ಒಂದು ಸಿನಿಮಾ ಹಿಟ್ ಆದ ಕೂಡಲೇ ನಾಯಕ ನಟ-ನಟಿಯರು ಐಶಾರಾಮಿ ಕಾರುಗಳನ್ನು ಕೊಳ್ಳುತ್ತಾರೆ. ಪಟ್ಟನೆ ಸಂಭಾವನೆ ಏರಿಸಿಕೊಳ್ಳುತ್ತಾರೆ. ಎರಡು ಮೂರು ಸಿನಿಮಾ ಆಗಿಬಿಟ್ಟರಂತೂ ಜನ್ಮಕ್ಕಾಗುವಷ್ಟು ಹಣ ಗಳಿಸಿಬಿಡುತ್ತಾರೆ. ಕನ್ನಡದ ಸ್ಟಾರ್ ನಟರ ಸಂಭಾವನೆಯಂತೂ (Remuneration) ಕೋಟಿಗಳಲ್ಲಿದೆ. ಆದರೆ ಸಿನಿಮಾ ರಂಗದವರೆಲ್ಲರಿಗೂ ಹೀಗೆ ಜನ್ಮಕ್ಕಾಗುವಷ್ಟು ಹಣ ಸಿಗುತ್ತದೆಯೇ ಎಂದರೆ ಖಂಡಿತ ಇಲ್ಲ. ಕೆಲವು ಸ್ಟಾರ್ ನಟರಿಗಿಂತಲೂ ಉತ್ತಮ ನಟರೆನಿಸಿಕೊಂಡಿರುವ ಪೋಷಕ ನಟರು ಇಂದಿಗೂ ಬಾಡಿಗೆ ಮನೆಯಲ್ಲಿ ಬದುಕುತ್ತಾ ಅರೆ ಹೊಟ್ಟೆ ಉಣ್ಣುತ್ತಿದ್ದಾರೆ. ಅವರಲ್ಲಿ ಕನ್ನಡ ಚಿತ್ರರಂಗದ ಹಿರಿಯ ನಟ ವೈಜನಾಥ ಬಿರಾದರ (Vaijanath Biradar) ಸಹ ಒಬ್ಬರು.
ಜನಪದ ನೃತ್ಯ, ನಾಟಕ, ಬೀದಿ ನಾಟಕ ಎಲ್ಲ ಮಾಡಿ ನಟನಾಗುವ ಆಸೆಯಿಂದ ಬಂದ ಬಿರಾದರ ಅವರು ದಶಕಗಳಿಂದಲೂ ಕನ್ನಡ ಚಿತ್ರರಂಗದಲ್ಲಿದ್ದಾರೆ. ಭಿಕ್ಷುಕನ ಪಾತ್ರ, ಕುಡುಕನ ಪಾತ್ರ ಹೀಗೆ ಯಾವುದಾದರೂ ಸರಿಯೇ ಎಂದು ನಟಿಸುತ್ತಾ ಬಂದಿರುವ ಬಿರಾದರ ಅವರಲ್ಲಿ ಎಂಥಹಾ ನಟನಿದ್ದಾನೆ ಎಂದು ತೋರಿಸಿಕೊಟ್ಟಿದ್ದು ಗಿರೀಶ್ ಕಾಸರವಳ್ಳಿ ನಿರ್ದೇಶನದ ಕನಸೆಂಬೊ ಕುದುರೆಯೇರಿ ಸಿನಿಮಾ. ಆ ಸಿನಿಮಾದ ಅಭಿನಯಕ್ಕೆ ಬಿರಾದರ ಅವರಿಗೆ ರಾಷ್ಟ್ರಪ್ರಶಸ್ತಿಯನ್ನು ನಿರೀಕ್ಷಿಸಲಾಗಿತ್ತು ಆದರೆ ಉತ್ತರದ ವಶೀಲಿಬಾಜಿಯ ಮುಂದೆ ಬಿರಾದರ ಅಭಿನಯ ಪ್ರತಿಭೆ ಹಿನ್ನೆಲೆಗೆ ಸರಿದಿತ್ತು.
