
ರಾಜ್ ಬಿ ಶೆಟ್ಟಿ (Raj B Shetty) ನಿರ್ಮಿಸಿ, ಜೆಪಿ ತುಮ್ಮಿನಾಡ್ ನಿರ್ದೇಶನ ಮಾಡಿರುವ ‘ಸು ಫ್ರಂ ಸೋ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ದಾಖಲೆಗಳನ್ನು ಬರೆಯುತ್ತಿದೆ. ಕಡಿಮೆ ಬಜೆಟ್ನಲ್ಲಿ, ಕಡಿಮೆ ಅವಧಿಯಲ್ಲಿ, ಸರಳವಾದ ಕತೆಯೊಂದಿಗೆ, ಯಾವುದೇ ಸ್ಟಾರ್ ನಟರುಗಳಿಲ್ಲದೆ ಸರಳವಾಗಿ ನಿರ್ಮಿಸಲಾಗಿರುವ ‘ಸು ಫ್ರಂ ಸೋ’ ಸಿನಿಮಾ ಕನ್ನಡಿಗರ ಮನಸೂರೆಗೊಳಿಸಿದೆ. ಸಿನಿಮಾದ ಕಲೆಕ್ಷನ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಸಾಗುತ್ತಿದೆ.
ಈ ಸಿನಿಮಾ, ಕನ್ನಡದಲ್ಲಿ ಭಾರಿ ಯಶಸ್ವಿಯಾದ ಬಳಿಕ ಇತ್ತೀಚೆಗಷ್ಟೆ ಕೇರಳಕ್ಕೂ ಕಾಲಿಟ್ಟಿದೆ. ಆಗಸ್ಟ್ 1 ರಂದು ಸಿನಿಮಾದ ಮಲಯಾಳಂ ಆವೃತ್ತಿ ಕೇರಳ ರಾಜ್ಯದಲ್ಲಿ ಅದ್ಧೂರಿಯಾಗಿ ಬಿಡುಗಡೆ ಆಗಿದ್ದು, ಅಲ್ಲಿಯೂ ಸಹ ಜನಪ್ರೇಮ ಗಳಿಸಿಕೊಂಡಿದೆ. ಮಲಯಾಳಂ ಪ್ರೇಕ್ಷಕರು ಸಹ ‘ಸು ಫ್ರಂ ಸೋ’ ಸಿನಿಮಾವನ್ನು ಅಪ್ಪಿ ಸ್ವಾಗತಿಸಿದ್ದಾರೆ. ಇದೀಗ ಈ ಸಿನಿಮಾ ಮತ್ತೊಂದು ನೆರೆಯ ರಾಜ್ಯಕ್ಕೆ ಕಾಲಿಡುತ್ತಿದ್ದು, ಬಿಡುಗಡೆ ದಿನಾಂಕ ಘೋಷಣೆಯಾಗಿದೆ.
ನೆರೆಯ ತೆಲುಗು ರಾಜ್ಯಗಳಾದ ಆಂಧ್ರ ಪ್ರದೇಶ ಮತ್ತು ತೆಲಂಗಾಣಗಳಲ್ಲಿ ‘ಸು ಫ್ರಂ ಸೋ’ ಬಿಡುಗಡೆ ಆಗುತ್ತಿದೆ. ಸಿನಿಮಾದ ತೆಲುಗು ಆವೃತ್ತಿ ಆಂಧ್ರ ಮತ್ತು ತೆಲಂಗಾಣಗಳಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಆಗಸ್ಟ್ 8 ರಂದು ‘ಸು ಫ್ರಂ ಸೋ’ ಸಿನಿಮಾ ಆಂಧ್ರ ಮತ್ತು ತೆಲಂಗಾಣಗಳಲ್ಲಿ ಏಕಕಾಲಕ್ಕೆ ತೆಲುಗಿನಲ್ಲಿ ಬಿಡುಗಡೆ ಆಗಲಿದೆ.
‘ಪುಷ್ಪ’, ‘ಪುಷ್ಪ 2’ ಸೇರಿದಂತೆ ಅನೇಕ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಹಾಗೂ ಹಲವಾರು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ವಿತರಣೆ ಮಾಡಿರುವ ಮೈತ್ರಿ ಮೂವಿ ಮೇಕರ್ಸ್ನವರು ‘ಸು ಫ್ರಂ ಸೋ’ ಸಿನಿಮಾವನ್ನು ತೆಲುಗಿನಲ್ಲಿ ವಿತರಣೆ ಮಾಡಲಿದ್ದಾರೆ. ತೆಲುಗಿನಲ್ಲಿಯೂ ಸಹ ‘ಸು ಫ್ರಂ ಸೋ’ ಹೆಸರಿನಲ್ಲಿಯೇ ಸಿನಿಮಾ ಬಿಡುಗಡೆ ಆಗಲಿದೆ. ಕನ್ನಡ ಮತ್ತು ಮಲಯಾಳಂನಲ್ಲಿ ದೊರೆತ ಯಶಸ್ಸು ತೆಲುಗಿನಲ್ಲಿ ಈ ಸಿನಿಮಾಕ್ಕೆ ಸಿಗುತ್ತದೆಯೋ ಇಲ್ಲವೊ ಕಾದು ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