ಬೆಂಗಳೂರು: ಎಂಇಎಸ್ ಸಂಘಟನೆಯ ನಿಷೇಧಕ್ಕೆ ಒತ್ತಾಯಿಸಿ ಡಿ.31ರಂದು ಕರ್ನಾಟಕ ಬಂದ್ ಮಾಡಿಯೇ ಮಾಡುತ್ತೇವೆ ಎಂದು ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಟಿವಿ9ಗೆ ಹೇಳಿಕೆ ನೀಡಿದ್ದಾರೆ. ‘‘ಡಿಸೆಂಬರ್ 31ರಂದು ಕರ್ನಾಟಕ ಬಂದ್ ಮಾಡಿಯೇ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಕರ್ನಾಟಕ ಬಂದ್ ಮುಂದೂಡುವುದಿಲ್ಲ ಎಂದ ಅವರು, ಇದಕ್ಕೆ ಸ್ಯಾಂಡಲ್ವುಡ್ ಬೆಂಬಲ ನೀಡಲೇಬೇಕು ಎಂದು ಆಗ್ರಹಿಸಿದ್ದಾರೆ. ಪ್ರಸ್ತುತ ಕನ್ನಡ ಚಿತ್ರರಂಗ ನೀಡಿರುವ ನೈತಿಕ ಬೆಂಬಲದ ಅವಶ್ಯಕತೆ ಇಲ್ಲ ಎಂದ ಅವರು, ‘‘ನಮಗೆ ಯಾವುದೇ ರೀತಿಯ ನೈತಿಕ ಬೆಂಬಲ ಬೇಡ. ಅವರಿಗೋಸ್ಕರ ಬಂದ್ ದಿನಾಂಕವನ್ನು ಬದಲಿಸಲು ಸಾಧ್ಯವಿಲ್ಲ’’ ಎಂದು ಖಾರವಾಗಿ ನುಡಿದಿದ್ದಾರೆ.
ಮುಂದುವರೆದು ಮಾತನಾಡಿದ ವಾಟಾಳ್ ನಾಗರಾಜ್, ‘‘ಡಬ್ಬಿಂಗ್ ವಿರುದ್ಧ ಧ್ವನಿ ಎತ್ತಿದವನೇ ನಾನು. ಕನ್ನಡ ಚಿತ್ರರಂಗ ಸಂಪೂರ್ಣ ಬೆಂಬಲ ನೀಡಲೇಬೇಕು. ಡಿ.31ಕ್ಕೆ ಯಾವ ಚಿತ್ರ ರಿಲೀಸ್ ಆಗುತ್ತೆ ಹೆಸರು ಕೂಡ ಗೊತ್ತಿಲ್ಲ. ಕನ್ನಡಕ್ಕೆ ಆದ ಅವಮಾನ ಕನ್ನಡ ಚಿತ್ರರಂಗಕ್ಕೂ ಆದ ಹಾಗೆಯೇ. ಇದು ಕನ್ನಡಿಗರ ಅಳಿವು ಉಳಿವಿನ ಪ್ರಶ್ನೆ’’ ಎಂದಿದ್ದಾರೆ.
ಕನ್ನಡ ಚಿತ್ರರಂಗದ ವಿರುದ್ಧ ರಾಜ್ಯ ಬಂದ್ ಮಾಡುತ್ತಿಲ್ಲ, ಕನ್ನಡ ಬಾವುಟ ಸುಟ್ಟವರ ವಿರುದ್ಧ ಹೋರಾಟ ಮಾಡುತ್ತಿರುವುದು ಎಂದ ವಾಟಾಳ್ ಎಂಇಎಸ್ ನಿಷೇಧಕ್ಕೆ ಒತ್ತಾಯಿಸಿ ಕರ್ನಾಟಕ್ ಬಂದ್ ನಡೆಸಲಾಗುತ್ತದೆ ಎಂದಿದ್ದಾರೆ. ಡಿಸೆಂಬರ್ 30ಕ್ಕೆ ಬೆಂಬಲ ಕೊಡುವವರು ಡಿಸೆಂಬರ್ 31ಕ್ಕೂ ಕೊಡಲಿ ಬಿಡಿ ಎಂದು ವಾಟಾಳ್ ಹೇಳಿದ್ದಾರೆ.
