ರಜನೀಕಾಂತ್ ಅವರನ್ನು ಮಹಾಭಾರತದ ಆ ಪಾತ್ರಕ್ಕೆ ಹೋಲಿಸಿದ ಉಪ್ಪಿ

Upendra movie: ರಜನೀಕಾಂತ್ ನಟನೆಯ ‘ಕೂಲಿ’ ಸಿನಿಮಾ ಆಗಸ್ಟ್ 14 ರಂದು ಬಲು ಅದ್ಧೂರಿಯಾಗಿ ಬಿಡುಗಡೆ ಆಗಲಿದೆ. ಸಿನಿಮಾನಲ್ಲಿ ಉಪೇಂದ್ರ ಸಹ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೆ ಸಿನಿಮಾದ ಆಡಿಯೋ ರಿಲೀಸ್ ಕಾರ್ಯಕ್ರಮ ನಡೆದಿತ್ತು. ಕಾರ್ಯಕ್ರಮದಲ್ಲಿ ನಟ ಉಪೇಂದ್ರ ಸಹ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಉಪೇಂದ್ರ ಏನು ಮಾತನಾಡಿದರು? ಇಲ್ಲಿದೆ ವರದಿ...

ರಜನೀಕಾಂತ್ ಅವರನ್ನು ಮಹಾಭಾರತದ ಆ ಪಾತ್ರಕ್ಕೆ ಹೋಲಿಸಿದ ಉಪ್ಪಿ
Upendra Coolie

Updated on: Aug 12, 2025 | 2:12 PM

ರಜನೀಕಾಂತ್ (Rajinikanth) ನಟನೆಯ ‘ಕೂಲಿ’ ಸಿನಿಮಾ ಆಗಸ್ಟ್ 14 ರಂದು ಅದ್ಧೂರಿಯಾಗಿ ಬಿಡುಗಡೆ ಆಗಲಿದೆ. ಸಿನಿಮಾದ ಆಡಿಯೋ ರಿಲೀಸ್ ಕಾರ್ಯಕ್ರಮ ಒಂದು ವಾರದ ಹಿಂದೆ ಚೆನ್ನೈನ ನೆಹರೂ ಸ್ಟೇಡಿಯಂನಲ್ಲಿ ಬಲು ಅದ್ಧೂರಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ‘ಕೂಲಿ’ ಸಿನಿಮಾನಲ್ಲಿ ನಟಿಸಿರುವ ರಜನೀಕಾಂತ್, ಅಕ್ಕಿನೇನಿ ನಾಗಾರ್ಜುನ, ಆಮಿರ್ ಖಾನ್, ಸೌಬಿನ್, ಉಪೇಂದ್ರ ಇನ್ನೂ ಹಲವರು ಭಾಗಿ ಆಗಿದ್ದರು. ಅಂದಿನ ಕಾರ್ಯಕ್ರಮದ ವಿಡಿಯೋಗಳನ್ನು ಸನ್ ನೆಟ್​ವರ್ಕ್ಸ್​ ಇದೀಗ ಯೂಟ್ಯೂಬ್​​ನಲ್ಲಿ ಬಿಡುಗಡೆ ಮಾಡಿದ್ದು, ಕಾರ್ಯಕ್ರಮದಲ್ಲಿ ಉಪೇಂದ್ರ ಆಡಿದ ಮಾತುಗಳು ಬಹುವಾಗಿ ಗಮನ ಸೆಳೆದಿವೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಉಪೇಂದ್ರ, ‘ಎಲ್ಲರಿಗೂ ನಮಸ್ಕಾರ’ ಎಂದು ಕನ್ನಡದಲ್ಲಿ ಹೇಳಿ ಭಾಷಣ ಆರಂಭಿಸಿದರು. ಬಳಿಕ ತಮಿಳಿನಲ್ಲಿ ಮಾತು ಮುಂದುವರೆಸಿ, ‘ಈಗ ನಾನು ಹೇಳುವ ಮಾತುಗಳನ್ನು ನೀವು ಅತಿಶಯೋಕ್ತಿ ಎಂದುಕೊಳ್ಳದಿರಿ, ಇದು ನಿಜ. 25 ವರ್ಷಗಳ ಹಿಂದೆ ನಾನು ರಜನೀಕಾಂತ್ ಅವರನ್ನು ಭೇಟಿ ಮಾಡಿದ್ದೆ. ಅದು ನನ್ನ ಜೀವನದ ಎಂದೂ ಮರೆಯಲಾಗದ ಘಟನೆ. ಅಂದಿನಿಂದ ಇಂದಿನ ವರೆಗೂ ಒಬ್ಬ ಏಕಲವ್ಯ ಹೇಗೆ ದ್ರೋಣಾಚಾರ್ಯನ ಅನುಸರಿಸಿದನೋ ಹಾಗೆಯೇ ನಾನು ರಜನೀಕಾಂತ್ ಅವರನ್ನು ಅನುಸರಿಸುತ್ತಾ ಬಂದಿದ್ದೀನಿ’ ಎಂದರು.

