ನಟ ವಿಜಯ್ ರಾಘವೇಂದ್ರ (Vijay Raghavendra), ತಮ್ಮ ಜೀವನ ಸಂಗಾತಿಯನ್ನು ಕಳೆದುಕೊಂಡು ಕೆಲ ದಿನಗಳಷ್ಟೆ ಆಗಿದೆ. ಪ್ರೀತಿಸಿ ಮದುವೆಯಾದ ಮಡದಿ ವಿಜಯ್ ರಾಘವೇಂದ್ರ ಅವರನ್ನು ಮಗನನ್ನೂ ಒಂಟಿಯನ್ನಾಗಿಸಿ ಬಿಟ್ಟು ಹೋಗಿದ್ದಾರೆ. ಈ ತೀರದ ನೋವಿನ ನಡುವೆಯೂ ವಿಜಯ್ ರಾಘವೇಂದ್ರ ತಮ್ಮ ಕರ್ತವ್ಯ ಮರೆತಿಲ್ಲ. ಒಪ್ಪಿಕೊಂಡ ಸಿನಿಮಾಕ್ಕಾಗಿ, ನಂಬಿ ಹಣ ಹಾಕಿದ ನಿರ್ಮಾಪಕರಿಗೆ ತನ್ನಿಂದ ನಷ್ಟವಾಗಬಾರದು ಎಂಬ ಕಾರಣಕ್ಕೆ ಅತೀವ ನೋವಿನಲ್ಲಿಯೂ ಸಿನಿಮಾ ಪ್ರಚಾರ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ.
ವಿಜಯ್ ರಾಘವೇಂದ್ರ ನಟನೆಯ ‘ಕದ್ದ ಚಿತ್ರ’ ಸಿನಿಮಾದ ಟ್ರೈಲರ್ ಇಂದು ಬಿಡುಗಡೆ ಆಗಿದ್ದು, ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ ವಿಜಯ್ ರಾಘವೇಂದ್ರ ಆಗಮಿಸಿದ್ದರು. ಈ ಸಿನಿಮಾದ ಮುಹೂರ್ತದಂದು ಪತ್ನಿ ಸ್ಪಂದನಾ ಜೊತೆಗೆ ವಿಜಯ್ ರಾಘವೇಂದ್ರ ಆಗಮಿಸಿದ್ದರು. ಅಂದು ಶಿವರಾಜ್ ಕುಮಾರ್ ಅತಿಥಿಯಾಗಿದ್ದರು. ಆದರೆ ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದ ವೇಳೆಗೆ ಸ್ಪಂದನಾ ಮರೆಯಾಗಿದ್ದಾರೆ.
ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಭಾವುಕರಾಗಿಯೇ ಮಾತನಾಡಿದ ವಿಜಯ್, ”ಇತ್ತೀಚಿನ ದಿನಗಳಲ್ಲಿ ಆಗಿರೋ ಘಟನೆ ಬಗ್ಗೆ ಮಾತನಾಡಬೇಕಾದರೆ, ಅಂಥಹಾ ಘಟನೆ ಎಲ್ಲಾದರೂ ಆದರೆ ನಾವು ಅನುಕಂಪ ತೋರಿಸ್ತಿವಿ. ಆ ಕಥೆ ನಾವೇ ಅದಾಗ ಹೇಗಪ್ಪಾ ಅನ್ನಿಸ್ತು ಆ ಕ್ಷಣದಲ್ಲಿ ನೀವೆಲ್ಲ ತಾಯಿ ಆಗಿ ನಿಂತಿರಿ, ನೀವೆಲ್ಲ ಮನೆಯವರ ಹಾಗೇ ಎಂದು ಹೇಳುತ್ತಾ ಕಣ್ಣೀರು ಹಾಕಿದರು. ನಂತರ ಸಾವರಿಸಿಕೊಂಡು, ”ನಾನು ಕಣ್ಣೀರು ಹಾಕೋದು ಅವಳಿಗೂ ಇಷ್ಟ ಆಗ್ತಿರಲಿಲ್ಲ, ಕಣ್ಣೀರು ಹಾಕ್ ಬಾರದು ಅಂತ ಬಂದೆ ಈ ಸಿನಿಮಾ ತಂಡ ಅಂದ್ರೆ ಅವಳಿಗೂ ತುಂಬಾ ಇಷ್ಟ’ ಎಂದರು. ‘ನಿರ್ಮಾಪಕನ ಜೊತೆ ನಿಂತ್ಕೋಬೇಕಾಗಿರೋದು ಕಲಾವಿದನಾಗಿ ನನ್ನ ಕರ್ತವ್ಯ , ಆ ಕರ್ತವ್ಯ ಪ್ರಜ್ಞೆಯಿಂದ ಬಂದು ಇಲ್ಲಿ ನಿಂತಿದ್ದೇನೆ, ನಾನು ಇನ್ನು ಮುಂದೇ ನಗೋಕೆ ನನ್ನ ಮಗನ ಕೈ ಹಿಡಿದು ನಡಿಸೋಕೆ ನಿಮ್ಮೆಲ್ಲ ಆಶೀರ್ವಾದ ಇರುತ್ತೆ ಎಂದು ಭಾವಿಸುತ್ತೇನೆ” ಎಂದು ವಿಜಯ್ ರಾಘವೇಂದ್ರ ಹೇಳಿದರು.
ಇದನ್ನೂ ಓದಿ:ಸ್ಪಂದನಾ ನಿಧನದ ಬಳಿಕ ಹೇಗಿತ್ತು ವಿಜಯ್ ರಾಘವೇಂದ್ರ ಪರಿಸ್ಥಿತಿ? ಯಾರಿಗೂ ಬೇಡ ಈ ನೋವು
ಸಿನಿಮಾ ಬಗ್ಗೆ ಮಾತನಾಡಿ, ‘ಕದ್ದ ಚಿತ್ರ’ ಒಂದು ಮಾಮೂಲಿ ಬಳಗ ಅಥವಾ ತಂಡ ಇಲ್ಲ, ಅದು ಕುಟುಂಬದ ರೀತಿ. ತುಂಬಾ ಕನಸು ಕಟ್ಕೋಂಡು ನಂದು ಒಂದು ಪಾತ್ರ ಇರಲಿ ಕೊಟ್ಟಿದ್ದಾರೆ. ಆರಂಭದಲ್ಲಿ ಈ ಪಾತ್ರ ಮಾಡಲು ನನಗೆ ಸ್ವಲ್ಪ ಹಿಂಜರಿಕೆ ಇತ್ತು. ಆ ನಂತರ ಧೈರ್ಯ ಮಾಡಿ ಮಾಡಿದೆ, ಈ ಸಿನಿಮಾ ಶೀರ್ಷಿಕೆ ಬಗ್ಗೆ ಗೊತ್ತಿದೆ. ಸಿನಿಮಾ ರಿಲೀಸ್ ಆದ ನಂತರ ಸಾಕಷ್ಟು ಚರ್ಚೆ ಇರುತ್ತೆ ಆ ದಿನಕ್ಕೆ ಕಾಯ್ತಿದ್ದೀನಿ” ಎಂದರು.
‘ಕದ್ದ ಚಿತ್ರ’ ಸಿನಿಮಾ ವರಮಹಾಲಕ್ಷ್ಮಿ ಹಬ್ಬದಂದು ಬಿಡುಗಡೆ ಆಗಬೇಕಿತ್ತು. ಆದರೆ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ನಿಧನ ಹೊಂದಿದ ಕಾರಣ ಸಿನಿಮಾದ ಕೆಲವು ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ಮುಂದೂಡಿಕೆಯಾದವು. ಇದೀಗ ಸೆಪ್ಟೆಂಬರ್ 8ಕ್ಕೆ ‘ಕದ್ದ ಚಿತ್ರ’ ಸಿನಿಮಾ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