ಆಸ್ಪತ್ರೆಗೆ ದಾಖಲಾದ ಹಿರಿಯ ನಟಿ ಸುಂದರಶ್ರೀ: ಚಿಕಿತ್ಸೆಗೆ ಬೇಕಿದೆ ಧನ ಸಹಾಯ
ಕನ್ನಡ ರಂಗಭೂಮಿ ಹಾಗೂ ಕಿರುತೆರೆಯ ಹಿರಿಯ ಅಭಿನೇತ್ರಿ ಸುಂದರಶ್ರೀ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯಕೀಯ ಚಿಕಿತ್ಸೆಗೆ ಹಣಕಾಸಿನ ನೆರವು ಕೋರಿದ್ದಾರೆ. ಗುಬ್ಬಿ ವೀರಣ್ಣ ಅವರ ಮೊಮ್ಮಗಳಾದ ಇವರು ‘ಗುಪ್ತಗಾಮಿನಿ’ಯ ಸುಂದ್ರಿ ಹಾಗೂ ‘ಜೊತೆ ಜೊತೆಯಲಿ’ಯ ಜೋಗತವ್ವ ಪಾತ್ರಗಳ ಮೂಲಕ ಪ್ರಸಿದ್ಧಿ ಪಡೆದಿದ್ದರು. ಕಲಾಭಿಮಾನಿಗಳು ಇವರ ನೆರವಿಗೆ ಧಾವಿಸುವಂತೆ ಸಹಕಲಾವಿದರು ವಿನಂತಿಸಿದ್ದಾರೆ.

ಮುಖ್ಯಾಂಶಗಳು
- ಚಿಂತಾಜನಕ ಸ್ಥಿತಿಯಲ್ಲಿ ಹಿರಿಯ ನಟಿ ಸುಂದರಶ್ರೀ
- ಚಿಕಿತ್ಸೆಗಾಗಿ ನೆರವಿನ ಹಸ್ತ ಚಾಚಿದ 'ಸುಂದ್ರಿ'
- ಆಸ್ಪತ್ರೆಯಿಂದಲೇ ನಟಿಯ ಕಣ್ಣೀರಿನ ಮನವಿ
ಕನ್ನಡ ರಂಗಭೂಮಿ, ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಸಕ್ರಿಯರಾಗಿದ್ದ ಹಿರಿಯ ನಟಿ ಸುಂದರಶ್ರೀ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಕಳೆದ ಮೂರು ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿರುವ 65 ವರ್ಷದ ನಟಿಗೆ ಈಗ ವೈದ್ಯಕೀಯ ವೆಚ್ಚ ಭರಿಸಲು ಹಣಕಾಸಿನ ಅಗತ್ಯವಿದ್ದು, ಧನಸಹಾಯ ನೀಡುವಂತೆ ಮನವಿ ಮಾಡಿದ್ದಾರೆ.
ಆಸ್ಪತ್ರೆಯ ಹಾಸಿಗೆಯಿಂದಲೇ ವಿಡಿಯೋ ಸಂದೇಶ ರವಾನಿಸಿರುವ ಅವರು, ‘ಕಳೆದ ಮೂರು ತಿಂಗಳಿಂದ ಆಸ್ಪತ್ರೆಯಲ್ಲೇ ಇದ್ದು ಚಿಕಿತ್ಸೆ ಪಡೆಯುತ್ತಿದ್ದೇನೆ. ಪ್ರಸ್ತುತ ನನಗೆ ಹಣದ ಅಭಾವ ಎದುರಾಗಿದೆ. ಕಲಾಭಿಮಾನಿಗಳು ಹಾಗೂ ಸೃಜನಶೀಲ ಬಂಧುಗಳು ದಯವಿಟ್ಟು ನೆರವಿನ ಹಸ್ತ ಚಾಚಬೇಕು’ ಎಂದು ವಿನಂತಿಸಿಕೊಂಡಿದ್ದಾರೆ. ಈ ವಿಡಿಯೋವನ್ನು ಚಿತ್ರರಂಗ ಮತ್ತು ಕಿರುತೆರೆಯ ಹಲವು ಕಲಾವಿದರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಸಹಾಯಕ್ಕೆ ಕೋರಿದ್ದಾರೆ.
