‘ಸು ಫ್ರಂ ಸೋ’ ಈ ವರೆಗೆ ಗಳಿಸಿದ್ದೆಷ್ಟು, ರಾಜ್ ಬಿ ಶೆಟ್ಟಿಯ ಸ್ಪಷ್ಟ ಉತ್ತರ
Su From So movie collections: ರಾಜ್ ಬಿ ಶೆಟ್ಟಿ ನಿರ್ಮಾಣ ಮಾಡಿ ನಟನೆಯನ್ನೂ ಮಾಡಿರುವ ‘ಸು ಫ್ರಂ ಸೋ’ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಸಿನಿಂಆ ಕೌಟುಂಬಿಕ ಪ್ರೇಕ್ಷಕರಿಗೆ ಬಹಳ ಇಷ್ಟವಾಗಿದೆ. ಬೆಂಗಳೂರಿನ ಹಲವೆಡೆ ಸಿನಿಮಾ ಇಂದಿಗೂ ಹೌಸ್ ಫುಲ್ ಆಗುತ್ತಿದೆ. ಅಂದಹಾಗೆ ಸಿನಿಮಾದ ಕಲೆಕ್ಷನ್ ಬಗ್ಗೆ ಸ್ವತಃ ರಾಜ್ ಬಿ ಶೆಟ್ಟಿ ಮಾಹಿತಿ ನೀಡಿದ್ದಾರೆ.

ರಾಜ್ ಬಿ ಶೆಟ್ಟಿ (Raj B Shetty) ನಿರ್ಮಿಸಿ, ಜೆಪಿ ತುಮ್ಮಿನಾಡ್ ನಿರ್ದೇಶಿಸಿ, ಶನಿಲ್ ಗೌತಮ್ ನಟಿಸಿರುವ ‘ಸು ಫ್ರಂ ಸೋ’ ಸಿನಿಮಾ ದಾಖಲೆಗಳನ್ನು ಬರೆಯುತ್ತಿದೆ. ಅದಕ್ಕಿಂತಲೂ ಮುಖ್ಯವಾಗಿ ಚಿತ್ರಮಂದಿರಗಳಿಂದ ದೂರವಾಗಿದ್ದ ಕೌಟುಂಬಿಕ ಪ್ರೇಕ್ಷಕರನ್ನು ಮತ್ತೆ ಚಿತ್ರಮಂದಿರಕ್ಕೆ ಕರೆತಂದಿದೆ. ಸಿನಿಮಾದ ಯಶಸ್ಸನ್ನು ಸಂಭ್ರಮಿಸುತ್ತಿರುವ ತಂಡ ಅದರ ಜೊತೆ-ಜೊತೆಗೆ ಸಿನಿಮಾವನ್ನು ಸಾಧ್ಯವಾದಷ್ಟು ಹೆಚ್ಚು ಪ್ರೇಕ್ಷಕರಿಗೆ, ಭಿನ್ನ ಭಿನ್ನ ಭಾಷಿಕ ಜನರಿಗೆ ತಲುಪಿಸುವ ಪ್ರಯತ್ನದಲ್ಲಿದ್ದಾರೆ.
‘ಸು ಫ್ರಂ ಸೋ’ ಸಿನಿಮಾ ಕಡಿಮೆ ಬಜೆಟ್ನಲ್ಲಿ ನಿರ್ಮಿಸಿ ಭಾರಿ ದೊಡ್ಡ ಕಲೆಕ್ಷನ್ ಅನ್ನು ಮಾಡುತ್ತಿದೆ. ಈ ಸಿನಿಮಾ ಈಗಾಗಲೇ 50 ಕೋಟಿ ಕ್ಲಬ್ ಸೇರಿ ಆಗಿದೆ ಎಂದು ಕೆಲವು ಸಿನಿಮಾ ಕಲೆಕ್ಷನ್ ವೆಬ್ಸೈಟ್ಗಳು ಸುದ್ದಿ ಮಾಡಿವೆ. ನಿನ್ನೆ (ಆಗಸ್ಟ್ 06) ಹೈದರಾಬಾದ್ನಲ್ಲಿ ಸಿನಿಮಾದ ತೆಲುಗು ಆವೃತ್ತಿಯ ಪ್ರಚಾರದಲ್ಲಿ ತೊಡಗಿದ್ದ ರಾಜ್ ಬಿ ಶೆಟ್ಟಿ, ತಮ್ಮ ನಿರ್ಮಾಣದ ‘ಸು ಫ್ರಂ ಸೋ’ ಸಿನಿಮಾ ಈವರೆಗೆ ಎಷ್ಟು ಮೊತ್ತ ಗಳಿಕೆ ಮಾಡಿದೆ ಎಂಬುದನ್ನು ಹೇಳಿಕೊಂಡಿದ್ದಾರೆ.
