ವಿಜಯ್ ರಾಘವೇಂದ್ರ (Vijay Raghavendra) ಕನ್ನಡದ ಸಂಭಾವ್ಯ ನಟ. ಹಲವು ಕುಟುಂಬಗಳು ತಮ್ಮ ಮನೆ ಮಗನಂತೆ ವಿಜಯ್ ರಾಘವೇಂದ್ರರನ್ನು ಭಾವಿಸುತ್ತಾರೆ. ಕೌಟುಂಬಿಕ ವ್ಯಕ್ತಿಯಾಗಿರುವ ವಿಜಯ್ ರಾಘವೇಂದ್ರ ಇತ್ತೀಚೆಗಷ್ಟೆ ತಮ್ಮ ಜೀವನದ ಅತ್ಯಂತ ಮಹತ್ವದ ವ್ಯಕ್ತಿ ಪತ್ನಿ ಸ್ಪಂದನಾರನ್ನು ಕಳೆದುಕೊಂಡಿದ್ದಾರೆ. ಹಲವು ವರ್ಷ ಪ್ರೀತಿಸಿ, ಮನೆಯವರನ್ನು ಒಪ್ಪಿಸಿ ಸ್ಪಂದನಾರನ್ನು ವಿವಾಹವಾಗಿ 16 ವರ್ಷ ಅವರೊಟ್ಟಿಗೆ ಸಂಸಾರ ಮಾಡಿ ಈಗ ವಿಧಿಯಾಟದಿಂದ ಒಬ್ಬಂಟಿಯಾಗಿದ್ದಾರೆ. ನೋವಿನ ಸ್ಥಿತಿಯಲ್ಲಿಯೂ ಕರ್ತವ್ಯ ಮರೆಯದ ವಿಜಯ್ ರಾಘವೇಂದ್ರ ತಮ್ಮ ‘ಕದ್ದ ಚಿತ್ರ’ ಸಿನಿಮಾದ ಪ್ರಚಾರದಲ್ಲಿ ಭಾಗಿಯಾಗಿದ್ದು, ಟಿವಿ9ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಪತ್ನಿ ಬಗ್ಗೆ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.
”ಪ್ರತಿದಿನ ಎದ್ದಾಗಲೂ ಒಂದು ಎಚ್ಚರಿಕೆ ಇರುತ್ತಿತ್ತು, ನನ್ನ ಕುಟುಂಬಕ್ಕಾಗಿ ನಾನು ಕೆಲಸ ಮಾಡಬೇಕು, ಅವರಿಗೆ ಒಳ್ಳೆಯ ಜೀವನ ಕೊಡಬೇಕು, ನನಗೆ ಏನೂ ಆಗದಂತೆ ನೋಡಿಕೊಳ್ಳಬೇಕು, ಅವರು ಹೆಮ್ಮೆ ಪಡುವಂತೆ ಕೆಲಸ ಮಾಡಬೇಕು ಎಂದು. ಆದರೆ ಈಗ ಅದೆಲ್ಲವೂ ಅರ್ಥ ಕಳೆದುಕೊಂಡಂತೆ ಅನ್ನಿಸುತ್ತಿದೆ. ಆದರೆ ಮಗ ಶೌರ್ಯನಿಗಾಗಿ ನಾನು ಅದನ್ನೆಲ್ಲ ಮುಂದುವರೆಸಬೇಕಿದೆ. ನಾನು ನೋವುಂಡರೆ ಅವನಿಗೆ ಗೊತ್ತಾಗಿಬಿಡುತ್ತದೆ. ಒಬ್ಬನೇ ಇದ್ದಾಗಷ್ಟೆ ಕಣ್ಣೀರು ಹಾಕುತ್ತಿದ್ದೇನೆ” ಎಂದು ನೋವು ಅದುಮಿಟ್ಟುಕೊಂಡೆ ಹೇಳಿದರು ವಿಜಯ್ ರಾಘವೇಂದ್ರ.
ಇದನ್ನೂ ಓದಿ:‘ಮರೆಯದೆ ತೊರೆಯದೆ ಎದೆಗೊತ್ತಿ ಪ್ರೀತಿಸುವೆ’; ವಿವಾಹ ವಾರ್ಷಿಕೋತ್ಸವಕ್ಕೆ ಭಾವುಕ ವಿಡಿಯೋ ಹಂಚಿಕೊಂಡ ವಿಜಯ್ ರಾಘವೇಂದ್ರ
”ನನ್ನ ಜೀವನದ ನಗು, ಶಕ್ತಿ, ಸ್ಪೂರ್ತಿ ಎಲ್ಲವೂ ಆಗಿದ್ದಳು ಸ್ಪಂದನಾ. ಹದಿನಾರು ವರ್ಷದ ಹಿಂದೆ ನಾನು ಬೇರೆಯದ್ದೇ ಆಗಿದ್ದೆ. ಆದರೆ ಸ್ಪಂದನಾ ಬಾಳಿಗೆ ಬಂದ ಬಳಿಕ ನಾನು ಜೀವನವನ್ನು ನೋಡುವ ದೃಷ್ಟಿಕೋನ ಬದಲಾಯ್ತು. 16 ವರ್ಷ ನನಗೆ ಬೆನ್ನೆಲುಬಾಗಿ ನಿಂತು ಶಕ್ತಿ ತುಂಬಿದಳು. ಕಳೆದ ಎರಡು ವರ್ಷಗಳಿಂದ ಅಂತೂ ಅವಳು ನನ್ನನ್ನು ನೋಡಿಕೊಂಡ ರೀತಿಯೇ ಬೇರೆ ಥರಹದಲ್ಲಿತ್ತು. ಯಾವುದಕ್ಕೋ ನನ್ನನ್ನು ಅಣಿಗೊಳಿಸುತ್ತಿದ್ದಳೇನೋ ಎಂದು ಈಗ ಅನ್ನಿಸುತ್ತಿದೆ. ಸದಾ ಬ್ಯುಸಿಯಾಗಿರುತ್ತಿದ್ದಳು, ನಾನೂ ಸಹ ಬ್ಯುಸಿಯಾಗಿರುವಂತೆ ನೋಡಿಕೊಳ್ಳುತ್ತಿದ್ದಳು. ಧೈರ್ಯ ತುಂಬುತ್ತಿದ್ದಳು, ಅವಳೂ ಸಹ ಸಿನಿಮಾ ವಿಷಯಗಳಲ್ಲಿ ಹೆಚ್ಚು ಸಕ್ರಿಯವಾಗತೊಡಗಿದ್ದಳು” ಎಂದು ನೆನಪು ಮಾಡಿಕೊಂಡರು.