ಗುಬ್ಬಿ ವೀರಣ್ಣ ಅವರ ಮೊಮ್ಮಗಳಾದ ಹಿರಿಯ ನಟಿ ಸುಂದರಶ್ರೀ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆರ್ಥಿಕ ಸಂಕಷ್ಟದಲ್ಲಿರುವ ಅವರು ನೆರವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.#Sundarashree #GubbiVeeranna #KannadaCinema #SeniorActress #KarnatakaNews #DigitalSanchari pic.twitter.com/Pk20WTBqRl
— Digital Sanchari (@DigitalSan41) September 29, 2026
ರಂಗಭೂಮಿ ಹಿನ್ನೆಲೆ ಮತ್ತು ಕಲಾಪಯಣ:
ಸುಂದರಶ್ರೀ ಅವರು ರಂಗಭೂಮಿಯ ದಂತಕಥೆ, ಪದ್ಮಶ್ರೀ ಡಾ. ಗುಬ್ಬಿ ವೀರಣ್ಣನವರ ಮೊಮ್ಮಗಳು. ದೆಹಲಿಯ ಪ್ರತಿಷ್ಠಿತ ‘ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ’ ಸಂಸ್ಥೆಯಲ್ಲಿ ಅಭಿನಯ ತರಬೇತಿ ಪಡೆದಿದ್ದ ಸುಂದರಶ್ರೀ, ಗುಬ್ಬಿ ವೀರಣ್ಣನವರ ಮೊಮ್ಮಗಳು ಎನ್ನುವ ಚೌಕಟ್ಟಿನಿಂದ ಆಚೆಗೆ ಬಂದು ಸ್ವಂತ ಪ್ರತಿಭೆಯಿಂದ ಗುರುತಿಸಿಕೊಂಡವರು. ಇವರಿಗೆ ಒಬ್ಬ ಪುತ್ರಿ, ಮೊಮ್ಮಗ ಹಾಗೂ ಇಬ್ಬರು ಸಹೋದರರು ಮತ್ತು ಒಬ್ಬ ಸಹೋದರಿ ಇದ್ದಾರೆ.
ನೆನಪಿನಲ್ಲಿ ಉಳಿಯುವ ಪಾತ್ರಗಳು:
- ಗುಪ್ತಗಾಮಿನಿ (2003-2008): ಈಟಿವಿ ಕನ್ನಡದ ಈ ಸೂಪರ್ ಹಿಟ್ ಧಾರಾವಾಹಿಯಲ್ಲಿ ಅವರು ನಟಿಸಿದ ‘ಸುಂದ್ರಿ’ ಎಂಬ ಅಜ್ಜಿಯ ಪಾತ್ರ ಕನ್ನಡಿಗರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ.
- ಜೊತೆ ಜೊತೆಯಲಿ: ಜೀ ಕನ್ನಡದ ಈ ಜನಪ್ರಿಯ ಸೀರಿಯಲ್‌ನಲ್ಲಿ ‘ಜೋಗತವ್ವ’ ಪಾತ್ರದ ಮೂಲಕ ಗಂಭೀರ ಅಭಿನಯ ನೀಡಿದ್ದರು.
- ಪುಟ್ಟಕ್ಕನ ಮಕ್ಕಳು: ನಾಯಕ ಕಂಠಿಯ ಅಜ್ಜಿ (ಬಂಗಾರಮ್ಮನ ತಾಯಿ) ಪಾತ್ರದಲ್ಲಿ ಗಮನ ಸೆಳೆದಿದ್ದರು.
- ಸೂರ್ಯವಂಶ: ಉದಯ ಟಿವಿಯ ಈ ಧಾರಾವಾಹಿಯಲ್ಲೂ ಪ್ರಮುಖ ಪಾತ್ರ ಪೋಷಿಸಿದ್ದರು.
- ಕಲಾಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವ ಈ ಹಿರಿಯ ಕಲಾವಿದೆ ಶೀಘ್ರ ಗುಣಮುಖರಾಗಲು ಆರ್ಥಿಕ ಬೆಂಬಲದ ತುರ್ತು ಅಗತ್ಯವಿದೆ.ಅವರಿಗೆ ಆರ್ಥಿಕ ಸಹಾಯ ಸಿಗಲಿ ಎಂದು ಎಲ್ಲರೂ ಕೋರುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 6:59 am, Wed, 30 September 26