ಸಿನಿಮಾದ ಕಲೆಕ್ಷನ್ ಬಗ್ಗೆ ತೆಲುಗು ಪತ್ರಕರ್ತರು ನಿರ್ಮಾಪಕ ರಾಜ್ ಬಿ ಶೆಟ್ಟಿಯವರಿಗೆ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಮುಚ್ಚುಮರೆಯಿಲ್ಲದೆ ಉತ್ತರಿಸಿದ ರಾಜ್ ಬಿ ಶೆಟ್ಟಿ, ನಮ್ಮ ಸಿನಿಮಾದ ಒಟ್ಟು ಕಲೆಕ್ಷನ್ 10 ದಿನಕ್ಕೆ 35 ಕೋಟಿ ರೂಪಾಯಿಗಳಾಗಿದೆ. ಕರ್ನಾಟಕದಲ್ಲಿ ಮಾತ್ರವೇ 10 ದಿನಕ್ಕೆ 35 ಕೋಟಿ ರೂಪಾಯಿಗಳನ್ನು ಗಳಿಕೆ ಮಾಡಿದೆ. ಇನ್ನು ಹೊರ ದೇಶಗಳಲ್ಲಿ ಐದು ಕೋಟಿ ಗಳಿಕೆ ಮಾಡಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:‘ಹರಿ ಹರ ವೀರ ಮಲ್ಲು’ ಫ್ಲಾಪ್, ಬ್ರಿಲಿಯಂಟ್ ಐಡಿಯಾ ಮಾಡಿದ ಪವನ್ ಕಲ್ಯಾಣ್
ಮುಂದುವರೆದು ಮಾತನಾಡಿ, ಹೊರದೇಶಗಳಲ್ಲಿ ನಮ್ಮ ಸಿನಿಮಾ ಈ ವರೆಗೆ ಐದು ಕೋಟಿ ಗಳಿಕೆ ಮಾಡಿರುವುದು ನಮಗೆ ಭಾರಿ ದೊಡ್ಡ ಆಶ್ಚರ್ಯ. ಅಲ್ಲಿ ನಾವು ಪ್ರಚಾರ ಮಾಡಿಲ್ಲ, ನಮ್ಮ ಬಗ್ಗೆ ಅವರಿಗೆ ಗೊತ್ತಿಲ್ಲ ಆದರೂ ಸಹ ನಮ್ಮ ಸಿನಿಮಾ ಅನ್ನು ಅಲ್ಲಿನವರು ನೋಡಿದ್ದಾರೆ. ಸಿನಿಮಾಕ್ಕೆ ಪ್ರೀತಿ ನೀಡಿದ್ದಾರೆ ಎಂದಿದ್ದಾರೆ.
‘ಸು ಫ್ರಂ ಸೋ’ ಸಿನಿಮಾ ಬಿಡುಗಡೆ ಆದ ದಿನ ಕೇವಲ 78 ಲಕ್ಷ ರೂಪಾಯಿ ಹಣ ಗಳಿಕೆ ಮಾಡಿತ್ತು. ಅದಾದ ಬಳಿಕ ಸಿನಿಮಾದ ಕಲೆಕ್ಷನ್ ಪ್ರತಿದಿನವೂ ಏರುತ್ತಲೇ ಹೋಯ್ತು. ಪ್ರತಿ ದಿನವೂ ಮೂರು ಕೋಟಿಗೂ ಹೆಚ್ಚು ಮೊತ್ತವನ್ನು ‘ಸು ಫ್ರಂ ಸೋ’ ಗಳಿಸುತ್ತಿದೆ ಎನ್ನಲಾಗುತ್ತಿದೆ. ರಾಜ್ ಅವರೇ ಹೇಳಿಕೊಂಡಿರುವಂತೆ ಕರ್ನಾಟಕದಲ್ಲಿ 10 ದಿನಕ್ಕೆ 35 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಮಲಯಾಳಂ, ಓವರ್ಸೀಸ್ ಎಲ್ಲವೂ ಸೇರಿ 12 ದಿನಕ್ಕೆ 50 ಕೋಟಿ ಕಲೆಕ್ಷನ್ ಆಗಿರುವುದರಲ್ಲಿ ಅನುಮಾನವೇ ಇಲ್ಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:46 pm, Thu, 7 August 25




