ಕನ್ನಡದ ಖ್ಯಾತ ನಟ ತಬಲಾ ನಾಣಿ (Tabla Nani) ಅವರ ಅಭಿನಯಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಹಲವಾರು ಸಿನಿಮಾಗಳಲ್ಲಿ ನಟಿಸಿರುವ ಅವರು ಸ್ಯಾಂಡಲ್ವುಡ್ನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ‘ಎದ್ದೇಳು ಮಂಜುನಾಥ’ ಸಿನಿಮಾದಲ್ಲಿ ಅವರು ಅಂಧನ ಪಾತ್ರ ಮಾಡಿ ಸೈ ಎನಿಸಿಕೊಂಡಿದ್ದರು. ಈಗ ಅದೇ ರೀತಿ ಮತ್ತೊಂದು ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಈ ಹೊಸ ಸಿನಿಮಾದಲ್ಲೂ ಅವರು ಕಣ್ಣು ಕಾಣದ ವ್ಯಕ್ತಿಯಾಗಿ ನಟಿಸುತ್ತಿದ್ದಾರೆ. ‘ನನಗೂ ಹೆಂಡ್ತಿ ಬೇಕು’ (Nanagu Hendthi Beku) ಎಂಬುದು ಈ ಸಿನಿಮಾದ ಹೆಸರು. ಈ ಚಿತ್ರದಲ್ಲಿ ವಿಶೇಷ ಕಥಾಹಂದರ ಇರಲಿದೆ. ಬಿಗ್ ಬಾಸ್ ಖ್ಯಾತಿಯ ನಟಿ ಚೈತ್ರಾ ಕೋಟೂರ್ (Chaitra Kotoor) ಅವರು ‘ನನಗೂ ಹೆಂಡ್ತಿ ಬೇಕು’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.
ನಿರ್ದೇಶಕ ಕೆ. ಶಂಕರ್ ಅವರು ಈ ಮೊದಲು ‘ಆ್ಯಕ್ಟ್ 370’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದರು. ಆ ಸಿನಿಮಾದಲ್ಲಿ ದೇಶಭಕ್ತಿಯ ಕಥೆ ಇತ್ತು. ಆದರೆ ಈಗ ಸಂಪೂರ್ಣ ಕಾಮಿಡಿ ಕಥಾಹಂದರದ ಸಿನಿಮಾವನ್ನು ಅವರು ಜನರ ಎದುರು ತರುತ್ತಿದ್ದಾರೆ. ‘ಲೈರಾ ಎಂಟರ್ಟೇನ್ಮೆಂಟ್ ಆ್ಯಂಡ್ ಮೀಡಿಯಾ’ ಸಂಸ್ಥೆ ಮೂಲಕ ಭರತ್ ಗೌಡ ಹಾಗೂ ಸಿ .ರಮೇಶ್ ಅವರು ಒಟ್ಟಾಗಿ ‘ನನಗೂ ಹೆಂಡ್ತಿ ಬೇಕು’ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಟೈಟಲ್ ಕಾರಣದಿಂದಲೇ ಈ ಚಿತ್ರ ನಿರೀಕ್ಷೆ ಸೃಷ್ಟಿ ಮಾಡಿದೆ.
ಇದನ್ನೂ ಓದಿ: ಓಶೋ ಧ್ಯಾನ ಶಿಬಿರದಲ್ಲಿ ನೃತ್ಯ ಮಾಡಿ ಎಲ್ಲರ ಗಮನ ಸೆಳೆದ ಚೈತ್ರಾ ಕೋಟೂರ್
‘ನನಗೂ ಹೆಂಡ್ತಿ ಬೇಕು’ ಸಿನಿಮಾದ ಒನ್ಲೈನ್ ಕಥೆ ಏನು? ಅಂಧ ವ್ಯಕ್ತಿಯೊಬ್ಬನು ಮದುವೆ ಆಗಲು ಹೊರಟಾಗ ಏನೆಲ್ಲ ಪ್ರಸಂಗಗಳು ನಡೆಯುತ್ತವೆ ಎಂಬುದೇ ಈ ಸಿನಿಮಾದ ಕಹಾನಿ. ಇಡೀ ಚಿತ್ರ ಹಾಸ್ಯಮಯವಾಗಿ ಮೂಡಿಬರಲಿದೆ. ಇಡೀ ಸಿನಿಮಾದ ಶೂಟಿಂಗ್ ಚಿತ್ರದುರ್ಗದಲ್ಲಿ ನಡೆಯಲಿದೆ. ಈಗ ಕ್ಲೈಮ್ಯಾಕ್ಸ್ ದೃಶ್ಯದ ಶೂಟಿಂಗ್ ಮಾಡಲಾಗುತ್ತಿದೆ. ನಿರ್ದೇಶಕ ಕೆ. ಶಂಕರ್ ಅವರೇ ಈ ಸಿನಿಮಾಗೆ ಕಥೆ ಮತ್ತು ಚಿತ್ರಕಥೆ ಬರೆದಿದ್ದಾರೆ. ಈ ಸಿನಿಮಾದಲ್ಲಿ 2 ಫೈಟ್ ಮತ್ತು 2 ಹಾಡು ಇರಲಿವೆ. ಕೆ.ಎಂ. ಇಂದ್ರ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.
ಇದನ್ನೂ ಓದಿ: ನಾನು ಯಾರನ್ನೂ ದ್ವೇಷಿಸುತ್ತಿಲ್ಲ, ಪ್ರೀತಿನೂ ಮಾಡಲ್ಲ; ಚೈತ್ರಾ ಕೋಟೂರ್
ಮೊದಲೇ ಹೇಳಿದಂತೆ ಮದುವೆಯಾಗಲು ವಧು ಸಿಗದೇ ಒದ್ದಾಡುವ ಅಂಧ ವ್ಯಕ್ತಿಯ ಪಾತ್ರವನ್ನು ತಬಲಾ ನಾಣಿ ಅವರು ಮಾಡುತ್ತಿದ್ದಾರೆ. ಹಾಗೆಯೇ ನಟಿ ಚೈತ್ರಾ ಕೋಟೂರ್ ಅವರಿಗೂ ವಿಶೇಷವಾದ ಪಾತ್ರವಿದೆ. ಮಾತು ಬಾರದ ಹುಡುಗಿಯಾಗಿ ಅವರು ಕಾಣಿಸಿಕೊಳ್ಳಲಿದ್ದಾರೆ. ತಬಲ ನಾಣಿ ಎದುರು ನೆಗೆಟಿವ್ ಪಾತ್ರದಲ್ಲಿ ಬ್ಯಾಂಕ್ ಜನಾರ್ಧನ್ ಹಾಗೂ ಬಾಲು ನಟಿಸುತ್ತಿದ್ದಾರೆ. ಶೃತಿ, ಕಿಲ್ಲರ್ ವೆಂಕಟೇಶ್, ರಾಜ್ ಬಾಲ, ದೊಡ್ಡ ರಂಗೇಗೌಡ, ಗಣೇಶ್ ರಾವ್, ರಮೇಶ್ ಭಟ್, ಧರ್ಮ, ಗಾನವಿ, ಕೆಜಿಎಫ್ ಕೃಷ್ಣಪ್ಪ, ಪ್ರಿಯಾಂಕಾ ಮುಂತಾದ ಕಲಾವಿದರು ಈ ಚಿತ್ರದ ಪಾತ್ರವರ್ಗದಲ್ಲಿ ಇದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:43 pm, Mon, 24 July 23