‘ವಿಕ್ಟೋರಿಯಾ ಮಾನ್ಷನ್’ ಸಿನಿಮಾದ ಫಸ್ಟ್​ ಲುಕ್​ ಬಿಡುಗಡೆ ಮಾಡಿದ ಶಿವರಾಜ್‌ಕುಮಾರ್

|

Updated on: Apr 05, 2024 | 6:28 PM

ಬೆಂಗಳೂರು, ಮೂಡಬಿದ್ರಿ, ಮಂಗಳೂರು, ಚಿಕ್ಕಮಗಳೂರು, ಬೇಲೂರು ಮುಂತಾದ ಕಡೆಗಳಲ್ಲಿ ‘ವಿಕ್ಟೋರಿಯಾ ಮಾನ್ಷನ್’ ಸಿನಿಮಾಗೆ ಶೂಟಿಂಗ್​ ಮಾಡಲಾಗಿದೆ. ಈಗಾಗಲೇ ಶೇಕಡ 90ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ಶೀಘ್ರದಲ್ಲೇ ಶೂಟಿಂಗ್​ ಮುಕ್ತಾಯ ಆಗಲಿದೆ. ‘ವಿಕ್ಟೋರಿಯಾ ಮಾನ್ಷನ್’ ಸಿನಿಮಾದ ಫಸ್ಟ್​ ಲುಕ್​ ಪೋಸ್ಟರ್​ ಅನ್ನು ಶಿವರಾಜ್​ಕುಮಾರ್​ ಬಿಡುಗಡೆ ಮಾಡಿದ್ದಾರೆ.

‘ವಿಕ್ಟೋರಿಯಾ ಮಾನ್ಷನ್’ ಸಿನಿಮಾದ ಫಸ್ಟ್​ ಲುಕ್​ ಬಿಡುಗಡೆ ಮಾಡಿದ ಶಿವರಾಜ್‌ಕುಮಾರ್
ವಿಕ್ಟೋರಿಯಾ ಮಾನ್ಷನ್​ ಚಿತ್ರತಂಡದ ಜೊತೆ ಶಿವರಾಜ್​ಕುಮಾರ್​
Follow us on

ನಟ ಶಿವರಾಜ್​ಕುಮಾರ್​ (Shivarajkumar) ಅವರು ಹೊಸಬರ ಸಿನಿಮಾಗಳಿಗೆ ಯಾವಾಗಲೂ ಪ್ರೋತ್ಸಾಹ ನೀಡುತ್ತಾರೆ. ಈಗ ಅವರು ‘ವಿಕ್ಟೋರಿಯಾ ಮಾನ್ಷನ್’ (Victoria Mansion) ಸಿನಿಮಾ ತಂಡದ ಬೆನ್ನು ತಟ್ಟಿದ್ದಾರೆ. ಹೌದು, ‘ಹ್ಯಾಟ್ರಿಕ್ ಹೀರೋ’ ಶಿವರಾಜ್‌ಕುಮಾರ್ ಅವರು ಈ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಅನಾವರಣ ಮಾಡಿದ್ದಾರೆ. ಆ ಮೂಲಕ ಅವರು ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಈ ವೇಳೆ ಮಾತನಾಡಿದ ಶಿವಣ್ಣ (Shivanna), ‘ಕನ್ನಡ ಚಿತ್ರರಂಗಕ್ಕೆ ಹೊಸ ಪ್ರತಿಭೆಗಳು ಬರಬೇಕು. ಆಗಲೇ ವಿನೂತನ ಕಥೆ, ಪ್ರಯತ್ನಗಳು ಬರುತ್ತದೆ. ಈ ಸಿನಿಮಾದ ತುಣುಕುಗಳು ಚೆನ್ನಾಗಿ ಮೂಡಿಬಂದಿವೆ. ಇದು ಹೊಸಬರ ಸಿನಿಮಾ ಎನಿಸುವುದಿಲ್ಲ. ನಿಮ್ಮಈ ಪ್ರಯತ್ನ ನಿರಂತರವಾಗಿ ಸಾಗುತ್ತಿರಲಿ. ವಿಕ್ಟೋರಿಯಾ ಮಾನ್ಷನ್ ಚಿತ್ರಕ್ಕೆ ಯಶಸ್ಸು ಸಿಗಲಿ’ ಎಂದು ಹಾರೈಸಿದರು.