ಬಂದ್ ಉದ್ದೇಶ ಅನ್ಯಾಯದ ವಿರುದ್ಧ ಹೋರಾಟವಷ್ಟೇ. ಯಾವುದೇ ಪ್ರತಿಷ್ಠೆಗಾಗಿ ರಾಜ್ಯ ಬಂದ್ ಮಾಡುತ್ತಿಲ್ಲ. ರಾಜ್ಯದ ಮೇಲಿನ ಅಭಿಮಾನದಿಂದ ಹೋರಾಟ ಮಾಡುತ್ತಿದ್ದೇನೆ ಎಂದು ವಾಟಾಳ್ ನಾಗರಾಜ್ ನುಡಿದಿದ್ದಾರೆ. ರಾಜ್ಯ ಬಂದ್ ಬಗ್ಗೆ ನಟ ಯಶ್, ಶಿವರಾಜ್ ಕುಮಾರ್, ಅಜಯ್ ರಾವ್ ಬೇಸರ ವ್ಯಕ್ತಪಡಿಸಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ‘‘ನಟರ ಮೇಲೆ ನನಗೆ ತುಂಬಾ ಗೌರವವಿದೆ. ಅವರೆಲ್ಲರೂ ತಮ್ಮ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ ಅಷ್ಟೇ. ನಾನು ನನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ’’ ಎಂದು ಹೇಳಿದ್ದಾರೆ.
ಕರ್ನಾಟಕ ಬಂದ್ ಬೇಡ ಎನ್ನುತ್ತಿರುವ ಸಿನಿಮಾದವರು, ಈಗ ಮಾತನಾಡುತ್ತಿರುವವರು ಮುಖ್ಯಮಂತ್ರಿಯವರನ್ನು ಭೇಟಿಯಾಗಲಿ. ಎಂಇಎಸ್ ಬ್ಯಾನ್ ಮಾಡುವಂತೆ ಸಿಎಂರನ್ನು ಕೇಳಲಿ. ಆಗ ನಾವು ಡಿಸೆಂಬರ್ 29ರ ಮಧ್ಯರಾತ್ರಿಯವರೆಗೆ ಕಾಯುವುದಿಲ್ಲ. ಡಿಸೆಂಬರ್ 28ರಂದೇ ಕರ್ನಾಟಕ ಬಂದ್ ಹಿಂಪಡೆಯುತ್ತೇವೆ ಎಂದು ವಾಟಾಳ್ ಹೇಳಿದ್ದಾರೆ.
ಸರ್ಕಾರದ ವಿರುದ್ಧವೂ ಕಿಡಿಕಾರಿದ ವಾಟಾಳ್ ನಾಗರಾಜ್:
ಬಂದ್ ವಿಚಾರದಲ್ಲಿ ರಾಜ್ಯ ಸರ್ಕಾರ ನಾಟಕ ಮಾಡುವಂತಿಲ್ಲ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ. ಸರ್ಕಾರಕ್ಕೆ ಡಿಸೆಂಬರ್ 29ರವರೆಗೆ ಡೆಡ್‌ಲೈನ್ ನೀಡಿದ್ದೇವೆ. ರಾಜ್ಯ ಸರ್ಕಾರ ಈವರೆಗೂ ಯಾವುದೇ ಮಾತುಕತೆಗೆ ಕರೆದಿಲ್ಲ ಎಂದು ಸರ್ಕಾರದ ವಿರುದ್ಧ ನಾಗರಾಜ್ ಕಿಡಿಕಾರಿದ್ದಾರೆ.
ಇದನ್ನೂ ಓದಿ:
‘ಪುಷ್ಪ’ ಗೆಲುವಿನ ಬಳಿಕ ರಶ್ಮಿಕಾಗೆ ಬಂಪರ್ ಚಾನ್ಸ್; ಮತ್ತೋರ್ವ ಸ್ಟಾರ್ ನಟನಿಗೆ ಕೊಡಗಿನ ಕುವರಿ ಜೋಡಿ?
RRR: ರಾಮ್ ಚರಣ್, ಜ್ಯೂ. ಎನ್ಟಿಆರ್, ರಾಜಮೌಳಿ, ಆಲಿಯಾ ಇವರಲ್ಲಿ ಹೆಚ್ಚು ಸಂಭಾವನೆ ಪಡೆದವರು ಯಾರು?
Published On - 12:39 pm, Sat, 25 December 21