
ರಾಜ್ ಬಿ ಶೆಟ್ಟಿ (Raj B Shetty) ನಿರ್ಮಾಣ ಮಾಡಿ ಜೆಪಿ ತುಮ್ಮಿನಾಡ್ ನಿರ್ದೇಶನ ಮಾಡಿರುವ ‘ಸು ಫ್ರಂ ಸೋ’ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ. ಬೆಂಗಳೂರಿನ ಪ್ರೇಕ್ಷಕರಿಗೆ ಸಿನಿಮಾ ನೋಡಲು ಟಿಕೆಟ್ ಸಹ ಸಿಗುತ್ತಿಲ್ಲ ಭಾನುವಾರದ ಶೋಗಳು ಬಹುತೇಕ ಮುಂಗಡವಾಗಿ ಬುಕ್ ಆಗಿಬಿಟ್ಟಿವೆ. ನೋಡಿದ ಪ್ರೇಕ್ಷಕರೆಲ್ಲ ಸಿನಿಮಾ ಮೆಚ್ಚಿಕೊಳ್ಳುತ್ತಿದ್ದಾರೆ. ಸಿನಿಮಾ ತಮ್ಮ ಕಂಟೆಂಟ್ ಇಂದಾಗಿಯೇ ಗಡಿಗಳನ್ನು ದಾಟಿ ಪರ ರಾಜ್ಯದ ಪ್ರೇಕ್ಷಕರನ್ನು ರಂಜಿಸಲು ಹೊರಟಿದೆ.
ಆಗಸ್ಟ್ 1 ರಂದು ‘ಸು ಫ್ರಂ ಸೋ’ ಸಿನಿಮಾ ಇದೇ ಹೆಸರಿನಲ್ಲಿ ಕೇರಳದಲ್ಲಿ ಬಿಡುಗಡೆ ಆಗುತ್ತಿದೆ. ಸಿನಿಮಾಕ್ಕೆ ದುಲ್ಕರ್ ಸಲ್ಮಾನ್ ಬೆಂಬಲ ನೀಡಿದ್ದು, ಅವರ ಒಡೆತನದ ವೇಫೆರರ್ ಫಿಲಮ್ಸ್ ವತಿಯಿಂದ ಕೇರಳದಾದ್ಯಂತ ಸಿನಿಮಾ ವಿತರಣೆ ಮಾಡಲಿದೆ. ಇದೀಗ ‘ಸು ಫ್ರಂ ಸೋ’ ಸಿನಿಮಾ ಉತ್ತರ ಭಾರತಕ್ಕೂ ಹೊರಟಿದೆ. ‘ಕಾಂತಾರ’, ‘ಕೆಜಿಎಫ್’, ‘ಪುಷ್ಪ’ ಇನ್ನೂ ಹಲವು ದೊಡ್ಡ ಬಜೆಟ್ನ ದಕ್ಷಿಣದ ಸಿನಿಮಾಗಳನ್ನು ಉತ್ತರ ಭಾರತದಲ್ಲಿ ಬಿಡುಗಡೆ ಮಾಡಿರುವ ದೊಡ್ಡ ಸಂಸ್ಥೆಯೊಂದು ಈಗ ‘ಸು ಫ್ರಂ ಸೋ’ ಸಿನಿಮಾವನ್ನು ಉತ್ತರ ಭಾರತದ ರಾಜ್ಯಗಳ ಪ್ರೇಕ್ಷಕರಿಗೆ ತಲುಪಿಸಲು ಮುಂದೆ ಬಂದಿದೆ.
