‘ದ ಸೂಟ್​’ ಸಿನಿಮಾದ ಟ್ರೇಲರ್​ ನೋಡಿ ವಿಶ್​ ಮಾಡಿದ ಧ್ರುವ ಸರ್ಜಾ

|

Updated on: May 07, 2024 | 10:53 PM

‘ದ ಸೂಟ್​’ ಸಿನಿಮಾದಲ್ಲಿ ಕಮಲ್ ಅವರು ಮುಖ್ಯ ಪಾತ್ರ ಮಾಡಿದ್ದಾರೆ. ಅವರ ಜೊತೆ ಉಮೇಶ್ ಬಣಕಾರ್, ಜೋಸೆಫ್, ವಿ. ನಾಗೇಂದ್ರ ಪ್ರಸಾದ್, ಸುಜಯ್, ಗಡ್ಡ ವಿಜಿ, ಭೀಷ್ಮ ರಾಮಯ್ಯ, ಪ್ರಣಯ ಮೂರ್ತಿ ಸೇರಿದಂತೆ 50ಕ್ಕೂ ಅಧಿಕ ಕಲಾವಿದರು ಅಭಿನಯಿಸಿದ್ದಾರೆ. ಈ ಚಿತ್ರದ ಟ್ರೇಲರ್​ ಬಿಡುಗಡೆ ಆಗಿದ್ದು, ನಟ ಧ್ರುವ ಸರ್ಜಾ ಶುಭ ಹಾರೈಸಿದ್ದಾರೆ.

‘ದ ಸೂಟ್​’ ಸಿನಿಮಾದ ಟ್ರೇಲರ್​ ನೋಡಿ ವಿಶ್​ ಮಾಡಿದ ಧ್ರುವ ಸರ್ಜಾ
‘ದ ಸೂಟ್​’ ಸಿನಿಮಾ ತಂಡ
Follow us on

ಜನರು ಧರಿಸುವ ಬಟ್ಟೆಗಳಲ್ಲಿ ‘ಸೂಟ್’ಗೆ ಒಂದು ಖದರ್​ ಇದೆ. ಈಗ ಆ ಹೆಸರಿನಲ್ಲೇ ಒಂದು ಸಿನಿಮಾ (Kannada Movie) ಬರುತ್ತಿದೆ. ಈ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ. ‘ಆನಂದ್ ಆಡಿಯೋ’ ಮೂಲಕ ರಿಲೀಸ್​ ಆಗಿರುವ ‘ದ ಸೂಟ್’ (The Suit) ಟ್ರೇಲರ್​ಗೆ ಸಿನಿಪ್ರಿಯರು ಮೆಚ್ಚುಗೆ ಸೂಚಿಸಿದ್ದಾರೆ. ಮೇ 17ರಂದು ಈ ಸಿನಿಮಾ ತೆರೆಕಾಣಲಿದೆ. ಮಾಲತಿ ಗೌಡ ಮತ್ತು ರಾಮಸ್ವಾಮಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಎಸ್. ಭಗತ್ ರಾಜ್ ಅವರು ನಿರ್ದೇಶನ ಮಾಡಿದ್ದಾರೆ. ಬಾಲಿವುಡ್​ನಿಂದ ಬಂದ ಕಮಲ್ ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ‘ಆ್ಯಕ್ಷನ್ ಪ್ರಿನ್ಸ್’ ಧ್ರುವ ಸರ್ಜಾ (Dhruva Sarja) ಅವರು ಈ ಸಿನಿಮಾ ಟ್ರೇಲರ್ ನೋಡಿ ಮೆಚ್ಚಿಕೊಂಡಿದ್ದಾರೆ.

‘ದ ಸೂಟ್’ ಸಿನಿಮಾದ ಟ್ರೇಲರ್ ಅನಾವರಣ ಕಾರ್ಯಕ್ರಮಕ್ಕೆ ಶಾಸಕ ಗೋಪಾಲಯ್ಯ, ಮಂಡಳಿ ಅಧ್ಯಕ್ಷ ಎನ್.ಎಂ. ಸುರೇಶ್, ಪ್ರಶಾಂತ್ ಚಕ್ರವರ್ತಿ ಮುಂತಾದ ಗಣ್ಯರು ಆಗಮಿಸಿದ್ದರು. ಅವರೆಲ್ಲರೂ ‘ದ ಸೂಟ್’ ಚಿತ್ರಕ್ಕೆ ವಿಶ್​ ಮಾಡಿದರು. ಟ್ರೇಲರ್​ ನೋಡಿ ಪ್ರತಿಕ್ರಿಯಿಸಿದ ಧ್ರುವ ಸರ್ಜಾ ಅವರು ಈ ಸಿನಿಮಾ ಹಿಟ್​ ಆಗಲಿ ಎಂದು ವಿಡಿಯೋ ಮೂಲಕ ಹಾರೈಸಿದ್ದಾರೆ.

