ಶ್ರೀನಗರ ಕಿಟ್ಟಿ ನಟನೆಯ ‘ಗೌಳಿ’ (Gowli) ಈಗಾಗಲೇ ಹಲವು ಕಾರಣಗಳಿಗಾಗಿ ಸುದ್ದಿ ಮಾಡಿತ್ತು. ಈ ಚಿತ್ರದ ಮೂಲಕ ಕಿಟ್ಟಿ (Srinagar Kitty) ಕಮ್ಬ್ಯಾಕ್ ಮಾಡುತ್ತಿದ್ದಾರೆ ಎನ್ನುವುದು ಒಂದು ಕಾರಣವಾದರೆ, ಇದರಲ್ಲಿನ ಅವರ ಗೆಟಪ್ ತೀವ್ರ ಕುತೂಹಲ ಹುಟ್ಟುಹಾಕಿತ್ತು. ಇದೀಗ ಚಿತ್ರತಂಡ ಹೊಸ ಟೀಸರ್ ಬಿಡುಗಡೆ ಮಾಡಿದೆ. ಹಿಂದೆಂದೂ ಕಂಡಿರದ ಅವತಾರದಲ್ಲಿ ಕಿಟ್ಟಿ ಪ್ರೇಕ್ಷಕರ ಎದುರು ಬಂದಿದ್ದಾರೆ. ಅಲ್ಲದೇ ದೃಶ್ಯಾವಳಿಗಳು ಹಾಗೂ ಹಿನ್ನೆಲೆ ಸಂಗೀತದಿಂದಲೂ ಟೀಸರ್ ಗಮನ ಸೆಳೆದಿದೆ. ಸೂರ ನಿರ್ದೇಶನದ ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿಗೆ ಜತೆಯಾಗಿ ಪಾವನ ಗೌಡ, ರಂಗಾಯಣ ರಘು ಮೊದಲಾದವರು ಕಾಣಿಸಿಕೊಂಡಿದ್ದಾರೆ. ಟೀಸರ್ ಅನ್ನು ಇಂದು (ಫೆ.02) ಬಿಡುಗಡೆ ಮಾಡಲಾಗಿದ್ದು, ಕಾರ್ಯಕ್ರಮದಲ್ಲಿ ಸ್ಯಾಂಡಲ್ವುಡ್ ತಾರೆಯರು ಉಪಸ್ಥಿತರಿದ್ದರು. ಗೋಲ್ಡನ್ ಸ್ಟಾರ್ ಗಣೇಶ್, ಪ್ರೇಮ್, ದುನಿಯಾ ವಿಜಯ್, ಪ್ರಜ್ವಲ್ ದೇವರಾಜ್ ಮೊದಲಾದ ತಾರೆಯರು ಟೀಸರ್ ವೀಕ್ಷಿಸಿ ಶ್ರೀನಗರ ಕಿಟ್ಟಿ ಹೊಸ ಗೆಟಪ್ಗೆ ಶಹಬ್ಬಾಸ್ ಎಂದಿದ್ದಲ್ಲದೇ, ಚಿತ್ರತಂಡಕ್ಕೆ ಶುಭಕೋರಿದ್ದಾರೆ.
‘ಗೌಳಿ’ ಟೀಸರ್ನಲ್ಲಿ ಖಡಕ್ ಸಂಭಾಷಣೆ ಇದೆ. ಮಾಸ್ ದೃಶ್ಯಗಳೂ ಸಾಕಷ್ಟಿವೆ. ಇದಲ್ಲದೇ ಕುಟುಂಬವೊಂದರ ಕತೆ ಇದು ಎಂಬುದನ್ನು ಟೀಸರ್ ಸೂಚ್ಯವಾಗಿ ತಿಳಿಸುತ್ತದೆ. ಪಕ್ಕಾ ಫ್ಯಾಮಿಲಿ ಮ್ಯಾನ್ ರೂಪದಲ್ಲಿ ಶ್ರೀನಗರ ಕಿಟ್ಟಿ ತಮ್ಮ ಕುಟುಂಬದೊಂದಿಗಿರುವ ತುಣುಕೊಂದೂ ಟೀಸರ್ನಲ್ಲಿದೆ. ಒಟ್ಟಿನಲ್ಲಿ ಚಿತ್ರದ ಬಗ್ಗೆ ಸೂಕ್ಷ್ಮ ಪರಿಚಯ ಮಾಡಿಕೊಡುತ್ತಾ, ಚಿತ್ರದ ಬಗ್ಗೆ ಕುತೂಹಲ ಮೂಡಿಸುವಲ್ಲಿ ಟೀಸರ್ ಯಶಸ್ವಿಯಾಗಿದೆ.
