‘ನಾನು ಆಡಂಬರ ಮಾಡಲ್ಲ, ಸುಳ್ಳು ಆಶ್ವಾಸನೆ ಕೊಡಲ್ಲ’: ಫಿಲ್ಮ್ ಚೇಂಬರ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎನ್ಎಂ ಸುರೇಶ್ ಹೇಳಿಕೆ
ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಿರ್ಮಾಪಕ ಎನ್ಎಂ ಸುರೇಶ್ ಅವರು ಸಾಕಷ್ಟು ಅನುಭವ ಹೊಂದಿದ್ದಾರೆ. ಈಗ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಲಾಗಿದೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (Karnataka Film Chamber of Commerce) ಚುನಾವಣೆ ಸಮೀಪಿಸಿದೆ. ಸೆಪ್ಟೆಂಬರ್ 23ರಂದು ಎಲೆಕ್ಷನ್ (Film Chamber Election) ನಡೆಯಲಿದೆ. ಅಧ್ಯಕ್ಷ ಸ್ಥಾನಕ್ಕಾಗಿ ಪೈಪೋಟಿ ನಡೆದಿದೆ. ಈ ಬಾರಿ ಚುನಾವಣೆಯಲ್ಲಿ ‘ಎಕ್ಸ್ಕ್ಯೂಸ್ ಮೀ’ ಸಿನಿಮಾ ಖ್ಯಾತಿಯ ನಿರ್ಮಾಪಕ ಎನ್ಎಂ ಸುರೇಶ್ ಅವರು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಅವರು ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅವರಿಗೆ ಉಮೇಶ್ ಬಣಕಾರ್, ಸಾರಾ ಗೋವಿಂದು ಮುಂತಾದ ಗಣ್ಯರು ಸಾಥ್ ನೀಡಿದ್ದಾರೆ. ತಮ್ಮ ಮುಂದೆ ಇರುವ ಗುರಿ, ಉದ್ದೇಶಗಳು ಏನು ಎಂಬುದನ್ನು ಎನ್ಎಂ ಸುರೇಶ್ (NM Suresh) ಸ್ಪಷ್ಟಪಡಿಸಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ..
‘ನಮ್ಮಲ್ಲಿ ಜವಾಬ್ದಾರಿ ತುಂಬಿದೆ. ನನ್ನ ನೇತೃತ್ವದಲ್ಲಿ ಹೊಸ ತಂಡ ಕಟ್ಟಿ ಈ ಚುನಾವಣೆ ಗೆಲ್ಲಬೇಕು ಎಂದು ಸಾರಾ ಗೋವಿಂದು ಅವರು ಜವಾಬ್ದಾರಿ ನೀಡಿದ್ದಾರೆ. ನಮ್ಮ ತಂಡದಲ್ಲಿ ಪರಿಣಿತರು ಇದ್ದಾರೆ. ಪಾರದರ್ಶಕವಾಗಿ ಕೆಲಸ ಮಾಡುವವರು ನಾವು. ಬೇರೆಯವರ ರೀತಿ ಆಡಂಬರ ಮಾಡುವುದಿಲ್ಲ. ಸುಳ್ಳು ಆಶ್ವಾಸನಗಳನ್ನು ನೀಡುವುದು ನನ್ನ ಪ್ರವೃತ್ತಿ ಅಲ್ಲ. ಈಗಾಗಲೇ ಅನೇಕ ಕೆಲಸ ಮಾಡಿದ್ದೇವೆ. ಭಗವಂತ ನಮ್ಮಿಂದ ಮಾಡಿಸಿದ್ದಾನೆ. ಚಿತ್ರರಂಗದಲ್ಲಿ ಹೊಸಬರಿಗೆ ಅವಕಾಶ ನೀಡಿದ್ದೇನೆ. ವಾಣಿಜ್ಯ ಮಂಡಳಿಗೆ 85 ವರ್ಷಗಳ ಇತಿಹಾಸ ಇದೆ. ಅನೇಕ ಮಹನೀಯರು ಇದಕ್ಕಾಗಿ ಕೆಲಸ ಮಾಡಿದ್ದಾರೆ’ ಎಂದು ಎನ್ಎಂ ಸುರೇಶ್ ಹೇಳಿದ್ದಾರೆ.
ಇದನ್ನೂ ಓದಿ: ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ: ಅಧ್ಯಕ್ಷ ಸ್ಥಾನಕ್ಕೆ ಎನ್ಎಂ ಸುರೇಶ್ ನಾಮಪತ್ರ, ಸಾರಾ ಗೋವಿಂದು ಬೆಂಬಲ
‘ಇತ್ತೀಚಿನ ದಿನಗಳಲ್ಲಿ ಆಗುತ್ತಿರುವ ಸಮಸ್ಯೆ ಎಲ್ಲರಿಗೂ ಗೊತ್ತಿದೆ. ವರ್ಷಕ್ಕೆ 250ಕ್ಕೆ ಹೆಚ್ಚು ಸಿನಿಮಾಗಳನ್ನು ನಿರ್ಮಿಸಲಾಗುತ್ತಿದೆ. ಹೊಸ ನಿರ್ಮಾಪಕರು ಅನೇಕ ಸಿನಿಮಾ ಮಾಡುತ್ತಿದ್ದಾರೆ. ಅವರಿಗೆ ಆಗುತ್ತಿರುವ ಕಷ್ಟಗಳ ಬಗ್ಗೆ ನನಗೆ ಅರಿವಿದೆ. ಮೂರು ಬಾರಿ ನಾನು ಕಾರ್ಯದರ್ಶಿ ಆಗಿದ್ದೆ. ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿದ್ದೆ. ಫಿಲ್ಮ್ ಫೆಡರೇಷನ್ ಆಫ್ ಇಂಡಿಯಾದಲ್ಲಿ ಉಪಾಧ್ಯಕ್ಷನಾಗಿ ಕೆಲಸ ಮಾಡಿದ್ದೆ. ಸಣ್ಣ ನಿರ್ಮಾಪಕನಾಗಿ ಬಂದು ಎಕ್ಸ್ಕ್ಯೂಸ್ ಮೀ ರೀತಿಯ ದೊಡ್ಡ ಸೂಪರ್ ಹಿಟ್ ಸಿನಿಮಾ ನೀಡಿದೆ’ ಎಂದಿದ್ದಾರೆ ಎನ್ಎಂ ಸುರೇಶ್.
