ಸುದೀಪ್ ‘ಮಾರ್ಕ್’ ಸಿನಿಮಾ ತುಳಿಯಲು ‘ಟಿವಿ9 ಕನ್ನಡ’ ಹೆಸರು ದುರ್ಬಳಕೆ ಮಾಡಿಕೊಂಡ ಕಿಡಿಗೇಡಿಗಳು

ಸುದೀಪ್ ನಟನೆಯ 'ಮಾರ್ಕ್' ಸಿನಿಮಾದ ಬಗ್ಗೆ TV9 ಕನ್ನಡ ಹೆಸರಿನಲ್ಲಿ ಕಿಡಿಗೇಡಿಗಳು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ನಿರ್ದೇಶಕ ವಿಜಯ್ ಕಾರ್ತಿಕೇಯನ್ ವಿರುದ್ಧ ಅಪಪ್ರಚಾರ ಮಾಡಲಾಗಿದೆ. ಇದು ಸಂಪೂರ್ಣ ಸುಳ್ಳು. TV9 ಕನ್ನಡ ಇಂತಹ ಯಾವುದೇ ಸುದ್ದಿಯನ್ನು ಪ್ರಕಟಿಸಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿರುವ ಈ ನಕಲಿ ಪೋಸ್ಟ್‌ ಬಗ್ಗೆ ಇಲ್ಲಿ ಸಂಪೂರ್ಣ ಸ್ಪಷ್ಟನೆ ನೀಡಲಾಗಿದೆ.

ಸುದೀಪ್ ‘ಮಾರ್ಕ್’ ಸಿನಿಮಾ ತುಳಿಯಲು ‘ಟಿವಿ9 ಕನ್ನಡ’ ಹೆಸರು ದುರ್ಬಳಕೆ ಮಾಡಿಕೊಂಡ ಕಿಡಿಗೇಡಿಗಳು
ಹರಿಬಿಡಲಾದ ಫೇಕ್ ಪೋಸ್ಟ್

Updated on: Dec 22, 2025 | 7:08 AM

ಸೋಶಿಯಲ್ ಮೀಡಿಯಾ ಜಗತ್ತಲ್ಲಿ ಸುಳ್ಳು ಸುದ್ದಿ ಹಬ್ಬಿಸೋದು ದೊಡ್ಡ ವಿಷಯವೇ ಅಲ್ಲ. ಯಾವುದೋ ಒಂದು ಪೋಸ್ಟ್​ನ ಎಡಿಟ್ ಮಾಡಿ ಹಂಚಿಕೊಂಡರೆ ಸಾಕು ಒಂದಷ್ಟು ಮಂದಿ ಅದನ್ನೇ ಸತ್ಯ ಎಂದು ನಂಬುತ್ತಾರೆ. ಇದೇ ರೀತಿ ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾ (Mark Movie) ಬಗ್ಗೆ ಅಪಪ್ರಚಾರ ಮಾಡಲು ‘ಟಿವಿ9 ಕನ್ನಡ’ ಹೆಸರನ್ನು ಕೆಲವು ಕಿಡಿಗೇಡಿಗಳು ದುರ್ಬಳಕೆ ಮಾಡಿಕೊಂಡಿದ್ದಾರೆ. ಆ ಬಗ್ಗೆ ಇಲ್ಲಿದೆ ಸ್ಪಷ್ಟನೆ.

ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ಸಾಧಾರಣ ಗಳಿಕೆ ಮಾಡಿದೆ. ಈ ಸಿನಿಮಾ ರಿಲೀಸ್ ಆಗಿ ಎರಡು ವಾರಗಳ ಬಳಿಕ ‘ಮಾರ್ಕ್’ ಸಿನಿಮಾ ರಿಲೀಸ್ (ಡಿಸೆಂಬರ್ 25) ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ ವಾರ ಸೃಷ್ಟಿ ಆಗಿದೆ. ಹೀಗಿರುವಾಗಲೇ ‘ಮಾರ್ಕ್’ ಬಗ್ಗೆ ಅಪಪ್ರಚಾರ ಮಾಡಲಾಗಿದೆ. ಅದೂ ಟಿವಿ9 ಕನ್ನಡ ಹೆಸರಲ್ಲಿ.