ಅನಿಲ್ ಟಂಡಾನಿ ಒಡೆತನದ ಎಎ ಫಿಲಮ್ಸ್ ಇದೀಗ ‘ಸು ಫ್ರಂ ಸೋ’ ಸಿನಿಮಾದ ಉತ್ತರ ಭಾರತ ಸಿನಿಮಾ ಬಿಡುಗಡೆ ಹಕ್ಕನ್ನು ಖರೀದಿ ಮಾಡಿದ್ದು, ಸಿನಿಮಾದ ಹಿಂದಿ ಆವೃತ್ತಿಯನ್ನು ಉತ್ತರ ಭಾರತದಲ್ಲಿ ಬಿಡುಗಡೆ ಮಾಡಲು ಯೋಜನೆ ಹಾಕಿಕೊಂಡಿದೆ. ಮೂಲಗಳ ಪ್ರಕಾರ ಈ ಹಿಂದೆ ಸಿನಿಮಾ ಅನ್ನು ಮಲಯಾಳಂ ಭಾಷೆಗೆ ಮಾತ್ರವೇ ಡಬ್ ಮಾಡಲಾಗಿತ್ತು. ಈಗ ಬೇಡಿಕೆ ಬಂದಿರುವ ಕಾರಣ ಹಿಂದಿಯಲ್ಲೂ ಡಬ್ ಮಾಡಲಾಗಿದ್ದು, ಕೆಲವೇ ದಿನಗಳಲ್ಲಿ ಉತ್ತರ ಭಾರತದಾದ್ಯಂತ ಸಿನಿಮಾ ಬಿಡುಗಡೆ ಆಗಲಿದೆ.
ಇದನ್ನೂ ಓದಿ:Su From So Collection: ಕೋಟಿ ಕೋಟಿ ಬಾಚಿಕೊಂಡು ದಾಖಲೆ ಮಾಡುತ್ತಿದೆ ‘ಸು ಫ್ರಮ್ ಸೋ’ ಸಿನಿಮಾ
‘ಸು ಫ್ರಂ ಸೋ’ ಸಿನಿಮಾ ಈ ನಾಗಾಲೋಟ ‘ಕಾಂತಾರ’ ಸಿನಿಮಾವನ್ನು ನೆನಪಿಸುತ್ತಿದೆ. ‘ಕಾಂತಾರ’ ಸಿನಿಮಾ ಸಹ ಕೇವಲ ಕನ್ನಡದಲ್ಲಿ ಮೊದಲಿಗೆ ಬಿಡುಗಡೆ ಆಯ್ತು. ಮೊದಲಿಗೆ ಕೆಲವೇ ಶೋಗಳೊಟ್ಟಿಗೆ ಆರಂಭವಾದ ಸಿನಿಮಾದ ಪಯಣ ಆ ನಂತರ ಸಿನಿಮಾವನ್ನು ದೇಶ-ವಿದೇಶಗಳಿಗೆ ಚಾಚಿಕೊಂಡಿತು. ‘ಸು ಫ್ರಂ ಸೋ’ ಸಿನಿಮಾ ಸಹ ಅದೇ ಹಾದಿಯಲ್ಲಿದೆ. ಕೇವಲ ಕಂಟೆಂಟ್ ಇಂದಾಗಿ ಸಿನಿಮಾ ಈಗ ರಾಜ್ಯದ ಗಡಿಯನ್ನು ದಾಟಿದ್ದು, ಮುಂದೆ ದೇಶದ ಗಡಿಯನ್ನು ದಾಟಿ ಹೊರ ದೇಶಗಳಲ್ಲಿಯೂ ಪ್ರದರ್ಶನ ಕಾಣುವ ಸಾಧ್ಯತೆ ಇದೆ.
‘ಸು ಫ್ರಂ ಸೋ’ ಸಿನಿಮಾ ಅನ್ನು ರಾಜ್ ಬಿ ಶೆಟ್ಟಿ ನಿರ್ದೇಶಿಸಿದ್ದು, ಜೆಪಿ ತುಮ್ಮಿನಾಡ್ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಕರಾವಳಿಯ ಹಲವಾರು ಕಲಾವಿದರು ನಟಿಸಿದ್ದಾರೆ. ಸಿನಿಮಾ ಹಾರರ್ ಕಾಮಿಡಿ ಜಾನರ್ನದ್ದಾಗಿದ್ದು, ಸಿನಿಮಾದ ಹಾಸ್ಯ ಪ್ರೇಕ್ಷಕರಿಗೆ ಬಹುವಾಗಿ ಇಷ್ಟವಾಗಿದೆ. ಸಿನಿಮಾ ಬಿಡುಗಡೆ ಆದ ಮೊದಲ ದಿನ ಕೇವಲ 80 ಲಕ್ಷ ಗಳಿಸಿತ್ತು. ಆದರೆ ಎರಡನೇ ದಿನ ಮೂರು ಕೋಟಿಗೂ ಹೆಚ್ಚು ಮೊತ್ತ ಬಾಚಿಕೊಂಡಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