ಹುಲಿ ಉಗುರು: ದರ್ಶನ್​ ವಿರುದ್ಧ ದೂರು ನೀಡಿದವರಿಗೆ ಅಭಿಮಾನಿಗಳಿಂದ ಕೊಲೆ ಬೆದರಿಕೆ

|

Updated on: Oct 26, 2023 | 2:33 PM

Tiger Claw Pendant Case: ದರ್ಶನ್​ ಅಭಿಮಾನಿಗಳಿಂದ ಕೊಲೆ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಶಿವಕುಮಾರ್​ ಅವರು ಸುದ್ದಿಗೋಷ್ಠಿ ನಡೆಸಿದ್ದಾರೆ. ಬೆಂಗಳೂರು ನಗರ ಪೊಲೀಸ್ ಕಮಿಷನರ್​ ಬಿ. ದಯಾನಂದ್​ಗೆ ಶಿವಕುಮಾರ್ ದೂರು ನೀಡಿದ್ದಾರೆ. ಆಡಿಯೋ ಮತ್ತು ವಿಡಿಯೋ ಕಾಲ್​ ಮೂಲಕ ತಮಗೆ ಬೆದರಿಕೆ ಹಾಕಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಹುಲಿ ಉಗುರು: ದರ್ಶನ್​ ವಿರುದ್ಧ ದೂರು ನೀಡಿದವರಿಗೆ ಅಭಿಮಾನಿಗಳಿಂದ ಕೊಲೆ ಬೆದರಿಕೆ
ದರ್ಶನ್​, ಶಿವಕುಮಾರ್​
Follow us on

ನಟ ದರ್ಶನ್​ (Darshan) ಅವರಿಗೆ ಕಾನೂನಿನ ಸಂಕಷ್ಟ ಎದುರಾಗಿದೆ. ಹುಲಿ ಉಗುರು ಲಾಕೆಟ್​ (Tiger Claw Pendant) ಧರಿಸಿದ ಆರೋಪ ಅವರ ಮೇಲಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿಇರುವ ಅವರ ಮನೆಯಲ್ಲಿ ಈಗಾಗಲೇ ಅರಣ್ಯಾಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ದರ್ಶನ್​ ವಿರುದ್ಧ ವಂದೇ ಮಾತರಂ ಸಂಘಟನೆಯ ಮುಖಂಡ ಶಿವಕುಮಾರ್​ ಅವರು ದೂರು ನೀಡಿದ ನಂತರ ಇಷ್ಟೆಲ್ಲ ಬೆಳವಣಿಗೆ ನಡೆದಿದೆ. ಈಗ ದರ್ಶನ್​ ಅಭಿಮಾನಿಗಳಿಂದ (Darshan Fans) ಶಿವಕುಮಾರ್​ಗೆ ಕೊಲೆ ಬೆದರಿಕೆ ಬಂದಿದೆ. ಇದರಲ್ಲಿ ದರ್ಶನ್​ ಅವರ ಕೈವಾಡ ಇದೆ ಎಂದು ಶಿವಕುಮಾರ್​ ಆರೋಪಿಸಿದ್ದಾರೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

‘ಅಕ್ಟೋಬರ್​ 25ರಂದು ದರ್ಶನ್​ ವಿರುದ್ಧ ಅರಣ್ಯಾಧಿಕಾರಿಗೆ ದೂರು ಕೊಟ್ಟಿದ್ದೆವು. ದೂರು ನೀಡಿದ್ದಕ್ಕೆ ನಮಗೆ ಬೆದರಿಕೆ ಕರೆಗಳು ಬರುತ್ತಿವೆ. ಅವರ ಅಭಿಮಾನಿಗಳು ನಿನ್ನೆ ನನ್ನ ಕಾರನ್ನು ಹಿಂಬಾಲಿಸಿ ಟಚ್ ಮಾಡಿದ್ದಾರೆ. ದರ್ಶನ್​ ತಪ್ಪು ಮಾಡಿಲ್ಲ ಎಂಬುದಾದರೆ ಅಭಿಮಾನಿಗಳು ಯಾಕೆ ಈ ರೀತಿ ಮಾಡುತ್ತಿದ್ದಾರೆ? ದರ್ಶನ್ ಅಭಿಮಾನಿಗಳ ಸಂಘದವರೇ ಈ ಕೆಲಸ ಮಾಡುತ್ತಿದ್ದಾರೆ. ಬೆದರಿಕೆ ಕರೆ ಹಿಂದೆ ಶೇಕಡಾ 100ರಷ್ಟು ದರ್ಶನ್​ ಅವರ ಕೈವಾಡವಿದೆ’ ಎಂದು ಶಿವಕುಮಾರ್​ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ದರ್ಶನ್ ಬಳಿ ಇತ್ತು 8 ಹುಲಿ ಉಗುರಿನ ಮಾದರಿಯ ಪೆಂಡೆಂಟ್? ಇದ್ಯಾವುದೂ ಅಸಲಿ ಅಲ್ಲ?