ಕಲಾ ಸೇವೆಗೆ ಬದುಕಿನ ಅರ್ಧ ಭಾಗವನ್ನೇ ಅರ್ಪಿಸುವ ಬಿರಾದರ ಆರ್ಥಿಕವಾಗಿ ಈಗಲೂ ಹಿಂದುಳಿದಿದ್ದಾರೆ. ಬಿರಾದರ ಪ್ರಮುಖ ಪಾತ್ರದಲ್ಲಿ ನಟಿಸಿರುವ 90 ಬಿಡಿ ಮನೇಗ್ ನಡಿ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ತಮ್ಮ ಆರ್ಥಿಕ ಸ್ಥಿತಿಯ ಬಗ್ಗೆ ಯಾವುದೇ ಭಾವಾವೇಷವಿಲ್ಲದೆ ಸಹಜವಾಗಿಯೇ ಮಾತನಾಡಿದ ಬಿರಾದರ, ”ನಾನು ಈಗಲೂ ಬಾಡಿಗೆ ಮನೆಯಲ್ಲಿಯೇ ವಾಸವಿದ್ದೇನೆ” ಎಂದರು. 500 ಸಿನಿಮಾಗಳು ಮಾಡಿರುವ ನಟನೊಬ್ಬ ಇನ್ನೂ ಬಾಡಿಗೆ ಮನೆಯಲ್ಲಿ ಜೀವನ ಸಾಗಿಸುತ್ತಿರುವುದು ಕನ್ನಡ ಚಿತ್ರರಂಗದಲ್ಲಿ ಮಾತ್ರವೇ ಸಾಧ್ಯವೋ ಏನೋ? ಬೇರೆ ಚಿತ್ರರಂಗಗಳಲ್ಲಾಗಿದ್ದಿದ್ದರೆ ಸರ್ಕಾರವೋ ಅಥವಾ ಚಿತ್ರರಂಗದ ಶ್ರೀಮಂತ ಸಂಘಗಳೋ ಅವರಿಗೆ ಒಂದು ತುಂಡು ಭೂಮಿ ನೀಡಿ ಮನೆ ಕಟ್ಟಿಕೊಳ್ಳಲು ಸಹಾಯವನ್ನಾದರೂ ಮಾಡುತ್ತಿದ್ದವು.
ಇದನ್ನೂ ಓದಿ:ಅಬ್ಬಬ್ಬಾ.. ಖ್ಯಾತ ಕಾಮಿಡಿಯನ್ ಯೋಗಿ ಬಾಬು ದಿನ ಒಂದಕ್ಕೆ ಪಡೆಯುವ ಸಂಭಾವನೆ ಇಷ್ಟೊಂದಾ?
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿರಾದರ ”ನಾನು ಅಲ್ಪ ತೃಪ್ತ, ನನಗೆ ಯಾವ ಬೇಸರವೂ ಇಲ್ಲ. ನಾನು ಎಷ್ಟು ಸಂಪಾದಿಸುತ್ತೀನೋ ಅದರಲ್ಲೆ ಬದುಕಬೇಕು ಎಂದುಕೊಂಡು ಬದುಕುವ ರೀತಿಯ ಮೇಲೆ ಕಡಿವಾಣ ಹಾಕಿಕೊಂಡಿದ್ದೇನೆ. ಹಣಕ್ಕೆ ಆಸೆ ಪಡಬಾರದೆಂಬುದನ್ನು ನಾನು ರಂಗಭೂಮಿಯಲ್ಲಿದ್ದಾಗಲೇ ಕಲಿತುಕೊಂಡೆ. ಇವತ್ತಿಗೂ ಬಾಡಿಗೆ ಮನೆಯಲ್ಲಿದ್ದೇನೆ, ಹಾಗಿರಬೇಕು ಹೀಗಿರಬೇಕು ಎಂದು ನನಗೆ ಹೆಚ್ಚಿನ ಆಸೆಯೇನಿಲ್ಲ. ನನ್ನ ನಂಬಿಕೊಂಡು ಹೆಂಡತಿ, ಇಬ್ಬರು ಮಕ್ಕಳಿದ್ದಾರೆ ಅವರ ಜೀವನ ನಡೆಸುವಷ್ಟು ಆದರೆ ಸಾಕು ಅಂದುಕೊಂಡಿದ್ದೀನಿ” ಎಂದು ವಿನಮೃತೆಯಿಂದ ಹೇಳಿದರು.