ಕಾವೇರಿ ವಿಚಾರದಲ್ಲಿ ಒಗ್ಗಟ್ಟು ತೋರಿದ ಸ್ಯಾಂಡಲ್ವುಡ್ ಸ್ಟಾರ್ಸ್: ಯಾರ್ಯಾರು ಏನಂದ್ರು?
‘ಚಲನಚಿತ್ರ ವಾಣಿಜ್ಯ ಮಂಡಳಿಗೆ ಅದರದ್ದೇ ಆದಂತಹ ಸಂಸ್ಕೃತಿ ಇದೆ. ಅದು ತಾಯಿ ಇದ್ದಂತೆ. ದೇವಸ್ಥಾನ ಇದ್ದಂತೆ. ಅದಕ್ಕಾಗಿ ದೊಡ್ಡ ಆಶೋತ್ತರ ಇಟ್ಟುಕೊಂಡು, ಸೂಕ್ತವಾದ ರೂಪರೇಷೆ ಹಾಕಿಕೊಂಡಿದ್ದೇವೆ. ಸಾರಾ ಗೋವಿಂದು ಅವರಿಗೆ ರಾಜಕಾರಣದಲ್ಲಿ ಚೆನ್ನಾಗಿ ಹಿಡಿತ ಇದೆ. ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಕಷ್ಟು ಕೊಡುಗೆ ನೀಡಿದ್ದಾರೆ. ಚಿತ್ರರಂಗಕ್ಕೆ ತೊಂದರೆ ಆದಾಗ ಸರ್ಕಾರಗಳು ಸಹಾಯ ಮಾಡಿವೆ. ವಾಣಿಜ್ಯ ಮಂಡಳಿಯ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು, ಪರಿಹಾರ ಪಡೆಯುವುದು ಹೇಗೆ ಎಂಬುದನ್ನು ಕಲಿಸಿಕೊಟ್ಟಿದ್ದೇ ಸಾರಾ ಗೋವಿಂದು ಅವರು. ಅವರ ಮಾರ್ಗದರ್ಶನದಲ್ಲಿ ನಾವು ಸಾಗುತ್ತಿದ್ದೇವೆ’ ಎಂದು ಎನ್ಎಂ ಸುರೇಶ್ ಹೇಳಿದ್ದಾರೆ.
ಇದನ್ನೂ ಓದಿ: ಸಿಎಂ ಭೇಟಿ ಮಾಡಿದ ವಾಣಿಜ್ಯ ಮಂಡಳಿ ಪದಾಧಿಕಾರಿಗಳು: ಮಾಡಿದ ಮನವಿಗಳೇನು?
ಕಾವೇರಿಗಾಗಿ ಒಗ್ಗಟ್ಟು:
ಕರ್ನಾಟಕ ಮತ್ತು ತಮಿಳುನಾಡು ನಡುವೆ ಕಾವೇರಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸಮಸ್ಯೆ ಮುಂದುವರಿದಿದೆ. ಚಿತ್ರರಂಗದ ಅನೇಕರು ಈ ಕುರಿತಂತೆ ಧ್ವನಿ ಎತ್ತಿದ್ದಾರೆ. ಸುದ್ದಿಗೋಷ್ಠಿ ಆರಂಭಕ್ಕೂ ಮುನ್ನ ಸಾರಾ ಗೋವಿಂದು, ಎನ್ಎಂ ಸುರೇಶ್, ಉಮೇಶ್ ಬಣಕಾರ್ ಮುಂತಾದವರು ಕಾವೇರಿ ಪರವಾಗಿ ಘೋಷಣೆ ಕೂಗಿದರು. ‘ಕರ್ನಾಟಕಕ್ಕೆ ಸಂಕಷ್ಟ ಎದುರಾಗಿದೆ. ಹೋರಾಟಕ್ಕಾಗಿ ಎಲ್ಲರೂ ತಯಾರಾಗಿ ಎಂದು ಕಳೆದ ಸಭೆಯಲ್ಲಿ ನಾನು ಹೇಳಿದ್ದೆ. ಚುನಾವಣೆಗಿಂತಲೂ ರೈತರ ಹಿತ ಕಾಯುವುದೇ ಮುಖ್ಯ. ಚುನಾವಣೆ ಮುಗಿದ ತಕ್ಷಣ ಕಾವೇರಿ ಹೋರಾಟದಲ್ಲಿ ನಾವು ತೊಡಗಿಕೊಳ್ಳುತ್ತೇವೆ. ಅದಕ್ಕೆ ಇಡೀ ಚಿತ್ರರಂಗದ ಸಹಕಾರ ಇದೆ’ ಎಂದು ಸಾರಾ ಗೋವಿಂದು ಹೇಳಿದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:58 pm, Thu, 21 September 23