Karnataka Election: ಚುನಾವಣೆ ಜಾಗೃತಿಗೆ, ಪ್ರಜಾಕೀಯ ಪ್ರಚಾರಕ್ಕೆ ‘ಕಾಂತಾರ’ ದೈವದ ದೃಶ್ಯ ಬಳಕೆ; ವಿಡಿಯೋ ವೈರಲ್
Kantara Movie | Bhoota Kola: ‘ಕಾಂತಾರ’ ಸಿನಿಮಾದಲ್ಲಿನ ಮುಖ್ಯ ಆಕರ್ಷಣೆಯೇ ಭೂತಕೋಲದ ಸನ್ನಿವೇಶ. ಇದೇ ದೃಶ್ಯವನ್ನು ಈಗ ಎಡಿಟ್ ಮಾಡಲಾಗಿದೆ. ಅದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕರ್ನಾಟಕದಲ್ಲಿ ಚುನಾವಣೆಯ (Karnataka Election) ಕಾವು ಹೆಚ್ಚಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಪ್ರಚಾರಕಾರ್ಯ ನಡೆಯುತ್ತಿದೆ. ಎಲ್ಲ ರಾಜಕೀಯ ಪಕ್ಷಗಳು ವಿವಿಧ ರೀತಿಯಲ್ಲಿ ಜನರನ್ನು ಸೆಳೆಯಲು ಪ್ರಯತ್ನಿಸುತ್ತಿವೆ. ಈ ಬಾರಿ ಬಹುಮತ ಯಾರಿಗೆ ಬರಬಹುದು ಎಂಬ ಬಗ್ಗೆ ವಿಶ್ಲೇಷಣೆ ನಡೆಯುತ್ತಿದೆ. ಈ ನಡುವೆ ಉಪೇಂದ್ರ ಅವರ ಪ್ರಜಾಕೀಯ ಪಕ್ಷ ಕೂಡ ಹಣಾಹಣಿಗೆ ಸಜ್ಜಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ‘ಕಾಂತಾರ’ (Kantara Movie) ಸಿನಿಮಾದ ದೃಶ್ಯವನ್ನು ಇಟ್ಟುಕೊಂಡು ಚುನಾವಣೆ ಕುರಿತು ಜಾಗೃತಿ ಮೂಡಿಸುವಂತಹ ಒಂದು ಪ್ರಯತ್ನ ನಡೆದಿದೆ. ಅದರಲ್ಲಿ ಪ್ರಜಾಕೀಯದ (Prajakeeya) ಪ್ರಚಾರ ಕೂಡ ಆಗಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಜನರು ಹಲವು ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
‘ಕಾಂತಾರ’ ಸಿನಿಮಾದಲ್ಲಿನ ಮುಖ್ಯ ಆಕರ್ಷಣೆಯೇ ಭೂತಕೋಲದ ದೃಶ್ಯ. ಇದರಲ್ಲಿ ರಿಷಬ್ ಶೆಟ್ಟಿ ಅವರು ದೈವ ನರ್ತಕನ ಪಾತ್ರ ಮಾಡಿದ್ದಾರೆ. ತನ್ನ ಭೂಮಿಯನ್ನು ಊರಿನ ಜನರಿಂದ ಹಿಂದಿರುಗಿಸಿಕೊಡಿ ಎಂದು ದೈವದ ಬಳಿ ಸಾಹುಕಾರನ ಮಗ ಬೇಡಿಕೆ ಇಡುವ ದೃಶ್ಯ ಈ ಸಿನಿಮಾದಲ್ಲಿದೆ. ಆ ಬೇಡಿಕೆಗೆ ದೈವ ಒಪ್ಪದೇ ಇದ್ದಾಗ ತಾನು ಕೋರ್ಟಿಗೆ ಹೋಗುವುದಾಗಿ ಆತ ತಿಳಿಸುತ್ತಾನೆ. ಅದಕ್ಕೆ ಪ್ರತಿಕ್ರಿಯಿಸುವ ದೈವವು, ‘ಕೋರ್ಟಿಗೆ ಹೋಗ್ತಿ.. ಆದರೆ ನಿನ್ನ ತೀರ್ಮಾನ ಮೆಟ್ಟಿಲ ಮೇಲೆ ನಾನು ಮಾಡ್ತೀನಿ’ ಎಂದು ಹೇಳುತ್ತದೆ. ಇದೇ ದೃಶ್ಯವನ್ನು ಈಗ ಎಡಿಟ್ ಮಾಡಲಾಗಿದೆ.
ಇದನ್ನೂ ಓದಿ: ಕಾಂತಾರ ಸಿನಿಮಾ ನೆನಪಿಸುತ್ತೆ ಬೆಂಗಳೂರಿನ ಈ ಜಾಗ ಪ್ರಕರಣ; ಕೊರಗಜ್ಜನ ಮೊರೆ ಹೋದ ಗ್ರಾಮಸ್ಥರು ಹೇಳಿದ್ದೇನು ಗೊತ್ತಾ?
