ಕನ್ನಡ ಚಿತ್ರರಂಗಕ್ಕೆ ಸೋಮವಾರ (ಫೆ.20) ಮುಂಜಾನೆಯೇ ಕಹಿ ಸುದ್ದಿ ಸಿಕ್ಕಿದೆ. ಹಿರಿಯ ನಿರ್ದೇಶಕ ಎಸ್.ಕೆ. ಭಗವಾನ್ (SK Bhagavan) ಅವರು ಬೆಂಗಳೂರಿನಲ್ಲಿ ಮುಂಜಾನೆ 6 ಗಂಟೆಗೆ ನಿಧನ ಹೊಂದಿದ್ದಾರೆ. ಈ ವಿಚಾರದ ಬಗ್ಗೆ ಕನ್ನಡ ಚಿತ್ರರಂಗದ ಅನೇಕರು ಸಂತಾಪ ಸೂಚಿಸುತ್ತಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು. ಭಗವಾನ್ ಅವರು ಹಲವು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಬಿ. ದೊರೈ ರಾಜ್ ಹಾಗೂ ಎಸ್.ಕೆ ಭಗವಾನ್ ಒಟ್ಟಾಗಿ ಸಿನಿಮಾ ನಿರ್ದೇಶನ ಮಾಡುತ್ತಿದ್ದರು. ಈ ಜೋಡಿ ದೊರೈ ಭಗವಾನ್ ಎಂದೇ ಫೇಮಸ್ ಆಗಿತ್ತು. ದೊರೈ ರಾಜ್ ಅವರು 2000ನೇ ಇಸ್ವಿಯಲ್ಲಿ ನಿಧನ ಹೊಂದಿದ್ದರು. ಇವರು ಒಟ್ಟಾಗಿ 27 ಸಿನಿಮಾ ನಿರ್ದೇಶನ ಮಾಡಿದ್ದರು. ಇವರು ಹೆಚ್ಚು ಕೆಲಸ ಮಾಡಿದ್ದು ಡಾ.ರಾಜ್ಕುಮಾರ್ ಅವರ ಜೊತೆ. 30ಕ್ಕೂ ಅಧಿಕ ಸಿನಿಮಾಗಳಲ್ಲಿ ರಾಜ್ಕುಮಾರ್ ಜೊತೆ ಭಗವಾನ್ ಸಿನಿಮಾ ಮಾಡಿದ್ದರು. ಇವೆಲ್ಲವೂ ಬಾಕ್ಸ್ ಆಫೀಸ್ನಲ್ಲಿ ಹಿಟ್ ಆದವು.
ಭಗವಾನ್ ಹುಟ್ಟಿದ್ದು ಜುಲೈ 5, 1993ರಲ್ಲಿ. ಅವರು ಪ್ರೌಢಶಿಕ್ಷಣವನ್ನು ಬೆಂಗಳೂರನಲ್ಲಿ ಪಡೆದರು. ಭಗವಾನ್ ನಾಟಕದಲ್ಲಿ ಬಣ್ಣ ಹಚ್ಚುತ್ತಿದ್ದರು. ಪಿವಿ ಬಾಬು ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರು. ಅವರು ಸಹಾಯಕರಾಗಿ ಕೆಲಸ ಮಾಡಿದ ಮೊದಲ ಸಿನಿಮಾ ‘ಭಾಗ್ಯೋದಯ’ (1956). 1966ರಲ್ಲಿ ತೆರೆಗೆ ಬಂದ ‘ಸಂಧ್ಯಾರಾಗ’ ಸಿನಿಮಾ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆದರು. ಆದರೆ, ಇದರ ಕ್ರೆಡಿಟ್ನ ಎ.ಸಿ. ನರಸಿಂಹಮೂರ್ತಿಗೆ ನೀಡಲಾಯಿತು.
ಕನ್ನಡಕ್ಕೆ ಬಾಂಡ್ ಶೈಲಿಯ ಸಿನಿಮಾಗಳನ್ನು ಪರಿಚಯಿಸಿದ್ದು ದೊರೈ ಭಗವಾನ್. 1968ರಲ್ಲಿ ರಿಲೀಸ್ ಆದ ರಾಜ್ಕುಮಾರ್ ನಟನೆಯ ‘ಜೇಡರ ಬಲೆ’ ಚಿತ್ರಕ್ಕೆ ದೊರೈ-ಭಗವಾನ್ ನಿರ್ದೇಶನ ಮಾಡಿದರು. ಈ ಸಿನಿಮಾ ಯಶಸ್ಸು ಕಂಡಿತು. ಇದು ಕನ್ನಡದ ಮೊದಲ ಬಾಂಡ್ ಶೈಲಿಯ ಸಿನಿಮಾ.
ಇದನ್ನೂ ಓದಿ: SK Bhagavan Obituary: ಬಾಂಡ್ ಸಿನಿಮಾಗಳನ್ನು ಕನ್ನಡಕ್ಕೆ ಪರಿಚಯಿಸಿದ್ದ ದೊರೈ-ಭಗವಾನ್
ಭಗವಾನ್ ನಿಧನಕ್ಕೆ ಸಿನಿಪ್ರಿಯರು, ಕನ್ನಡ ಚಿತ್ರರಂಗದ ಹಿರಿಯರು ಸಂತಾಪ ಸೂಚಿಸುತ್ತಿದ್ದಾರೆ. ಇತ್ತೀಚೆಗೆ ವಿಷ್ಣುವರ್ಧನ್ ಮನೆಯ ಗೃಹಪ್ರವೇಶ ನಡೆದಿತ್ತು. ಇದರಲ್ಲಿ ಭಗವಾನ್ ಭಾಗವಹಿಸಿದ್ದರು. 12 ಗಂಟೆಗೆ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನ ರವೀಂದ್ರಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:33 am, Mon, 20 February 23