ಸದ್ದಿಲ್ಲದೆ ಶುರುವಾಯ್ತು ಉಪೇಂದ್ರ ಹೊಸ ಸಿನಿಮಾ, ಹೆಸರೇನು?

Upendra: ಉಪೇಂದ್ರ ಇತ್ತೀಚೆಗೆ ಪರ ಭಾಷೆಯ ಸಿನಿಮಾಗಳಲ್ಲಿ ಹೆಚ್ಚು ಬ್ಯುಸಿ ಆಗಿಬಿಟ್ಟಿದ್ದಾರೆ. ಉಪೇಂದ್ರ ಅವರ ಕನ್ನಡ ಸಿನಿಮಾಗಳ ಸುದ್ದಿ ಇತ್ತೀಚೆಗೆ ಕೇಳಿದ್ದೇ ಇಲ್ಲ. ಇದೀಗ ಉಪೇಂದ್ರ ನಟನೆಯ ಹೊಸ ಸಿನಿಮಾ ಒಂದು ಸದ್ದಿಲ್ಲದೆ ಮುಹೂರ್ತ ಮುಗಿಸಿಕೊಂಡಿದೆ. ಉಪೇಂದ್ರ ಅವರು ತಮ್ಮ ಲಕ್ಕಿ ನಿರ್ದೇಶಕನ ಜೊತೆಗೆ ಹೊಸ ಸಿನಿಮಾಕ್ಕಾಗಿ ಕೈ ಜೋಡಿಸಿದ್ದಾರೆ. ಯಾರು ಆ ನಿರ್ದೇಶಕ, ಸಿನಿಮಾ ಹೆಸರೇನು?

ಸದ್ದಿಲ್ಲದೆ ಶುರುವಾಯ್ತು ಉಪೇಂದ್ರ ಹೊಸ ಸಿನಿಮಾ, ಹೆಸರೇನು?
Upendra

Updated on: Jun 07, 2025 | 5:53 PM

ನಟ ಉಪೇಂದ್ರ (Upendra) ಇತ್ತೀಚೆಗೆ ತಮ್ಮ ಪರಭಾಷೆ ಸಿನಿಮಾಗಳಿಂದಲೇ ಹೆಚ್ಚಾಗಿ ಸುದ್ದಿಯಲ್ಲಿದ್ದಾರೆ. ಉಪೇಂದ್ರ ಅವರ ಹೊಸ ಕನ್ನಡ ಸಿನಿಮಾ ಇತ್ತೀಚೆಗೆ ಸುದ್ದಿ ಆಗಿದ್ದು ಕಡಿಮೆ. ಉಪೇಂದ್ರ ನಟನೆಯ ‘45’ ಸಿನಿಮಾ ಬಿಡುಗಡೆಯ ಹೊಸ್ತಿಲಲ್ಲಿದೆ. ತೆಲುಗಿನಲ್ಲಿ ಒಂದು ಹಾಗೂ ತಮಿಳಿನಲ್ಲಿ ಒಂದು ಭಾರಿ ಬಜೆಟ್ ಸಿನಿಮಾಗಳಲ್ಲಿ ಉಪೇಂದ್ರ ನಟಿಸುತ್ತಿದ್ದಾರೆ. ಇದೆಲ್ಲದರ ನಡುವೆ ಇದೀಗ ಉಪ್ಪಿ ನಟನೆಯ ಹೊಸ ಕನ್ನಡ ಸಿನಿಮಾ ಸದ್ದಿಲ್ಲದೆ ಸೆಟ್ಟೇರಿದೆ.

ಉಪೇಂದ್ರ ನಟನೆಯ ನಾಲ್ಕು ಸಿನಿಮಾಗಳನ್ನು ಈ ವರೆಗೆ ನಿರ್ದೇಶನ ಮಾಡಿರುವ ಹಿರಿಯ ನಿರ್ದೇಶಕ ನಾಗಣ್ಣ ನಿರ್ದೇಶಿಸುತ್ತಿರುವ ‘ಭಾರ್ಗವ’ ಹೆಸರಿನ ಸಿನಿಮಾನಲ್ಲಿ ಉಪ್ಪಿ ನಟಿಸುತ್ತಿದ್ದಾರೆ. ‘ದಿ ವೈಲೆಂಟ್ ಫ್ಯಾಮಿಲಿ ಮ್ಯಾನ್’ ಎಂಬುದು ಸಿನಿಮಾದ ಟೈಟಲ್​ನ ಅಡಿಬರಹ. ಇದೊಂದು ಪಕ್ಕಾ ಮಾಸ್ ಸಿನಿಮಾ ಆಗಿದ್ದು, ಮಾಸ್ ಅಂಶದ ಜೊತೆಗೆ ಫ್ಯಾಮಿಲಿ ಸೆಂಟಿಮೆಂಟ್ ಸಹ ಇರಲಿದೆ.