ಫೇಸ್​ಬುಕ್ ಪೋಸ್ಟ್ ಒಂದನ್ನು ವೈರಲ್ ಮಾಡಲಾಗಿದೆ. ಈ ಪೋಸ್ಟ್​ನಲ್ಲಿ ಟಿವಿ9 ಕನ್ನಡದ ಲೋಗೋ ಇದೆ. ಕೆಳ ಭಾಗದಲ್ಲಿ ‘ಕಾವೇರಿ ನೀರು ಎಂದಿಗೂ ತಮಿಳರಿಗೆ ಸೇರಿದ್ದು ಎಂದು ತಮಿಳು ನಾಡಿನ ಖಾಸಗಿ ಮಾಧ್ಯಮದಲ್ಲಿ ನಾಲಿಗೆ ಹರಿಬಿಟ್ಟ ಸುದೀಪ್ ಮಾರ್ಕ್ ಸಿನಿಮಾದ ನಿರ್ದೇಶಕ ವಿಜಯ್ ಕಾರ್ತಿಕೇಯನ್’ ಎಂದು ಹೆಡ್​ಲೈನ್ ಹಾಕಲಾಗಿದೆ. ಕೆಳಗೆ ಸುದೀಪ್-ವಿಜಯ್ ನಿಂತಿರುವ ಫೋಟೋ ಹಾಗೂ ಕಾವೇರಿ ನದಿಯ ಫೋಟೋನ ಸೇರಿಸಲಾಗಿದೆ.

ಇದು ಸಂಪೂರ್ಣವಾಗಿ ಎಡಿಟ್ ಮಾಡಲಾದ ಪೋಸ್ಟ್. ಮೊದಲನೆಯದು ಟಿವಿ9 ಕನ್ನಡ ಆ ರೀತಿಯ ಸುದ್ದಿಯನ್ನೇ ಪ್ರಕಟಿಸಿಲ್ಲ. ಎರಡನೆಯದು ವಿಜಯ್ ಕಾರ್ತಿಕೇಯನ್ ಆ ರೀತಿಯ ಹೇಳಿಕೆಯನ್ನೇ ನೀಡಿಲ್ಲ. ಆದರೆ, ಕೆಲವು ಕಿಡಿಗೇಡಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಈ ರೀತಿ ಪೋಸ್ಟ್ ಸೃಷ್ಟಿಸಿದ್ದಾರೆ. ಅದಕ್ಕೆ ಟಿವಿ9 ಕನ್ನಡ ಹೆಸರು ಬಳಸಿಕೊಂಡಿದ್ದು ನಿಜಕ್ಕೂ ಬೇಸರದ ವಿಷಯ. ಅಂದಹಾಗೆ ಇಲ್ಲಿ ಗಮನಿಸಬೇಕಾದ ವಿಷಯ ಎಂದರೆ ಎಲ್ಲಿಯೂ ಸುದ್ದಿ ಲಿಂಕ್ ಇಲ್ಲ, ಕೇವಲ ಎಡಿಟ್ ಮಾಡಲಾದ ಪೋಸ್ಟ್ ಮಾತ್ರ ಇದೆ.

ಇದನ್ನೂ ಓದಿ: ಸುದೀಪ್ ಎಚ್ಚರಿಕೆ ಕೊಟ್ಟಿದ್ದು ಯಾರಿಗೆ ಮತ್ತು ಏಕೆ?

ಟಿವಿ9 ಕನ್ನಡ ಕಳೆದ 19 ವರ್ಷಗಳಿಂದ ನಿಖರ ಸುದ್ದಿಗಳನ್ನು ನೀಡುತ್ತಾ ಬರುತ್ತಿದೆ. ಹೀಗಾಗಿ, ತಾವು ಸೃಷ್ಟಿಸಿದ ಪೋಸ್ಟ್ ನಿಜ ಎಂದನಿಸಲಿ ಎಂದು ಕಿಡಿಗೇಡಿಗಳು ಟಿವಿ9 ಸಂಸ್ಥೆಯ ಹೆಸರನ್ನೇ ಬಳಕೆ ಮಾಡಿಕೊಂಡಿದ್ದಾರೆ. ಅದು ಎಡಿಟ್ ಮಾಡಲಾದ ಪೋಸ್ಟ್ ಎಂಬುದು ಮೇಲ್ನೋಟಕ್ಕೆ ತಿಳಿಯುತ್ತದೆ. ಈ ನಕಲಿ ಪೋಸ್ಟ್​ಗೆ ಟಿವಿ9 ಜವಾಬ್ದಾರಿ ಅಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:07 am, Mon, 22 December 25