ಹಣ, ಸೀರೆ, ಸಾರಾಯಿ ಹಂಚಿ ಮತ ಕೇಳುವುದು ಸರಿಯಲ್ಲ ಎಂಬ ಸಂದೇಶವನ್ನು ಈ ವಿಡಿಯೋ ಮೂಲಕ ಹೇಳಲಾಗಿದೆ. ‘ಸೀರೆ, ಸಾರಾಯಿ, ಹಣವನ್ನು ಈ ಜನರಿಗೆ ಹಂಚುತ್ತೇನೆ. ಅವರ ಮತವನ್ನು ನನಗೆ ಹಾಕಿಸಿಕೊಡಬೇಕು’ ಎಂದು ದೈವದ ಬಳಿ ರಾಜಕೀಯ ನಾಯಕನು ಬೇಡಿಕೆ ಇಡುತ್ತಾನೆ. ಅದಕ್ಕೆ ಪ್ರತಿಕ್ರಿಯೆಯಾಗಿ, ‘ಬಹಳ ಒಳ್ಳೆಯ ಪ್ರಾರ್ಥನೆ.. ಈ ಊರಿನವರ ಮತವನ್ನು ನಿಮಗೆ ಹಾಕಿಸಿಕೊಡುತ್ತೇನೆ. ಆದರೆ ಇಲ್ಲಿಯವರೆಗೆ ಇವರು ಕಟ್ಟಿದ ತೆರಿಗೆ ಹಣವನ್ನು ಹಿಂದಿರುಗಿಸಿಕೊಡಬಹುದಾ ರಾಜಕೀಯ ನಾಯಕರೇ?’ ಎಂದು ದೈವ ಮರುಪ್ರಶ್ನೆ ಕೇಳುತ್ತದೆ.
ಇದನ್ನೂ ಓದಿ: ‘ಮೋದಿ ಹಲವು ಬಾರಿ ಕಾಂತಾರ ಬಗ್ಗೆ ಮಾತಾಡಿದ್ದು ಕೇಳಿ ಖುಷಿ ಆಯ್ತು’: ಪ್ರಧಾನಿ ಭೇಟಿ ಬಗ್ಗೆ ರಿಷಬ್ ಪ್ರತಿಕ್ರಿಯೆ
ದೈವ ಹೇಳಿದ್ದಕ್ಕೆ ಆತ ಒಪ್ಪುವುದಿಲ್ಲ. ಎಲ್ಲಿಗೆ ಹೋಗಬೇಕೋ ಅಲ್ಲಿಗೆ ಹೋಗುತ್ತೇನೆ ಎಂದು ಅವನು ಹೇಳುತ್ತಾನೆ. ಅದಕ್ಕೆ ಉತ್ತರಿಸುವ ದೈವ, ‘ಸೀರೆ, ಸಾರಾಯಿ ಹಂಚ್ತಿ.. ಆದ್ರೆ ಇದರ ತೀರ್ಮಾನವನ್ನು ಮತಗಟ್ಟೆಯಲ್ಲಿ ನಾನು ಮಾಡುತ್ತೇನೆ. ಈ ತೆರಿಗೆ ಹಣ ಊರಿನವರದ್ದು. ಅದರ ತೀರ್ಮಾನ ಇವತ್ತಲ್ಲ. ಮುಂದೊಂದು ದಿನ ಪ್ರಜಾಕೀಯ ಬರಬೇಕಾಗುತ್ತದೆ’ ಎಂದು ಹೇಳುವ ರೀತಿಯಲ್ಲಿ ವಿಡಿಯೋ ಎಡಿಟ್ ಮಾಡಲಾಗಿದೆ.
ಈ ವಿಡಿಯೋ ಚೆನ್ನಾಗಿದೆ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. ಆದರೆ ತಮ್ಮ ಸ್ವಾರ್ಥಕ್ಕಾಗಿ ದೈವದ ಹೆಸರನ್ನು ಈ ರೀತಿ ಬಳಕೆ ಮಾಡಿಕೊಂಡಿರುವುದು ಸರಿಯಲ್ಲ ಎಂದು ಕೂಡ ಕೆಲವರು ಅಭಿಪ್ರಾಯಪಟ್ಟಿದ್ದಾರೆ. ‘ಕಾಂತಾರ’ ಸಿನಿಮಾ ತೆರೆಕಂಡ ಬಳಿಕ ಭೂತಕೋಲದ ಬಗ್ಗೆ ಜನರಲ್ಲಿ ಆಸಕ್ತಿ ಹೆಚ್ಚಿತು. ಈ ಚಿತ್ರದಲ್ಲಿ ತೋರಿಸಿದ ದೃಶ್ಯವನ್ನು ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಅನುಕರಿಸಿದ್ದು ಕೂಡ ಉಂಟು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:03 pm, Sun, 19 February 23