ನಟ ದರ್ಶನ್ ವಿರುದ್ಧ ನೀಡಿದ್ದ ದೂರು ಹಿಂಪಡೆದು ಕ್ಷಮೆ ಕೇಳಿದ ಕನ್ನಡ ಶಫಿ
ಜನಪ್ರಿಯ ನಟ ದರ್ಶನ್ ವಿರುದ್ಧ ಹಲವು ದೂರುಗಳು ದಾಖಲಾಗುತ್ತಿವೆ. ಈ ನಡುವೆ ಫೆಬ್ರವರಿ 22ರಂದು ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ತಾವು ನೀಡಿದ್ದ ದೂರನ್ನು ಕನ್ನಡ ಶಫಿ ವಾಪಸ್ ಪಡೆದಿದ್ದಾರೆ. ಅಲ್ಲದೇ ಅವರು ಕ್ಷಮೆ ಕೇಳಿದ್ದಾರೆ. ‘ಕನ್ನಡದ ಮನಸ್ಸುಗಳಿಗೆ ನೋವಾಗಿದ್ದರೆ ನಮ್ಮ ಸಂಘಟನೆ ಮತ್ತು ಅಧ್ಯಕ್ಷರ ವತಿಯಿಂದ ನಾವು ಕ್ಷಮೆ ಕೇಳುತ್ತೇವೆ’ ಎಂದು ಅವರು ಹೇಳಿದ್ದಾರೆ.
ವಿಡಿಯೋ ಮೂಲಕ ಕನ್ನಡ ಶಫಿ (Kannada Shafi) ಅವರು ಕ್ಷಮೆ ಕೇಳಿದ್ದಾರೆ. ‘ಎಲ್ಲರಿಗೂ ನಮಸ್ಕಾರ, ನಾನು ಕನ್ನಡ ಶಫಿ. ಕರ್ನಾಟಕ ಪ್ರಜಾಪರ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ. ಇಂದು ನಾನು ನಿಮ್ಮ ಮುಂದೆ ಬಂದಿರುವ ಉದ್ದೇಶ ಏನೆಂದರೆ, ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಒಂದು ವೇದಿಕೆಯಲ್ಲಿ ನಟ ದರ್ಶನ್ (Darshan) ಮಾತನಾಡಿದ್ದು ಮುಜುಗರ ತಂದಿದ್ದ ವಿಚಾರ. ಹಾಗಾಗಿ ನಿನ್ನೆ ನಾವು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ದಾಖಲಿಸಿದ್ದೆವು. ನಾವು ಸಂಘಟನೆಯವರು ಸ್ವಲ್ಪ ಆತುರ ಮಾಡಿದ್ದೇವೆ ಎನಿಸುತ್ತದೆ. ಚಿತ್ರರಂಗದಲ್ಲಿ ಬೆಳೆದು ನಿಂತಿರುವ ಹಿರಿಯ ನಟನಿಗೆ ಇದರಿಂದ ನೋವಾಗಿದ್ದರೆ ನಮ್ಮ ಸಂಘಟನೆಗಳ ಪರವಾಗಿ ಕನ್ನಡದ ಮನಸ್ಸುಗಳಿಗೆ ಕ್ಷಮೆ ಯಾಚಿಸುತ್ತೇನೆ’ ಎಂದು ಕನ್ನಡ ಶಫಿ ಹೇಳಿದ್ದಾರೆ. ಅಲ್ಲದೇ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದಾಖಲಿಸಿದ್ದ ದೂರನ್ನು ಹಿಂಪಡೆಯುವುದಾಗಿ ಅವರು ಹೇಳಿದ್ದಾರೆ. ಇನ್ನೂ ಕೆಲವು ಸಂಘ, ಸಂಸ್ಥೆಗಳು ಕೂಡ ದರ್ಶನ್ ವಿರುದ್ಧ ದೂರು ನೀಡಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.