ಫ್ಯಾನ್ಸ್ ಭೇಟಿಯಾಗಲು ಸಾಧ್ಯವಾಗುತ್ತಿಲ್ಲ: ಹುಟ್ಟುಹಬ್ಬಕ್ಕೂ ಮುನ್ನ ಯಶ್ ಸಂದೇಶ

‘ರಾಕಿಂಗ್ ಸ್ಟಾರ್’ ಯಶ್ ಅವರು ಈಗ ‘ಟಾಕ್ಸಿಕ್’ ಸಿನಿಮಾದ ಕೆಲಸಗಳಲ್ಲಿ ಸಂಪೂರ್ಣವಾಗಿ ತೊಡಗಿಕೊಂಡಿದ್ದಾರೆ. ಆದ್ದರಿಂದ ಹುಟ್ಟುಹಬ್ಬದ ದಿನ ತಮ್ಮ ಅಭಿಮಾನಿಗಳ ಜೊತೆ ಸೆಲೆಬ್ರೇಟ್ ಮಾಡಲು ಅವರಿಗೆ ಸಮಯ ಸಿಗುತ್ತಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಆ ಕುರಿತು ಇಲ್ಲಿದೆ ಪೂರ್ತಿ ಮಾಹಿತಿ..

ಫ್ಯಾನ್ಸ್ ಭೇಟಿಯಾಗಲು ಸಾಧ್ಯವಾಗುತ್ತಿಲ್ಲ: ಹುಟ್ಟುಹಬ್ಬಕ್ಕೂ ಮುನ್ನ ಯಶ್ ಸಂದೇಶ
Yash

Updated on: Jan 07, 2026 | 6:46 PM

ನಟ ರಾಕಿಂಗ್ ಯಶ್ ಅವರಿಗೆ ಜನವರಿ 8ರಂದು ಹುಟ್ಟುಹಬ್ಬದ (Yash Birthday) ಸಂಭ್ರಮ. ಆದರೆ ಈ ಬಾರಿ ಕೂಡ ಅವರು ಅಭಿಮಾನಿಗಳ ಜೊತೆ ಜನ್ಮದಿನ ಆಚರಿಸಲು ಸಾಧ್ಯವಾಗುತ್ತಿಲ್ಲ. ಒಂದು ದಿನ ಮೊದಲೇ ಅವರು ತಮ್ಮ ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ. ‘ನನ್ನ ಪ್ರೀತಿಯ ಅಭಿಮಾನಿಗಳೇ, ನಿಜ ಹೇಳಬೇಕೆಂದರೆ, ಕಳೆದ ಕೆಲವು ವರ್ಷಗಳಿಂದ ನೀವು ನನ್ನನ್ನು ಭೇಟಿಯಾಗಲು ಎಷ್ಟು ಕಾಯುತ್ತಿದ್ದೀರಿ ಎಂದು ನನಗೆ ಚೆನ್ನಾಗಿ ತಿಳಿದಿದೆ. ನನ್ನನ್ನು ನಂಬಿರಿ, ನಿಮ್ಮೆಲ್ಲರನ್ನೂ ನೋಡಲು ನಾನು ಅಷ್ಟೇ ಹಾತೊರೆಯುತ್ತಿದ್ದೆ’ ಎಂದು ಯಶ್ (Yash) ಅವರು ಬರಹ ಆರಂಭಿಸಿದ್ದಾರೆ.

‘ಈ ವರ್ಷ ನನ್ನ ಹುಟ್ಟುಹಬ್ಬದಂದು ನಿಮ್ಮನ್ನು ಭೇಟಿಯಾಗಲು ನಾನು ನಿಜವಾಗಿಯೂ ಬಯಸಿದ್ದೆ. ಆದರೆ 2026ರ ಮಾರ್ಚ್ 19ರಂದು ನಿಮಗಾಗಿ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಮಾಡುವ ಸಲುವಾಗಿ ನಾನು ಈ ಚಿತ್ರದ ಕೆಲಸಗಳಲ್ಲಿ ಸಂಪೂರ್ಣವಾಗಿ ಮಗ್ನನಾಗಿದ್ದೇನೆ. ಈ ಕಾರಣದಿಂದಾಗಿ ನಾನು ಈಗ ನಿಮ್ಮನ್ನು ವೈಯಕ್ತಿಕವಾಗಿ ಭೇಟಿಯಾಗಲು ಸಾಧ್ಯವಾಗುವುದಿಲ್ಲ’ ಎಂದು ಯಶ್ ಹೇಳಿದ್ದಾರೆ.

