ ಲಕ್ಷ್ಮಿ ಸಿದ್ದಯ್ಯ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಕಿರಣ್ ಸಿಹೆಚ್‌ಎಂ ಅವರ ಛಾಯಾಗ್ರಹಣ, ಮೊನಿಷ್ ಅವರ ಸಂಕಲನ, ರಿಯೋ ಆಂಟನಿ ಅವರ ಸಂಗೀತ ಈ ಚಿತ್ರಕ್ಕಿದೆ. ಅದಿತಿ ನಾರಾಯಣ್ ಹಾಗೂ ರಘು ಅವರು ನೃತ್ಯ ನಿರ್ದೇಶನ ಮಾಡಿದ್ದಾರೆ. ಪ್ರತಾಪ್ ನಾರಾಯಣ್ ಹಾಗೂ ಮಹೇಂದ್ರ ಗೌಡ ಸಾಹಿತ್ಯ ರಚಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.