ಚೆನ್ನೈನಲ್ಲಿ ಹೃದಯ ಗೆದ್ದು ಮಾದರಿಯಾದ ಸುದೀಪ್: ನಡೆದಿದ್ದೇನು?

Kichcha Sudeep movie: ಕಿಚ್ಚ ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದ್ದು, ಸಿನಿಮಾದ ಪ್ರಚಾರಾರ್ಥ ಚೆನ್ನೈನಲ್ಲಿ ಇತ್ತೀಚೆಗಷ್ಟೆ ಸುದ್ದಿಗೋಷ್ಠಿ ನಡೆಸಲಾಗಿತ್ತು. ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರೊಬ್ಬರು ಉದ್ದೇಶಪೂರ್ವಕವಾಗಿ ವಿವಾದಾತ್ಮಕ ಪ್ರಶ್ನೆ ಕೇಳಿದಾಗ ಸುದೀಪ್ ಕೊಟ್ಟ ಉತ್ತರ ಅಲ್ಲಿದ್ದವರ ಮನಸ್ಸು ಗೆದ್ದಿದೆ.

ಚೆನ್ನೈನಲ್ಲಿ ಹೃದಯ ಗೆದ್ದು ಮಾದರಿಯಾದ ಸುದೀಪ್: ನಡೆದಿದ್ದೇನು?
Mark Sudeep

Updated on: Dec 16, 2025 | 12:50 PM

ಸುದೀಪ್ (Sudeep) ನಟನೆಯ ‘ಮಾರ್ಕ್’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾವನ್ನು ಕನ್ನಡ ಮಾತ್ರವಲ್ಲದೆ ಇತರೆ ಭಾಷೆಗಳಲ್ಲಿಯೂ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದ್ದು, ಇತ್ತೀಚೆಗಷ್ಟೆ ಚೆನ್ನೈನಲ್ಲಿ ಸಿನಿಮಾದ ಪ್ರಚಾರ ಕಾರ್ಯ ನಡೆದಿತ್ತು, ಕಾರ್ಯಕ್ರಮದಲ್ಲಿ ಸುದೀಪ್, ತಮಿಳು ನಟ ಯೋಗಿ ಇನ್ನೂ ಹಲವರು ಭಾಗವಹಿಸಿದ್ದರು. ಸುದ್ದಗೋಷ್ಠಿಯಲ್ಲಿ ಸುದೀಪ್ ಅವರಿಗೆ ತಮಿಳು ಪತ್ರಕರ್ತರು ಥರ-ಥರದ ಪ್ರಶ್ನೆಗಳನ್ನು ಕೇಳಿದರು. ಆದರೆ ಸುದೀಪ್ ನೀಡಿದ ಉತ್ತರ ಖಡಕ್ ಆಗಿತ್ತು. ಮಾತ್ರವಲ್ಲದೆ, ಉದ್ದೇಶಪೂರ್ವಕವಾಗಿ ವಿವಾದಾತ್ಮಕ ಪ್ರಶ್ನೆ ಕೇಳಿದ ಪತ್ರಕರ್ತನ ಬಾಯಿ ಮುಚ್ಚಿಸಿದರು ಸುದೀಪ್.

‘ಮಾರ್ಕ್’ ಸಿನಿಮಾನಲ್ಲಿ ನಾಯಕಿಯಾಗಿರುವ ದೀಪ್ಷಿಕಾ ಮತ್ತು ರೋಷನಿ ಅವರುಗಳು ಸಹ ಚೆನ್ನೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು. ನಟಿಯೊಬ್ಬರಿಗೆ ಪ್ರಶ್ನೆ ಕೇಳಿದ ಪತ್ರಕರ್ತರೊಬ್ಬರು, ‘ಸಿನಿಮಾದ ಟ್ರೈಲರ್ ಚೆನ್ನಾಗಿದೆ, ಆದರೆ ನಿಮ್ಮ ಪಾತ್ರ ಹೇಗಿದೆ, ಈಗ ವೇದಿಕೆ ಮೇಲೆ ನಿಮ್ಮನ್ನು ಸೈಡಿನಲ್ಲಿ ಕುಳಿಸಿರುವಂತೆ ಸಿನಿಮಾನಲ್ಲಿಯೂ ನಿಮ್ಮನ್ನು ಸೈಡ್ ಲೈನ್ ಮಾಡಲಾಗಿದೆಯೇ?’ ಎಂದು ಉದ್ದೇಶಪೂರ್ವಕವಾಗಿ ಪ್ರಚೋದನಾತ್ಮಕ ಪ್ರಶ್ನೆಯನ್ನು ಪತ್ರಕರ್ತ ಕೇಳಿದರು.