”ನನಗೆ ಸಂಭಾವನೆಯೇ ಕೊಟ್ಟಿಲ್ಲ ಎಂದು ಹೇಳುವುದಿಲ್ಲ. ನಾನು ಮನೆಯ ಹಿರಿಯ ಮಗ, ಕುಟುಂಬದ ಜವಾಬ್ದಾರಿ ನನ್ನದೇ ಹಾಗಾಗಿ ನನಗೆ ಬಂದ ಹಣವನ್ನು ಕುಟುಂಬ ಸದಸ್ಯರಿಗೆ ಖರ್ಚು ಮಾಡಿದ್ದೇನೆ. 50 ರೂಪಾಯಿಯಿಂದ ಆರಂಭಿಸಿ 2 ಲಕ್ಷದವರೆಗೆ ಸಂಭಾವನೆಯನ್ನು ತೆಗೆದುಕೊಂಡಿದ್ದೇನೆ” ಎಂದಿದ್ದಾರೆ ಬಿರಾದರ. ಅಂದಹಾಗೆ ಒಂದು ಸಿನಿಮಾಕ್ಕೆ ಎರಡು ಲಕ್ಷ ಸಂಭಾವನೆ ಎಂಬುವುದು ಈಗಿನ ಸಿನಿ ಮಾರುಕಟ್ಟೆಯಲ್ಲಿ ತೀರ ಕಡಿಮೆ.
”ಆದರೆ ಚಿತ್ರರಂಗದಲ್ಲಿ ನನಗೆ ತೋರಿಸಿದ ಪ್ರೀತಿಯ ಬಗ್ಗೆ ತೃಪ್ತಿ ಇದೆ. ಎಲ್ಲರೂ ನನಗೆ ಅವಕಾಶ ಕೊಟ್ಟಿದ್ದಾರೆ. 800 ಕಿ.ಮೀ ದೂರದಿಂದ ಬಂದೆ ನಾನು ಅಂದುಕೊಂಡಂತೆ ನಟನು ಆಗಿದ್ದೇನೆ. ಚಿತ್ರರಂಗ ಇಲ್ಲಿಯವರೆಗೆ ನನ್ನನ್ನು ಬೆಳೆಸಿದೆ ಅದರ ಬಗ್ಗೆ ಖುಷಿ ನೀಡಿದೆ. ಮನೆ ಕಟ್ಟಿಕೊಂಡಿಲ್ಲ ಎಂಬ ಕೊರಗಿದೆ ಬಿಟ್ಟರೆ ನನಗೆ ಏನೂ ಬೇಸರವಿಲ್ಲ ಚಿತ್ರರಂಗದ ಬಗ್ಗೆ ಬಹಳ ಖುಷಿ ಇದೆ. ನನಗೆ ಅವಕಾಶ ಕೊಟ್ಟ ಯಾರೇ ಆದರೂ ಎದುರು ಸಿಕ್ಕರೆ ಕೈ ಮುಗಿಯುತ್ತೇನೆ. ಈ ವಯಸ್ಸಿನಲ್ಲಿ 90 ಬಿಡಿ ಮನೆಗ್ ನಡಿ ಅಂಥಹಾ ಸಿನಿಮಾ ಮಾಡಿದ್ದೇನೆ. ಇದನ್ನೆಲ್ಲ ನೋಡಿದಾಗ ಇನ್ನೂ ಹುಮ್ಮಸ್ಸು ಬರುತ್ತದೆ” ಎಂದಿದ್ದಾರೆ ಬಿರಾದರ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