‘ಸು ಫ್ರಂ ಸೋ’ ಸಿನಿಮಾ ನೋಡಿ ಮೆಚ್ಚಿದ ಬಾಲಿವುಡ್ ಸ್ಟಾರ್: ರೀಮೇಕ್ ಬಗ್ಗೆ ಚರ್ಚೆ?
Su From So Kannada Movie: ರಾಜ್ ಬಿ ಶೆಟ್ಟಿ ನಿರ್ಮಿಸಿ, ಜೆಪಿ ತುಮ್ಮಿನಾಡ್ ನಿರ್ದೇಶನ ಮಾಡಿರುವ ‘ಸು ಫ್ರಂ ಸೋ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ದಾಖಲೆಗಳನ್ನು ಬರೆಯುತ್ತಿದೆ. ಸಿನಿಮಾ, ಕರ್ನಾಟಕ ಮಾತ್ರವಲ್ಲದೆ, ಕೇರಳ, ಆಂಧ್ರ, ತೆಲಂಗಾಣ ಪ್ರೇಕ್ಷಕರನ್ನು ಸಹ ಸೆಳೆದಿದೆ. ಇದೀಗ ಬಾಲಿವುಡ್ ಸ್ಟಾರ್ ನಟ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕನ್ನಡ ಸಿನಿಮಾ ‘ಸು ಫ್ರಂ ಸೋ’ (Su From So) ಬಾಕ್ಸ್ ಆಫೀಸ್ನಲ್ಲಿ ದಾಖಲೆಗಳನ್ನು ಬರೆಯುತ್ತಿದೆ. ರಾಜ್ಯದಲ್ಲಿ ಯಶಸ್ಸಿನ ನಾಗಾಲೋಟ ಮುಂದುವರೆಸಿರುವ ‘ಸು ಫ್ರಂ ಸೋ’ ಸಿನಿಮಾ ಕೇರಳ, ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯಗಳಿಗೆ ಲಗ್ಗೆ ಇಟ್ಟು ಅಲ್ಲಿಯೂ ಪ್ರೇಕ್ಷಕರನ್ನು ನಕ್ಕು-ನಗಿಸುತ್ತಿದೆ. ಇದೀಗ ಸಿನಿಮಾ ಬಾಲಿವುಡ್ಗೂ ಕಾಲಿಡುವ ಮುನ್ಸೂಚನೆ ದೊರೆತಿದೆ. ಬಾಲಿವುಡ್ನ ಸ್ಟಾರ್ ನಟರೊಬ್ಬರು ಇದೀಗ ‘ಸು ಫ್ರಂ ಸೋ’ ಸಿನಿಮಾ ನೋಡಿ ಬಲುವಾಗಿ ಮೆಚ್ಚಿಕೊಂಡಿದ್ದು, ಸಿನಿಮಾದ ನಿರ್ದೇಶಕ ಜೆಪಿ ತುಮ್ಮಿನಾಡ್ ಅವರನ್ನು ಭೇಟಿಯಾಗಿ ಅಭಿನಂದನೆ ತಿಳಿಸಿದ್ದಾರೆ.
ಬಾಲಿವುಡ್ ಸ್ಟಾರ್ ನಟರಾಗಿರುವ ಅಜಯ್ ದೇವಗನ್ ‘ಸು ಫ್ರಂ ಸೋ’ ಸಿನಿಮಾ ವೀಕ್ಷಣೆ ಮಾಡಿದ್ದಾರೆ. ಈ ಬಗ್ಗೆ ನಿರ್ದೇಶಕ ಜೆಪಿ ತುಮ್ಮಿನಾಡ್ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, ‘ಅಜಯ್ ದೇವಗನ್ ಅವರು ನಮ್ಮ ಸಿನಿಮಾ ವೀಕ್ಷಿಸಿ ಬಹುವಾಗಿ ಮೆಚ್ಚಿಕೊಂಡಿದ್ದಾರೆ. ನಮ್ಮನ್ನು ತಮ್ಮ ಮನೆಗೆ ಆಹ್ವಾನಿಸಿ ಸಿನಿಮಾ ಬಗ್ಗೆ ಚರ್ಚೆ ನಡೆಸಿದರು. ಅವರೆಷ್ಟು ಅದ್ಭುತವಾದ ವ್ಯಕ್ತಿತ್ವ ಉಳ್ಳವರು ಎಂಬುದು ಅವರೊಟ್ಟಿಗಿನ ಭೇಟಿಯಿಂದ ತಿಳಿದು ಬಂತು. ದಿ ಗ್ರೇಟ್ ಅಜಯ್ ಅವರಿಗೆ ನನ್ನ ಹೃದಯಪೂರ್ವಕ ಗೌರವಗಳು’ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಅಜಯ್ ಅವರೊಟ್ಟಿಗೆ ಚಿತ್ರವನ್ನು ಸಹ ಹಂಚಿಕೊಂಡಿದ್ದಾರೆ.