ಇದನ್ನೂ ಓದಿ:‘ಮಾರ್ಕ್’ ಚಿತ್ರದ ಹೊಸ ಹಾಡು: ಸುದೀಪ್ ಜತೆ ನಿಶ್ವಿಕಾ ನಾಯ್ಡು ಮಸ್ತ್ ಡ್ಯಾನ್ಸ್

ಪತ್ರಕರ್ತನ ಪ್ರಶ್ನೆಯಿಂದ ನಟಿ ಗಾಬರಿಗೊಳಗಾದರು ಏಕೆಂದರೆ ವೇದಿಕೆ ಮೇಲೆ ಅವರನ್ನು ಸೈಡ್ ಲೈನ್ ಮಾಡಿರಲಿಲ್ಲ ಬದಲಿಗೆ ಎಲ್ಲರಿಗೂ ಒಂದೇ ರೀತಿಯ ಕುರ್ಚಿ ಹಾಕಿ, ಒಂದೇ ಸಾಲಿನಲ್ಲಿಯೇ ಕೂರಿಸಲಾಗಿತ್ತು. ಪತ್ರಕರ್ತನ ಪ್ರಶ್ನೆಗೆ ಏನೆಂದು ಉತ್ತರಿಸಬೇಕೆಂದು ನಟಿ ಗೊಂದಲಕ್ಕೊಳಗಾದರು, ಕೂಡಲೇ ಮಧ್ಯ ಪ್ರವೇಶಿಸಿದ ಸುದೀಪ್, ‘ಸಿನಿಮಾನಲ್ಲಿ ನಟಿಯರ ಪಾತ್ರ ಬಹಳ ಚೆನ್ನಾಗಿದೆ, ನಿಮಗೆ ಅವರನ್ನು ಸಾಲಿನ ಕೊನೆಯಲ್ಲಿ ಕೂರಿಸುವುದು ಕಷ್ಟವಾದರೆ ನಾನೇ ಅಲ್ಲಿ ಕುಳಿತುಕೊಳ್ಳುತ್ತೇನೆ’ ಎಂದವರೇ ನಟಿಯರಿಬ್ಬರನ್ನೂ ಮಧ್ಯದಲ್ಲಿ ಕೂರಿಸಿ ತಾವು ಹೋಗಿ ನಟಿಯರು ಕೂತಿದ್ದ ಜಾಗದಲ್ಲಿ ಕುಳಿತುಕೊಂಡರು. ಕೂಡಲೇ ಅಲ್ಲಿ ನೆರೆದಿದ್ದವರೆಲ್ಲ ಚಪ್ಪಾಳಿ ತಟ್ಟಿ ಅಭಿನಂದಿಸಿದರು.

ಬಳಿಕ ಮಾತನಾಡಿದ ಸುದೀಪ್, ‘ಸಿನಿಮಾದಲ್ಲಿ ನಾಯಕಿಯರಿಗೆ ಬಹಳ ಒಳ್ಳೆಯ ಪಾತ್ರವನ್ನು ನೀಡಲಾಗಿದೆ. ಈ ಕಾರ್ಯಕ್ರಮ ಒಂದು ರೀತಿಯ ಸಂಭ್ರಮ, ಈ ಸಂಭ್ರಮವನ್ನು ಇಂಥಹಾ ಪ್ರಶ್ನೆಗಳ ಮೂಲಕ ಹಾಳು ಮಾಡಬೇಡಿ’ ಎಂದು ನೇರವಾಗಿಯೇ ಹೇಳಿದ್ದಾರೆ ನಟ ಸುದೀಪ್. ಕಿಚ್ಚನ ಖಡಕ್ ಉತ್ತರಕ್ಕೆ ತಮಿಳು ಪತ್ರಕರ್ತರು ದಂಗಾಗಿದ್ದಾರೆ. ಇದೀಗ ಕಿಚ್ಚ ಸುದೀಪ್ ಅವರು, ಚೆನ್ನೈನಲ್ಲಿ ನೀಡಿದ ಉತ್ತರಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

ಕೆಲವು ತಮಿಳು ಸಿನಿಮಾ ಸೆಲೆಬ್ರಿಟಿಗಳು, ತಮಿಳುನಾಡಿನ ಸಿನಿಮಾ ಪ್ರೇಮಿಗಳು ಸಹ ಸುದೀಪ್ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ದನಿ ಎತ್ತಿದ್ದು, ಪರಭಾಷೆಯವರು ಬಂದಾಗಾದರೂ ಅವರೊಟ್ಟಿಗೆ ಗೌರವದೊಂದಿಗೆ ನಡೆದುಕೊಳ್ಳಿ ಎಂದು ಪತ್ರಕರ್ತರನ್ನು ಆಗ್​ರಹಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