ಶಿವಣ್ಣ ‘ವಿಕ್ಟೋರಿಯಾ ಮಾನ್ಷನ್’ ಫಸ್ಟ್​ ಲುಕ್​ ಅನಾವರಣ ಮಾಡಿದಾಗ ಆರ್. ಚಂದ್ರು ಕೂಡ ಹಾಜರಿದ್ದರು. ಆರ್. ಚಂದ್ರು ಅವರ ಸಿನಿಮಾಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿರುವ ಉಮೇಶ್ ಕೆ.ಎನ್. ಅವರು ‘ವಿಕ್ಟೋರಿಯಾ ಮಾನ್ಷನ್’ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ‘ಶ್ರೀ ಪದ್ಮಾವತಿ ಪ್ರೊಡಕ್ಷನ್’ ಬ್ಯಾನರ್‌ ಮೂಲಕ ಅವರು ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ರಾಜೇಶ್‌ ಬಲಿಪ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುವುದರ ಜೊತೆಗೆ ನಿರ್ಮಾಣದಲ್ಲೂ ಕೈ ಜೋಡಿಸಿದ್ದಾರೆ.

ಇದನ್ನೂ ಓದಿ: ಅಶ್ವಿನಿ ಪುನೀತ್​-ಶೋಭಾ ಕರಂದ್ಲಾಜೆ ಭೇಟಿ ಬಗ್ಗೆ ಶಿವಣ್ಣ ಮೊದಲ ಪ್ರತಿಕ್ರಿಯೆ

ಸಿನಿಮಾದ ಕಥೆಯ ಬಗ್ಗೆಯೂ ‘ವಿಕ್ಟೋರಿಯಾ ಮಾನ್ಷನ್’ ತಂಡ ಮಾಹಿತಿ ಹಂಚಿಕೊಂಡಿದೆ. 1900ನೇ ಇಸವಿಯಲ್ಲಿ ಹನುಮಗಿರಿ ಎನ್ನುವ ಸಣ್ಣ ಊರಿನಲ್ಲಿ ಭೀಕರ ಘಟನೆಗಳು ಜರುಗುತ್ತಿರುತ್ತವೆ. ಅಲ್ಲಿನ ಜನರು ಪಾಲಿಸುತ್ತಿದ್ದ ಒಂದಷ್ಟು ವಿಚಿತ್ರ ಆಚರಣೆಗಳ ಬಗ್ಗೆ ಹಾಗೂ ಎಷ್ಟೋ ಶತಮಾನಗಳಿಂದ ನಿಗೂಢವಾಗಿ ಉಳಿದ ರಹಸ್ಯಗಳನ್ನು ಪುರಾತತ್ವ ಶಾಸ್ತ್ರ ಇಲಾಖೆಯವರು ಭೇದಿಸುತ್ತಾರೆ. ಇದನ್ನು ಥ್ರಿಲ್ಲರ್ ಅಂಶಗಳ ಮೂಲಕ ತೋರಿಸಲಾಗುತ್ತಿದೆ ಎಂದು ‘ವಿಕ್ಟೋರಿಯಾ ಮಾನ್ಷನ್’ ಚಿತ್ರತಂಡ ಹೇಳಿದೆ.

ಇದನ್ನೂ ಓದಿ: ಶಿವಣ್ಣ ಜೊತೆ ಹೊಸ ಸಿನಿಮಾ ಘೋಷಿಸಿದ ಆರ್ ಚಂದ್ರು; ಮೂಡಿತು ಕುತೂಹಲ

ಈ ಸಿನಿಮಾದಲ್ಲಿ ರಾಜೇಶ್ ಅವರು ನಾಯಕನಾಗಿ ನಟಿಸಿದ್ದು, ಕಾಶೀಮಾ ಅವರು ನಾಯಕಿಯಾಗಿದ್ದಾರೆ. ಮಿಮಿಕ್ರಿ ಗೋಪಿ, ಶ್ರೀಧರ್, ಮಠ ಕೊಪ್ಪಳ, ಬಾಲರಾಜ ವಾಡಿ, ಉಮೇಶ್, ಗುರುದೇವ್‌ ನಾಗರಾಜ್, ಮದನ್, ಹಿತೇಶ್, ಅಂಜಿ, ಪಲ್ಟಿ ಗೋವಿಂದ್, ಕೀರ್ತನಾ, ಶೈಲಜಾ ಮುಂತಾದ ಕಲಾವಿದರು ಕೂಡ ಈ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಕಿರಣ್‌ ರವೀಂದ್ರನಾಥ್ ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ವೀರೇಶ್‌ ಬುಗುಡೆ ಅವರ ಛಾಯಾಗ್ರಹಣ, ನಾನಿ ಕೃಷ್ಣ ಅವರ ಸಂಕಲನ, ಅಶೋಕ್ ಅವರ ಸಾಹಸ ನಿರ್ದೇಶಕ ಈ ಚಿತ್ರಕ್ಕೆ ಇರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.