ಡಿಕೆಶಿ ಭೇಟಿ ಬಳಿಕ ಮತ್ತೊಮ್ಮೆ ದರ್ಶನ್​ಗೆ ಟಾಂಗ್ ಕೊಟ್ಟ ಉಮಾಪತಿ ಶ್ರೀನಿವಾಸ್

|

Updated on: Feb 23, 2024 | 8:59 PM

Umapathy Srinivas Gowda: ಉಮಾಪತಿ ಶ್ರೀನಿವಾಸ್ ಇಂದು ಉಪಮುಖ್ಯ ಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾದರು. ಬಳಿಕ ದರ್ಶನ್ ಹಾಗೂ ತಮ್ಮ ವಿವಾದದ ಬಗ್ಗೆ ಮಾತನಾಡಿದರು.

ಡಿಕೆಶಿ ಭೇಟಿ ಬಳಿಕ ಮತ್ತೊಮ್ಮೆ ದರ್ಶನ್​ಗೆ ಟಾಂಗ್ ಕೊಟ್ಟ ಉಮಾಪತಿ ಶ್ರೀನಿವಾಸ್
ದರ್ಶನ್ ತೂಗುದೀಪ
Follow us on

ನಟ ದರ್ಶನ್ (Darshan) ಮತ್ತು ನಿರ್ಮಾಪಕ ಉಮಾಪತಿ ಶ್ರೀನಿವಾಸ್ (Umapathy Srinivas) ನಡುವೆ ವಾಕ್ಸಮರ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ‘ಕಾಟೇರ’ ಸಿನಿಮಾದ ಕತೆ ಮತ್ತು ಟೈಟಲ್ ವಿಷಯವಾಗಿ ಈ ಹಿಂದೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಮಾತನಾಡಿದ್ದರು. ಸಿನಿಮಾದ ಟೈಟಲ್ ತಮ್ಮ ಬಳಿ ಇತ್ತೆಂದು, ಕತೆಯನ್ನು ತಾವೇ ಮಾಡಿಸಿದ್ದಾಗಿಯೂ ಹೇಳಿಕೊಂಡಿದ್ದರು. ‘ಕಾಟೇರ’ ಸಿನಿಮಾ ಯಶಸ್ವಿ ಆಗಿರುವ ಬಗ್ಗೆ ಸಂತಸವನ್ನೂ ವ್ಯಕ್ತಪಡಿಸಿದ್ದರು. ಆದರೆ ದರ್ಶನ್, ‘ಕಾಟೇರ’ 50ನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಉಮಾಪತಿ ಶ್ರೀನಿವಾಸ್​ಗೆ ‘ತಗಡು’, ‘ಗುಮ್ಮಿಸ್ಕೋತೀಯ’ ಎಂಬಿತ್ಯಾದಿ ಪದಗಳನ್ನು ಬಳಸಿದ್ದರು.

ಉಮಾಪತಿ ಶ್ರೀನಿವಾಸ್ ಸಹ, ದರ್ಶನ್​ ಮಾತುಗಳಿಗೆ ಖಡಕ್ ಆಗಿಯೇ ಪ್ರತ್ಯುತ್ತರ ನೀಡಿದ್ದರು. ಅದರ ಬೆನ್ನಲ್ಲೆ ಉಮಾಪತಿ ಶ್ರೀನಿವಾಸ್ ವಿರುದ್ಧ ದರ್ಶನ್ ಕಳಪೆ ಭಾಷೆ ಬಳಸಿದ ಬಳಿಕ ದರ್ಶನ್ ವಿರುದ್ಧ ಕೆಲವು ಸಂಘಟನೆಗಳು ಪೊಲೀಸ್ ಠಾಣೆಯಲ್ಲಿ ದೂರು ನೀಡಿವೆ. ಇದೆಲ್ಲದರ ನಡುವೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಇಂದು (ಫೆಬ್ರವರಿ 23) ಹಠಾತ್ತನೆ ಉಪಮುಖ್ಯ ಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಆದರು. ಇದು ತೀವ್ರ ಕುತೂಹಲ ಕೆರಳಿಸಿತು. ಡಿಕೆಶಿ ಭೇಟಿ ಬಳಿಕ ಮಾಧ್ಯಮಗಳೊಟ್ಟಿಗೆ ದರ್ಶನ್ ಹಾಗೂ ತಮ್ಮ ನಡುವಿನ ವಿವಾದದ ಬಗ್ಗೆ ಮಾತನಾಡಿದರು.