ಅಭಿಮಾನಿಗಳಿಂದ ಮೆಚ್ಚುಗೆಗೆ ಪಾತ್ರವಾಗುತ್ತಿರುವ ‘ಗೌಳಿ’ ಟೀಸರ್ ಇಲ್ಲಿದೆ:
ಸೋಹಮ್ ಫಿಲ್ಮ್ ಫ್ಯಾಕ್ಟರಿ ಬ್ಯಾನರ್ನಲ್ಲಿ ರಘು ಸಿಂಗಮ್ ಚಿತ್ರವನ್ನು ನಿರ್ಮಿಸಿದ್ದು, ಅವರಿಗೆ ನಾಗೇಶ್ ಬಿಎಸ್ ಹಾಗೂ ಆರ್ಎಂ ರಾಜು ಸಹಕಾರ ನೀಡಿದ್ದಾರೆ. ಚಿತ್ರಕ್ಕೆ ಶಶಾಂಕ್ ಶೇಶಗಿರಿ ಸಂಗೀತ ನೀಡಿದ್ದು, ಸಂದೀಪ್ ವಲ್ಲೂರಿ ಛಾಯಾಗ್ರಹಣ ಮಾಡಿದ್ದಾರೆ. ಶರತ್ ಲೋಹಿತಾಶ್ವ, ಯಶ್ ಶೆಟ್ಟಿ, ಗೋವಿಂದೇ ಗೌಡ, ಸುಧಿ, ಗುರುದೇಶಪಾಂಡೆ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
‘ಗೌಳಿ’ ಚಿತ್ರದ ಬಗ್ಗೆ ಕುತೂಹಲಕರ ವಿಚಾರ ಹಂಚಿಕೊಂಡ ನಿರ್ದೇಶಕ ಸೂರ:
‘ಗೌಳಿ’ ಜನಾಂಗ ಮಹಾರಾಷ್ಟ್ರದಿಂದ ವಲಸೆ ಬಂದವರು. ಸಿದ್ದಿ ಜನಾಂಗದಂತೆಯೇ ಶಿರಸಿ, ಯಲ್ಲಾಪುರ ಈ ಭಾಗದಲ್ಲಿ ಗೌಳಿ ಜನರೂ ಇದ್ದಾರೆ. ಅವರ ಮಾತೃಭಾಷೆ ಕನ್ನಡವಲ್ಲ. ‘ಗೌಳಿ’ ಚಿತ್ರ ನೈಜ ಘಟನೆಗಳನ್ನು ಆಧರಿಸಿ ತಯಾರಾಗಿದೆ. ಆದರೆ ಆ ಘಟನೆಗಳು ನಡೆದಿರುವುದು ಬೇರೆಡೆ. ಅದನ್ನು ಗೌಳಿ ಜನಾಂಗದ ಹಿನ್ನೆಲೆಯಲ್ಲಿ ಕಟ್ಟಿಕೊಡಲಾಗಿದೆ ಎಂದು ನಿರ್ದೇಶಕ ಸೂರ ಮಾಹಿತಿ ನೀಡಿದ್ದಾರೆ.
ಶ್ರೀನಗರ ಕಿಟ್ಟಿಯವರೇ ಈ ಪಾತ್ರ ನಿರ್ವಹಿಸಬೇಕು ಎಂಬ ಆಸೆ ಇತ್ತು. ಅವರಲ್ಲಿ ಮೊದಲೇ ಪಾತ್ರಕ್ಕೆ ಬೇಕಾಗುವ ಗೆಟಪ್ ಸ್ವಲ್ಪ ಇತ್ತು. ನಂತರ ಚಿತ್ರಕ್ಕೆ ಬೇಕಾಗುವಂತೆ ತುಸು ಬದಲಿಸಲಾಯಿತು. ಅಲ್ಲಿಂದ ಚಿತ್ರೀಕರಣಕ್ಕೆ ತೆರಳಿದೆವು ಎಂದು ಸೂರ ನುಡಿದಿದ್ದಾರೆ.
ಇದನ್ನೂ ಓದಿ:
ಹೊಸ ಅವತಾರದಲ್ಲಿ ಪ್ರೇಕ್ಷಕರ ಎದುರು ಬಂದ ಶ್ರೀನಗರ ಕಿಟ್ಟಿ
MS Dhoni: ಮಾಸ್ ಅವತಾರದಲ್ಲಿ ಕಾಣಿಸಿಕೊಂಡ ಧೋನಿ; ಏನಿದು? ಇಲ್ಲಿದೆ ಹೊಸ ಸಮಾಚಾರ
Published On - 8:03 pm, Wed, 2 February 22