‘ಅವರ ಪ್ರತಿ ವಿಡಿಯೋವನ್ನು ತಪ್ಪದೇ 10-20-100 ಬಾರಿ ನೋಡುತ್ತಲೇ ಇರುತ್ತೀನಿ. ಅದು ಮನೊರಂಜನೆಗಾಗಿ ಅಲ್ಲ ಬದಲಿಗೆ ಜ್ಞಾನೋದಯಕ್ಕಾಗಿ ನೋಡುತ್ತಲೇ ಇರುತ್ತೀನಿ. ಆ ದ್ರೋಣಾಚಾರ್ಯ, ಏಕಲವ್ಯನಿಂದ ಬೆರಳು ತೆಗೆದುಕೊಂಡ, ಆದರೆ ರಜನೀಕಾಂತ್, ಈ ಏಕಲವ್ಯನ (ಉಪೇಂದ್ರ)ನ ಬೆರಳು ಹಿಡಿದು ‘ಕೂಲಿ’ ಎಂಬ ಪ್ರಪಂಚಕ್ಕೆ ಕರೆದುಕೊಂಡು ಬಂದರು. ಇಲ್ಲಿ ಬಂದು ನೋಡಿದರೆ ಆಮಿರ್ ಖಾನ್, ನಾಗಾರ್ಜುನ, ಸೌಬಿನ್ ಇನ್ನೂ ಹಲವಾರು ದಿಗ್ಗಜರೇ ಇದ್ದಾರೆ. ಈ ಪ್ರಪಂಚಕ್ಕೆ ಕರೆದುಕೊಂಡು ಬಂದಿದ್ದಕ್ಕೆ, ನನಗೆ ಆಶೀರ್ವಾದ ಮಾಡಿದ್ದಕ್ಕೆ ಬಹಳ ಧನ್ಯವಾದಗಳು’ ಎಂದಿದ್ದಾರೆ ಉಪೇಂದ್ರ.

ಇದನ್ನೂ ಓದಿ:ಮಾಲಾಶ್ರೀ ಪುತ್ರಿ ಆರಾಧನಾಗೆ ‘ನೆಕ್ಸ್ಟ್ ಲೆವೆಲ್’ ಅವಕಾಶ; ಉಪೇಂದ್ರ ಜೊತೆ ಸಿನಿಮಾ

‘ಎಲ್ಲ ಬಾಲಿವುಡ್, ಹಾಲಿವುಡ್, ಸ್ಯಾಂಡಲ್​ವುಡ್, ಟಾಲಿವುಡ್ ಎಲ್ಲ ಚಿತ್ರರಂಗದಲ್ಲಿಯೂ ದೊಡ್ಡ ದೊಡ್ಡ ಸ್ಟಾರ್​ ನಟರುಗಳು ಇದ್ದಾರೆ. ಆದರೆ ಎಲ್ಲ ಸ್ಟಾರ್ ನಟರೂ ಸಹ ಮೊದಲ ದಿನ ಮೊದಲ ಶೋ ನೋಡುವುದು ಅದು ರಜನೀಕಾಂತ್ ಸಿನಿಮಾವನ್ನು. ‘ಕೂಲಿ’ ಸಿನಿಮಾ ಎಲ್ಲ ಸಿನಿಮಾ ಪ್ರೇಮಿಗಳಿಗೂ ಹಬ್ಬವಿದ್ದಂತೆ. ಇಂಥಹಾ ಒಂದು ಅದ್ಭುತ ಅವಕಾಶ ಕೊಟ್ಟಿದ್ದಕ್ಕೆ ಮಾರನ್ ಅವರಿಗೆ ಲೋಕೇಶ್ ಅವರಿಗೆ, ಸಿನಿಮಾದ ಎಲ್ಲ ತಂತ್ರಜ್ಞರಿಗೆ, ನಟ-ನಟಿಯರಿಗೆ ಧನ್ಯವಾದ’ ಎಂದಿದ್ದಾರೆ ಉಪ್ಪಿ.

ಎರಡು ದಶಕದ ಹಿಂದೆ ಉಪೇಂದ್ರ ಅವರ ಸಿನಿಮಾ ಒಂದರ ಮುಹೂರ್ತಕ್ಕೆ ರಜನೀಕಾಂತ್ ಅತಿಥಿಯಾಗಿ ಬಂದಿದ್ದರು. ರಜನೀಕಾಂತ್ ಅವರ ಬಲುದೊಡ್ಡ ಅಭಿಮಾನಿ ಉಪೇಂದ್ರ. ಇದೀಗ ಮೊದಲ ಬಾರಿಗೆ ರಜನೀಕಾಂತ್ ಅವರೊಟ್ಟಿಗೆ ಉಪೇಂದ್ರ ನಟಿಸಿದ್ದಾರೆ. ಇದು ಅವರ ಮೊದಲ ತಮಿಳು ಸಿನಿಮಾ ಸಹ ಹೌದು. ‘ಕೂಲಿ’ ಸಿನಿಮಾ ಆಗಸ್ಟ್ 14 ರಂದು ಬಿಡುಗಡೆ ಆಗಲಿದೆ. ಸಿನಿಮಾನಲ್ಲಿ ಉಪೇಂದ್ರ ಮಾತ್ರವಲ್ಲದೆ ಕನ್ನಡತಿ ರಚಿತಾ ರಾಮ್ ಸಹ ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