ವಾಣಿಜ್ಯ ಮಂಡಳಿ ಚುನಾವಣೆಯಲ್ಲಿ ಜಯಭೇರಿ: ಎನ್ಎಂ ಸುರೇಶ್ ಮೊದಲ ಪ್ರತಿಕ್ರಿಯೆ
NM Suresh: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ನಿರ್ಮಾಪಕ ಎನ್ಎಂ ಸುರೇಶ್ ಭರ್ಜರಿ ಜಯಭೇರಿ ಭಾರಿಸಿದ್ದಾರೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (Karnataka film chamber of commerce) ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ನಿರ್ಮಾಪಕ ಎನ್ಎಂ ಸುರೇಶ್ ಜಯಭೇರಿ ಭಾರಿಸಿದ್ದು, ಫಿಲಂ ಚೇಂಬರ್ನ ಹೊಸ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ವಾಣಿಜ್ಯ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಈ ಬಾರಿ ನಾಲ್ಕು ಮಂದಿ ಸ್ಪರ್ಧಿಸಿದ್ದರು. ನಾಲ್ಕು ಸ್ಪರ್ಧಿಗಳ ನಡುವೆ ತುರುಸಿನ ಸ್ಪರ್ಧೆ ಏರ್ಪಟ್ಟಿತ್ತು. ಅಂತಿಮವಾಗಿ ನಿರ್ಮಾಪಕ ಎನ್ಎಂ ಸುರೇಶ್ ಜಯಭೇರಿ ಭಾರಿಸಿದ್ದಾರೆ.
ಚುನಾವಣೆಯಲ್ಲಿ ಗೆದ್ದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಸುರೇಶ್, ”ಇದೊಂದು ಐತಿಹಾಸಿಕ ಗೆಲುವು. ನಾಲ್ಕು ಜನರು ಚುನಾವಣೆಯಲ್ಲಿ ಸ್ಪರ್ಧಿಸಿ, ನಾಲ್ಕೂ ಜನರ ನಡುವೆ ಸ್ಪರ್ಧೆ ಇದ್ದಾಗಲೂ ಎಣಿಕೆ ಸಮಯದಲ್ಲಿ ಪ್ರತಿ ಟೇಬಲ್ನಲ್ಲಿಯೂ ನನಗೆ ಮುನ್ನಡೆ ದೊರೆತಿದೆ. ಇಷ್ಟು ಮೆಜಾರಿಟಿಯಲ್ಲಿ ನನಗೆ ಮತ ಬರಲು ನನ್ನ ಗುರುಗಳಾದ ಸಾರಾ ಗೋವಿಂದು ಅವರು ಕಾರಣ. ಅವರಿಗೆ ನನ್ನ ಧನ್ಯವಾದ. ನನ್ನನ್ನು ಗೆಲ್ಲಿಸಬೇಕು ಎಂದು ಅವರಿಗೆ ಆಸೆಯಿತ್ತು, ನನ್ನ ಮೂಲಕ ಅವರ ಆಸೆ ಈಡೇರಿತು” ಎಂದಿದ್ದಾರೆ.
ಮುಂದುವರೆದು, ”ಕನ್ನಡ ಚಿತ್ರರಂಗ ಸದಾ ರೈತರ ಪರ. ನೆಲ, ಜಲ, ಭಾಷೆಯ ವಿಷಯ ಯಾವಾಗ ಬಂದಿದೆಯೋ ಆಗ, ಎಲ್ಲವನ್ನೂ ಬದಿಗೊತ್ತಿ ಬೆಂಬಲ ನೀಡುವ ಕಾರ್ಯ ಮಾಡಿದ್ದೇವೆ. ಇಂಥಹಾ ಸಂಕಷ್ಟದ ಸನ್ನಿವೇಶದಲ್ಲಿ ನಾವು ಬೆಂಬಲ ನೀಡದಿದ್ದರೆ ನಮ್ಮ ಜೀವನ ಸಾರ್ಥಕ ಎನಿಸಿಕೊಳ್ಳುವುದಿಲ್ಲ. ನೆಲ-ಜಲ-ಭಾಷೆಯ ಪರವಾಗಿ ನಿಂತವರಿಗೆ ನಾವು ಬೆಂಬಲ ನೀಡಬೇಕು, ಸಹಾಯ ನೀಡಬೇಕು. ಅದು ನಮ್ಮ ಆದ್ಯ ಕರ್ತವ್ಯ. ಆ ಕಾರ್ಯವನ್ನು ನಾವು ಹಿಂದೆಯೂ ಮಾಡಿದ್ದೇವೆ. ಮುಂದೆಯೂ ಮಾಡುತ್ತೇವೆ” ಎಂದಿದ್ದಾರೆ.
ಮಂಗಳೂರು, ”ನಾಳೆ (ಸೆಪ್ಟೆಂಬರ್ 24) ಮೊದಲ ಮೀಟಿಂಗ್ ಕರೆಯುತ್ತೇವೆ. ಹಿರಿಯರು, ಮಾಜಿ ಅಧ್ಯಕ್ಷರ ಜೊತೆ ಕೂತು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಚಿತ್ರರಂಗ ಕಾವೇರಿ ವಿಷಯದಲ್ಲಿ ಎಂದೂ ಹಿಂದೆ ಉಳಿದಿಲ್ಲ ಎಂದ ಸುರೇಶ್, ನನ್ನ ಗೆಲುವಿಗೆ ಕಾರಣವಾದ ಎಲ್ಲಾ ನಿರ್ಮಾಪಕರಿಗೆ ವಿತರಿಕರಿಗೆ ಹಾಗೂ ಪ್ರದರ್ಶಕರಿಗೆ ಧನ್ಯವಾದಗಳು ನನಗೆ ತುಂಬಾ ಖುಷಿಯಾಗಿದೆ. ನಾನು ನೀಡಿರುವ ಎಲ್ಲ ಭರವಸೆಗಳನ್ನು ಈಡೇರಿಸುತ್ತೇನೆ. ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇನೆ” ಎಂದಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ನಿರ್ಮಾಪಕ ಶಿಲ್ಪ ಶ್ರೀನಿವಾಸ್ 217 ಮತಗಳು ಗಳಿಸಿದರೆ, ವಿತರಕ ಏ ಗಣೇಶ್ 204 ಮತ, ಮಾರ್ಸ್ ಸುರೇಶ್ 181 ಮತಗಳು, ನಿರ್ಮಾಪಕ ಎನ್ಎಂ ಸುರೇಶ್ 337 ಮತಗಳನ್ನು ಗಳಿಸಿದರು. ಒಟ್ಟು ಮತ ಲೆಕ್ಕಾಚಾರದಲ್ಲಿ 120 ಮತಗಳಿಂದ ನಿರ್ಮಾಪಕ ಎನ್.ಎಮ್ ಸುರೇಶ್ ಗೆಲುವು ಸಾಧಿಸಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನೂತನ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಅಧ್ಯಕ್ಷರಾಗಿ ಎಮ್ ಎನ್ ಸುರೇಶ್ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿ ಆಗಿ ಬಾ.ಮಾ ಗಿರೀಶ್ ಆಯ್ಕೆ. ಖಜಾಂಚಿಯಾಗಿ ಜಯಸಿಂಹ ಮಸೂರಿ ಆಯ್ಕೆ ಆಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಪ್ರಮಿಳಾ ಜೋಶಾಯಿ ಆಯ್ಕೆ ಆಗಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:17 pm, Sat, 23 September 23