ಹಲಸೂರಿನ ಸೋಮನಾಥೇಶ್ವರ ದೇವಾಲಯದಲ್ಲಿ ಸರಳವಾಗಿ ಸಿನಿಮಾದ ಮುಹೂರ್ತ ಮಾಡಲಾಗಿದೆ. ಸಿನಿಮಾದ ಚಿತ್ರೀಕರಣ ಇದೇ ತಿಂಗಳು 23ನೇ ತಾರೀಖಿನಿಂದ ಪ್ರಾರಂಭ ಆಗುತ್ತಿದೆ. ಸಿನಿಮಾಕ್ಕಾಗಿ ಕಂಠೀರವ ಸ್ಟುಡಿಯೋನಲ್ಲಿ ಸೆಟ್ ನಿರ್ಮಾಣ ಮಾಡಲಾಗುತ್ತಿದೆ. ಸೆಟ್​ನ ಜೊತೆಗೆ ಹೊರಾಂಗಣ ಚಿತ್ರೀಕರಣವೂ ಇರಲಿದ್ದು, ಮಂಗಳೂರು ಮತ್ತು ರಾಜ್ಯದ ಇನ್ನೂ ಕೆಲವೆಡೆ ಸಿನಿಮಾದ ಚಿತ್ರೀಕರಣ ನಡೆಯಲಿದೆ.

ಇದನ್ನೂ ಓದಿ:ಆಂಧ್ರ ಕಿಂಗ್ ಆಗಿದ್ದಾರೆ ಉಪೇಂದ್ರ, ಚಿತ್ರೀಕರಣ ಶುರು, ಆದರೆ…

ಕಿರುತೆರೆ ನಟಿಯಾಗಿ ಹೆಸರು ಮಾಡಿರುವ ಅಂಕಿತಾ ಅಮರ್, ಈ ಸಿನಿಮಾನಲ್ಲಿ ಉಪೇಂದ್ರ ಜೊತೆ ನಾಯಕಿಯಾಗಿ ನಟಿಸುತ್ತಿದ್ದಾರೆ. ರಂಗಾಯಣ ರಘು, ಅವಿನಾಶ್ ಅವರುಗಳು ಸಹ ಸಿನಿಮಾನಲ್ಲಿದ್ದಾರೆ. ‘ವಿಷ್ಣುವರ್ಧನ’, ‘ಕೋಟಿಗೊಬ್ಬ 2’ ಇನ್ನೂ ಕೆಲವು ಸೂಪರ್ ಹಿಟ್ ಸಿನಿಮಾಗಳಿಗೆ ಕೆಲಸ ಮಾಡಿರುವ ರಾಜರತ್ನಂ ಅವರು ಕ್ಯಾಮೆರಾ ಕೆಲಸ ನಿರ್ವಹಿಸಲಿದ್ದಾರೆ. ಅರ್ಜುನ್ ಜನ್ಯ ಸಿನಿಮಾಕ್ಕೆ ಸಂಗೀತ ನೀಡಿದ್ದಾರೆ.

ಉಪ್ಪಿ ನಟನೆಯ ‘ಗೋಕರ್ಣ’, ‘ಗೌರಮ್ಮ’, ‘ಕುಟುಂಬ’, ‘ದುಬೈ ಬಾಬು’ ಸಿನಿಮಾಗಳನ್ನು ನಾಗಣ್ಣ ನಿರ್ದೇಶನ ಮಾಡಿದ್ದರು. ಈಗ ‘ಭಾರ್ಗವ’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಉಪ್ಪಿ-ನಾಗಣ್ಣ ಕಾಂಬಿನೇಷನ್​ನ ಈ ಹಿಂದಿನ ಸಿನಿಮಾಗಳು ರೀಮೇಕ್ ಸಿನಿಮಾಗಳಾಗಿದ್ದವು. ಆದರೆ ‘ಭಾರ್ಗವ’ ಸ್ವಮೇಕ್ ಸಿನಿಮಾ ಆಗಿರಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:53 pm, Sat, 7 June 25