ಡಿಕೆ ಶಿವಕುಮಾರ್ ಅವರ ಭೇಟಿಯ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಉಮಾಪತಿ ಶ್ರೀನಿವಾಸ್, ‘ಕ್ಷೇತ್ರದ ಸಮಸ್ಯೆ ಬಗ್ಗೆ ಮಾತನಾಡಲು ಬಂದಿದ್ದೆ ಅಷ್ಟೆ, ನಾನು ತಪ್ಪು ಮಾಡಿದ್ದರೆ ಸಾಹೇಬರು ಕರೆದು ಬುದ್ಧಿಹೇಳುತ್ತಿದ್ದರು. ಆದರೆ ಹಾಗೇನಿಲ್ಲ. ಕ್ಷೇತ್ರದ ವಿಷಯ ಹಾಗೂ ರಾಜಕೀಯದ ಕೆಲವು ವಿಷಯಗಳನ್ನು ಮಾತನಾಡಿದೆ, ಸಲಹೆಗಳನ್ನು ತೆಗೆದುಕೊಂಡೆ ಅಷ್ಟೆ’ ಎಂದರು.

ಇದನ್ನೂ ಓದಿ:ನಟ ದರ್ಶನ್​ ವಿರುದ್ಧ ನೀಡಿದ್ದ ದೂರು ಹಿಂಪಡೆದು ಕ್ಷಮೆ ಕೇಳಿದ ಕನ್ನಡ ಶಫಿ

ದರ್ಶನ್ ಜೊತೆಗಿನ ಸಂಘರ್ಷದ ವಿಷಯದ ಬಗ್ಗೆ ಮಾತನಾಡಿದ ಉಮಾಪತಿ, ‘ಸಮಾಜದಲ್ಲಿ ಹೆಸರಿರುವ ವ್ಯಕ್ತಿ ಸರಿಯಾಗಿ ನಡೆದುಕೊಳ್ಳಬೇಕಾಗುತ್ತದೆ. ದೇಹ ತೂಕ ಇದ್ದರೆ ಸಾಕಾಗುವುದಿಲ್ಲ, ಮಾತಿನಲ್ಲಿ ತೂಕವಿರಬೇಕಾಗುತ್ತದೆ. ನಾನು ತಪ್ಪು ಮಾಡಿದರೂ ತಪ್ಪೆ, ಯಾರು ಮಾಡಿದರೂ ತಪ್ಪೆ. ನಾವು ಸಿನಿಮಾದಲ್ಲಿರುವವರು ಸಿನಿಮಾ ಮೂಲಕ ಸಂದೇಶ ಕೊಡಬೇಕು, ಇಂಥಹಾ ವಿವಾದಗಳಿಂದ ಸಂದೇಶ ಕೊಡಬಾರದು’ ಎಂದರು. ಮಹಿಳೆಯರು ದರ್ಶನ್ ವಿರುದ್ಧ ನೀಡಿರುವ ದೂರಿನ ಬಗ್ಗೆ ಮಾತನಾಡಿದ ಉಮಾಪತಿ, ‘ನನ್ನ ಪರವಾಗಿ ಅವರು ದೂರು ನೀಡಿಲ್ಲ, ಅವರೇನೋ ಮಹಿಳೆಯರ ಬಗ್ಗೆ ಅಗೌರವವಾಗಿ ಮಾತನಾಡಿದ್ದಾರೆ ಎಂದು ದೂರು ನೀಡಿದ್ದಾರೆ. ಅವರೇನೋ ಮಾಡಿಕೊಂಡಿಕೊಳ್ಳಿ’ ಎಂದಿದ್ದಾರೆ.

ಮುಂದುವರೆದು, ‘ಅವರೆಲ್ಲ ಹೊಟ್ಟೆ ತುಂಬಿರೋರು, ನಾವು ಹಸಿದಿರೋರು. ಅವರು ಆ ರೀತಿ ಪದ ಬಳಕೆ ಮಾಡಬಾರದಿತ್ತು, ಅದು ಖಂಡಿತ ತಪ್ಪು. ನಾವು ಸಣ್ಣವರು, ಕೆಲಸ ಮಾಡಿಕೊಂಡು ಇರೋದು’ ಎಂದರು. ರಾಜ್​ಕುಮಾರ್ ಅವರು ನಿರ್ಮಾಪಕರನ್ನು ಅನ್ನದಾರು ಎಂದು ಕರೆದಿದ್ದರು ಎಂಬ ಮಾತಿಗೆ, ‘ಹೌದು, ಅವರು ಹಾಕಿದ ಆಲದ ಮರ ಇದು. ಎಲ್ಲರೂ ಹೇಳ್ತಿದ್ದರು, ದೊಡ್ಮನೆಗೊಂದು ಸಿನಿಮಾ ಮಾಡಿ ನಿಮಗೆ ಗೊತ್ತಾಗುತ್ತದೆ ಎಂದು. ಅದು ಈಗ ಗೊತ್ತಾಗುತ್ತಿದೆ’ ಎಂದು ಟಾಂಗ್ ನೀಡಿದ್ದಾರೆ ಉಮಾಪತಿ ಶ್ರೀನಿವಾಸ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