ಅಜಯ್ ದೇವಗನ್ ಅವರು ಸ್ಟಾರ್ ನಟರಾಗಿರುವ ಜೊತೆಗೆ ನಿರ್ಮಾಣ ಸಂಸ್ಥೆ ಹೊಂದಿದ್ದು ಸಿನಿಮಾ ವಿತರಣೆಯನ್ನೂ ಮಾಡುತ್ತಾರೆ. ಇತ್ತೀಚೆಗಷ್ಟೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ರಾಜ್ ಬಿ ಶೆಟ್ಟಿ, ನಮ್ಮ ಸಿನಿಮಾದ ರೀಮೇಕ್ ಹಕ್ಕುಗಳನ್ನು ಹಿಂದಿಯವರು ಕೇಳಿದ್ದಾರೆ ಎಂದಿದ್ದರು. ಇದೀಗ ಅಜಯ್ ದೇವಗನ್ ಅವರು ಸಿನಿಮಾದ ನಿರ್ದೇಶಕರನ್ನು ಭೇಟಿ ಮಾಡಿರುವುದು ಈ ಸುದ್ದಿಗೆ ಇನ್ನಷ್ಟು ಪುಷ್ಠಿ ನೀಡಿದೆ. ಅಜಯ್ ದೇವಗನ್, ದಕ್ಷಿಣದ ಹಲವಾರು ಸಿನಿಮಾಗಳನ್ನು ಹಿಂದಿಗೆ ರೀಮೇಕ್ ಮಾಡಿ ಭಾರಿ ಗೆಲುವು ಕಂಡಿದ್ದಾರೆ. ‘ದೃಶ್ಯಂ’, ‘ಭೋಲಾ’, ‘ಸಿಂಘಂ’ ಇನ್ನೂ ಹಲವು ದಕ್ಷಿಣದ ಸಿನಿಮಾಗಳನ್ನು ಅಜಯ್ ದೇವಗನ್ ರೀಮೇಕ್ ಮಾಡಿದ್ದಾರೆ. ಇದೀಗ ‘ಸು ಫ್ರಂ ಸೋ’ ಸಿನಿಮಾವನ್ನೂ ಅಜಯ್ ರೀಮೇಕ್ ಮಾಡಲಿದ್ದಾರೆಯೇ ಎಂಬ ಅನುಮಾನ ಮೂಡಿದೆ.
ಇದನ್ನೂ ಓದಿ:‘ಸು ಫ್ರಂ ಸೋ’ ಈ ವರೆಗೆ ಗಳಿಸಿದ್ದೆಷ್ಟು, ರಾಜ್ ಬಿ ಶೆಟ್ಟಿಯ ಸ್ಪಷ್ಟ ಉತ್ತರ
‘ಸು ಫ್ರಂ ಸೋ’ ಸಿನಿಮಾ ಅನ್ನು ರಾಜ್ ಬಿ ಶೆಟ್ಟಿ, ತಮ್ಮ ಲೈಟರ್ ಬುದ್ಧ ನಿರ್ಮಾಣ ಸಂಸ್ಥೆಯ ಮೂಲಕ ನಿರ್ಮಾಣ ಮಾಡಿದ್ದು, ಜೆಪಿ ತುಮ್ಮಿನಾಡ್ ನಿರ್ದೇಶನ ಮಾಡುವ ಜೊತೆಗೆ ನಟನೆಯನ್ನೂ ಮಾಡಿದ್ದಾರೆ. ಸಿನಿಮಾ ಬಿಡುಗಡೆ ಆಗಿ 17 ದಿನಗಳಾಗಿದ್ದು ಈ ವರೆಗೆ ಸುಮಾರು 70 ಕೋಟಿ ಹಣವನ್ನು ಸಿನಿಮಾ ಗಳಿಸಿಕೊಂಡಿದೆ. ಸಿನಿಮಾ ಇನ್ನೂ ಹಲವೆಡೆ ತುಂಬಿದ ಗೃಹಗಳ ಪ್ರದರ್ಶನ ಕಾಣುತ್ತಿದ್ದು, 100 ಕೋಟಿ ಕ್ಲಬ್ ಸೇರುವುದು ಪಕ್ಕಾ ಎನ್ನಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