‘ನಾವು ಈಗ ಭೇಟಿಯಾಗಲು ಸಾಧ್ಯವಾಗದಿದ್ದರೂ, ನಾವು ಶೀಘ್ರದಲ್ಲೇ ಇನ್ನೂ ದೊಡ್ಡ ರೀತಿಯಲ್ಲಿ ಭೇಟಿಯಾಗುತ್ತೇವೆ ಎಂದು ಭರವಸೆ ನೀಡುತ್ತೇನೆ. ಈ ಮಧ್ಯೆ, ನಿಮ್ಮೆಲ್ಲರ ಶುಭಾಶಯಗಳನ್ನು ನಾನು ವೈಯಕ್ತಿಕವಾಗಿ ಪರಿಶೀಲಿಸುತ್ತೇನೆ ಮತ್ತು ನೀವು ಕಳುಹಿಸುವ ಪ್ರೀತಿಯನ್ನು ಸ್ವೀಕರಿಸುವೆ’ ಎಂದು ಯಶ್ ಅವರು ಇನ್​ಸ್ಟಾಗ್ರಾಮ್ ಸ್ಟೋರಿ ಮೂಲಕ ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ.

ಯಶ್ ಅವರು ‘ಕೆಜಿಎಫ್: ಚಾಪ್ಟರ್ 2’ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದರು. ಅವರಿಗೆ ಈಗ ದೇಶಾದ್ಯಂತ ಅಭಿಮಾನಿಗಳು ಇದ್ದಾರೆ. ‘ಟಾಕ್ಸಿಕ್’ ಸಿನಿಮಾದ ಬಿಡುಗಡೆಗಾಗಿ ಎಲ್ಲರೂ ಕಾಯುತ್ತಿದ್ದಾರೆ. ಭಾರಿ ಬಜೆಟ್​​ನಲ್ಲಿ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಯಶ್ ಜನ್ಮದಿನದ ಪ್ರಯುಕ್ತ ಈ ಚಿತ್ರತಂಡದಿಂದ ಅಪ್​ಡೇಟ್ ಸಿಗಲಿದೆ. ಅದಕ್ಕಾಗಿ ಕಾತರ ಹೆಚ್ಚಾಗಿದೆ.

ಇದನ್ನೂ ಓದಿ: ‘ರಾಕಿಂಗ್ ಸ್ಟಾರ್’ ಯಶ್ ಹುಟ್ಟುಹಬ್ಬಕ್ಕೆ ರಾಜ್ಯಾದ್ಯಂತ ರಾರಾಜಿಸುತ್ತಿರುವ ಬಿಲ್​ಬೋರ್ಡ್​

ಗೀತು ಮೋಹನ್​ದಾಸ್ ಅವರು ‘ಟಾಕ್ಸಿಕ್’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಯಶ್ ಜೊತೆ ರುಕ್ಮಿಣಿ ವಸಂತ್, ತಾರಾ ಸುತಾರಿಯಾ, ಹುಮಾ ಖುರೇಷಿ, ನಯನತಾರಾ, ಕಿಯಾರಾ ಅಡ್ವಾಣಿ ಮುಂತಾದವರು ನಟಿಸುತ್ತಿದ್ದಾರೆ. ನಟಿಯರ ಫಸ್ಟ್ ಲುಕ್ ಪೋಸ್ಟರ್​​ಗಳು ಈಗಾಗಲೇ ಬಿಡುಗಡೆ ಆಗಿವೆ. ಈಗ ಯಶ್ ಪಾತ್ರದ ಬಗ್ಗೆ ತಿಳಿಯಲು ಫ್ಯಾನ್ಸ್ ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us