‘ಬಿಗ್​ ಬಾಸ್​ ಕನ್ನಡ ಸೀಸನ್​ 10’ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುತ್ತಿದ್ದ ವರ್ತೂರು ಸಂತೋಷ್​ ಅವರು ಹುಲಿ ಉಗುರು ಧರಿಸಿದ್ದ ಆರೋಪದ ಮೇಲೆ ಬಂಧನಕ್ಕೆ ಒಳಗಾದರು. ಅದರ ಬೆನ್ನಲ್ಲೇ ಅನೇಕ ಸೆಲೆಬ್ರಿಟಿಗಳು ಹುಲಿ ಉಗುರು ಧರಿಸಿದ್ದ ಫೋಟೋ ಮತ್ತು ವಿಡಿಯೋ ವೈರಲ್​ ಆಯಿತು. ದರ್ಶನ್​ ಅವರು ಹುಲಿ ಉಗುರಿನ ಪೆಂಡೆಂಟ್​ ಧರಿಸಿದ್ದಾರೆ ಮತ್ತು ವಿನಯ್​ ಗುರೂಜಿ ಅವರು ಹುಲಿ ಚರ್ಮದ ಮೇಲೆ ಕುಳಿತಿದ್ದಾರೆ ಎಂದು ಆರೋಪಿಸಿ, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಿವಕುಮಾರ್​ ದೂರು ನೀಡಿದ್ದರು.

ಇದನ್ನೂ ಓದಿ: ಜಗ್ಗೇಶ್ ಮತ್ತು ದರ್ಶನ್ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿರುವ ಬಗ್ಗೆ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಲಿಲ್ಲ

ದರ್ಶನ್​ ಅಭಿಮಾನಿಗಳಿಂದ ಕೊಲೆ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಶಿವಕುಮಾರ್​ ಅವರು ಸುದ್ದಿಗೋಷ್ಠಿ ನಡೆಸಿದ್ದಾರೆ. ಬೆಂಗಳೂರು ನಗರ ಪೊಲೀಸ್ ಕಮಿಷನರ್​ ಬಿ. ದಯಾನಂದ್​ಗೆ ಶಿವಕುಮಾರ್ ದೂರು ನೀಡಿದ್ದಾರೆ. ಆಡಿಯೋ ಮತ್ತು ವಿಡಿಯೋ ಕಾಲ್​ ಮೂಲಕ ತಮಗೆ ಬೆದರಿಕೆ ಹಾಕಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಸದ್ಯಕ್ಕಂತೂ ರಾಜ್ಯದಲ್ಲಿ ಹುಲಿ ಉಗುರಿನ ವಿಷಯ ಹೆಚ್ಚು ಚರ್ಚೆ ಆಗುತ್ತಿದೆ. ವರ್ತೂರು ಸಂತೋಷ್​ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದ್ದು, ಜಾಮೀನಿಗಾಗಿ ಅವರು ಪ್ರಯತ್ನಿಸುತ್ತಿದ್ದಾರೆ.

ಇದನ್ನೂ ಓದಿ: Darshan: ಹುಲಿ ಉಗುರು ಧರಿಸಿದ ಆರೋಪ; ನಟ ದರ್ಶನ್​ ಮನೆಯಲ್ಲಿ ಅಧಿಕಾರಿಗಳ ಪರಿಶೀಲನೆ

ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್​, ನಟ ಜಗ್ಗೇಶ್​, ನಟ/ರಾಜಕಾರಣಿ ನಿಖಿಲ್​ ಕುಮಾರ್​ ಸೇರಿದಂತೆ ಅನೇಕರು ಹುಲಿ ಉಗುರಿನ ಲಾಕೆಟ್​ ಧರಿಸಿದ ಆರೋಪ ಎದುರಿಸುತ್ತಿದ್ದಾರೆ. ಹಲವರ ಮನೆಯಲ್ಲಿ ಈಗಾಗಲೇ ಪರಿಶೀಲನೆ ಮಾಡಲಾಗಿದೆ. ಅರಣ್ಯಾಧಿಕಾರಿಗಳ ಕ್ರಮವನ್ನು ಪ್ರಶ್ನಿಸಿ ಜಗ್ಗೇಶ್​ ಅವರು ಹೈಕೋರ್ಟ್​ ಮೆಟ್ಟಿಲು ಏರಿದ್ದಾರೆ. ದಿನದಿಂದ ದಿನಕ್ಕೆ ಈ ಪ್ರಕರಣ ಬೇರೆ ಬೇರೆ ಸ್ವರೂಪ ಪಡೆದುಕೊಳ್ಳುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.