”ಈಗ ಎಲ್ಲವೂ ಬದಲಾಗಿದೆ. ಆದರೆ ನನ್ನ ಕರ್ತವ್ಯವನ್ನು ನಾನು ಮುಂದುವರೆಸಬೇಕಿದೆ. ಮಗನಿಗಾಗಿ, ಅವನ ಮೇಲೆ ಸ್ಪಂದನಾ ಇಟ್ಟಿದ್ದ ಕನಸುಗಳನ್ನು ಈಡೇರಿಸಲು ಕೆಲಸ ಮಾಡಬೇಕಿದೆ. ಅವಳು ನಮ್ಮನ್ನೆಲ್ಲ ಆವರಿಸಿಕೊಂಡು ಬಿಟ್ಟಿದ್ದಳು, ನನ್ನ ತಾಯಿಗೆ ತಾಯಿಯಾಗಿದ್ದಳು. ನನ್ನ ಅಮ್ಮನಿಗೆ ಆರೋಗ್ಯ ಸರಿಯಿಲ್ಲ. ಅವರನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಳು. ನನ್ನ ತಂದೆಯೂ ಸಹ, ಆಕೆಯನ್ನು ಬಹಳ ಹಚ್ಚಿಕೊಂಡಿದ್ದರು. ‘ನಿನ್ನೊಂದಿಗೆ ಏನು ಮಾತನಾಡೋದು, ನೀನು ಬಾರಮ್ಮ ಇಲ್ಲಿ’ ಎಂದು ಅವಳನ್ನು ಕರೆದು ವಿಷಯಗಳನ್ನು ಚರ್ಚಿಸುತ್ತಿದ್ದಳು. ನಮ್ಮ ಬದುಕನ್ನು ಅವಳು ಆವರಿಸಿಕೊಂಡಿದ್ದಳು” ಎಂದು ಭಾವುಕರಾಗಿ ಕಣ್ಣೀರು ಹಾಕಿದ್ದಾರೆ ವಿಜಯ್.
” ಸಿನಿಮಾದವರು ನಮಗೆ ಹಣ ಕೊಡುತ್ತಾರೆ, ಹೆಸರು ಕೊಡುತ್ತಾರೆ. ಇಂಥಹಾ ಸಮಯದಲ್ಲಿ ನಾನು ನಿರ್ಮಾಪಕರಿಗೆ ಸಹಾಯ ಅಥವಾ ನನ್ನ ಕರ್ತವ್ಯವನ್ನು ನಾನು ಮಾಡದೇ ಇದ್ದರೆ ಹೇಗೆ. ಅದೂ ಅಲ್ಲದೆ, ನಾನು ಸುಮ್ಮನೆ ಕುಳಿತುಕೊಳ್ಳುವುದು ಸ್ಪಂದನಾಗೆ ಇಷ್ಟವಾಗುವುದಿಲ್ಲ. ಒಂದು ಕೆಲಸ ಪ್ರಾರಂಭಿಸಿದರೆ ಮುಗಿಸದೇ ಬಿಡುತ್ತಿರಲಿಲ್ಲ. ಅದೂ ಅಲ್ಲದೆ ‘ಕದ್ದ ಚಿತ್ರ’ ಸಿನಿಮಾ ತಂಡದ ಬಗ್ಗೆ ಸ್ಪಂದನಾಗೆ ವಿಶೇಷ ಅಕ್ಕರೆ ಇತ್ತು. ನಾನು ಇಂದು ಬೇಸರ ಮಾಡಿಕೊಂಡು ಮನೆಯಲ್ಲಿ ಕೂತಿದ್ದರೆ ಅದು ಸ್ಪಂದನಾಗೆ ಇಷ್ಟವಾಗುತ್ತಿರಲಿಲ್ಲ. ನಾನು ಮಾಡುತ್ತಿರುವ ಈ ಕರ್ತವ್ಯದಲ್ಲಿ, ನಿರ್ವಹಿಸುತ್ತಿರುವ ಜವಾಬ್ದಾರಿಯಲ್ಲಿ ಸ್ಪಂದನಾರನ್ನು ಕಾಣುತ್ತಿದ್ದೇನೆ” ಎಂದಿದ್ದಾರೆ ವಿಜಯ್ ರಾಘವೇಂದ್ರ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