ಕಾಶಿನಾಥ್​ ಅವರ ಬಳಿಯಲ್ಲಿ ತಾವು ಸಿನಿಮಾದ ಪಾಠ ಕಲಿತಿದ್ದಾಗಿ ನಿರ್ದೇಶಕ ಎಸ್. ಭಗತ್ ರಾಜ್ ಹೇಳಿಕೊಂಡಿದ್ದಾರೆ. ‘ಕಾಶಿನಾಥ್ ಅವರು ನನ್ನ ಗುರುಗಳು. ನಾನು ಮೊದಲ ನಿರ್ದೇಶನ ಮಾಡಿರುವ ಸಿನಿಮಾ ‘ದ ಸೂಟ್’. ಇದು ಬದುಕು ಮತ್ತು ಭಾವನೆಗಳ ಸಂಗಮ. ನಮ್ಮ ಚಿತ್ರದಲ್ಲಿ ಸೂಟೇ ಹೀರೋ. ಕಥೆ ಕೇಳಿದ ಅನೇಕರು ಈ ವಿಷಯವನ್ನು ಕೇಳಿ ಆಶ್ಚರ್ಯಪಟ್ಟಿದ್ದುಂಟು. ನಮ್ಮ ಸಿನಿಮಾದ ಸೂಟ್​ನ ಪಾತ್ರ ಏನು ಎಂಬುದು ಮೇ 17ಕ್ಕೆ ಗೊತ್ತಾಗಲಿದೆ’ ಎಂದು ನಿರ್ದೇಶಕರು ಹೇಳಿದ್ದಾರೆ.

ಇದನ್ನೂ ಓದಿ: ‘ನನ್ನ ಕನಸಿನ ಭಾರತ ಹೇಗಿರಬೇಕು ಅಂತ ಹೇಳಿದ್ರೆ ಕಾಂಟ್ರವರ್ಸಿ ಆಗತ್ತೆ’: ಧ್ರುವ ಸರ್ಜಾ

‘ನಮ್ಮ ಸಿನಿಮಾದಲ್ಲಿ ಸೂಟ್ ಅನ್ನು ಕೇವಲ ಬಟ್ಟೆಯ ರೀತಿ ತೋರಿಸಿಲ್ಲ. ಮನುಷ್ಯನ ಹೊರಗಿನ ಮನಸ್ಸನ್ನು ಸೂಟ್​ ಮೂಲಕ ತೋರಿಸಲು ಪ್ರಯತ್ನಿಸಿದ್ದೇನೆ. ಈ ಸಿನಿಮಾಗೆ ಅತಿಥಿ ದೇವೋ ಭವ ಎಂಬ ಟ್ಯಾಗ್​ ಲೈನ್​ ಇದೆ. ಇದರ ಪ್ರಚಾರವನ್ನು ವಿನೂತನವಾಗಿ ಮಾಡಿದ್ದೇವೆ‌. ಸೂಟ್ ಬಗ್ಗೆ ಹಲವು ಗಣ್ಯರು ತಮಗೆ ಎನಿಸಿದ್ದನ್ನು ಕವನಗಳ ಮೂಲಕ ತಿಳಿಸಿದ್ದಾರೆ. ಅದನ್ನು ಸಂಕಲನವಾಗಿ ಹೊರತಂದಿದ್ದೇವೆ. ನಮ್ಮ ಸಿನಿಮಾದಲ್ಲಿ ಮೂರು ಕಿರಣಗಳಿವೆ. ಸಂಗೀತ ನಿರ್ದೇಶಕ ಕಿರಣ್ ಶಂಕರ್. ಛಾಯಾಗ್ರಾಹಕ ಕಿರಣ್ ಹಂಪಾಪುರ. ರೇಖಾಚಿತ್ರಗಳ ಮೂಲಕ ನಮ್ಮ ಚಿತ್ರಕ್ಕೆ ಜೀವ ತುಂಬಿರುವ ಕಿರಣ್’ ಎಂದು ತಮ್ಮ ತಂತ್ರಜ್ಞರ ಬಗ್ಗೆ ಎಸ್​. ಭಗತ್​ ರಾಜ್​ ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.