
ಕನ್ನಡದ ಸಿನಿಮಾಗಳು (Kannada Cinema) ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿವೆ. ‘ಕೆಜಿಎಫ್: ಚಾಪ್ಟರ್ 2’ ಚಿತ್ರ ಮಾಡಿದ ಮೋಡಿ ಸಣ್ಣದೇನಲ್ಲ. ಹಾಗಂತ ಕೇವಲ ಹೈ ಬಜೆಟ್ನ ಸಿನಿಮಾಗಳು ಮಾತ್ರ ಈ ರೀತಿ ಸದ್ದು ಮಾಡುತ್ತಿಲ್ಲ. ಬದಲಿಗೆ, ಒಳ್ಳೆಯ ಕಥಾವಸ್ತು ಇರುವ ಕನ್ನಡದ ಹಲವು ಸಿನಿಮಾಗಳು ಪರಭಾಷೆ ಮಂದಿಯ ಗಮನ ಸೆಳೆಯುತ್ತಿವೆ. ಇತ್ತೀಚೆಗೆ ‘777 ಚಾರ್ಲಿ’ ಸಿನಿಮಾ ಭಾರಿ ಯಶಸ್ಸು ಕಂಡಿತು. ಈಗಿನದ್ದು ‘ಶುಗರ್ಲೆಸ್’ (Sugarless Movie) ಸಿನಿಮಾದ ಸರದಿ. ಈ ಚಿತ್ರಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಕ್ಕ-ಪಕ್ಕದ ರಾಜ್ಯಗಳ ಸೆಲೆಬ್ರಿಟಿಗಳು ಕೂಡ ಈ ಸಿನಿಮಾವನ್ನು ಹೊಗಳುತ್ತಿದ್ದಾರೆ. ದಕ್ಷಿಣ ಭಾರತದ ಸ್ಟಾರ್ ನಟ ವಿಜಯ್ ಸೇತುಪತಿ (Vijay Sethupathi) ಅವರು ‘ಶುಗರ್ಲೆಸ್’ ಚಿತ್ರಕ್ಕೆ ಅಭಿನಂದನೆ ತಿಳಿಸಿದ್ದಾರೆ.
ವಿಶೇಷ ಕಥಾಹಂದರ ಇಟ್ಟುಕೊಂಡು ‘ಶುಗರ್ಲೆಸ್’ ಸಿನಿಮಾ ಮಾಡಲಾಗಿದೆ. ಯೌವನದಲ್ಲೇ ಮಧುಮೇಹದಿಂದ ಬಳಲುವ ಯುವಕನ ಕುರಿತಾದ ಕಥೆ ಈ ಚಿತ್ರದಲ್ಲಿದೆ. ನಾಯಕನಾಗಿ ‘ದಿಯಾ’ ಸಿನಿಮಾ ಖ್ಯಾತಿಯ ಪೃಥ್ವಿ ಅಂಬಾರ್ ನಟಿಸಿದ್ದಾರೆ. ನಿರ್ಮಾಪಕ ಕೆ.ಎಂ. ಶಶಿಧರ್ ಅವರು ಬಂಡವಾಳ ಹೂಡುವುದರ ಜೊತೆಗೆ ನಿರ್ದೇಶಕವನ್ನೂ ಮಾಡಿ ಸೈ ಎನಿಸಿಕೊಂಡಿದ್ದಾರೆ. ಅವರ ಚೊಚ್ಚಲ ಆ್ಯಕ್ಷನ್-ಕಟ್ ಪ್ರಯತ್ನಕ್ಕೆ ಜನರು ಭೇಷ್ ಎಂದಿದ್ದಾರೆ.
ಈ ಸಿನಿಮಾದಲ್ಲಿ ಪೃಥ್ವಿ ಅಂಬಾರ್ ಅವರಿಗೆ ಜೋಡಿಯಾಗಿ ಪ್ರಿಯಾಂಕಾ ತಿಮ್ಮೇಶ್ ನಟಿಸಿದ್ದಾರೆ. ಧರ್ಮಣ್ಣ ಅವರು ಪ್ರೇಕ್ಷಕರಿಗೆ ಕಾಮಿಡಿ ಕಚಗುಳಿ ಇಟ್ಟಿದ್ದಾರೆ. ವಿಮರ್ಶಕರು ಕೂಡ ‘ಶುಗರ್ಲೆಸ್’ಗೆ ಮನಸೋತಿದ್ದಾರೆ. ಇಷ್ಟೆಲ್ಲ ಸದ್ದು ಮಾಡುತ್ತಿರುವ ಚಿತ್ರದ ಬಗ್ಗೆ ಸ್ಟಾರ್ ನಟ ವಿಜಯ್ ಸೇತುಪತಿ ಅವರು ಟ್ವೀಟ್ ಮಾಡಿದ್ದಾರೆ. ‘ಭಾರಿ ಯಶಸ್ಸು ಕಂಡ ಶುಗರ್ಲೆಸ್ ಚಿತ್ರಕ್ಕೆ ಅಭಿನಂದನೆಗಳು’ ಎಂದು ಬರೆದುಕೊಂಡಿರುವ ಅವರು, ಈ ಸಿನಿಮಾದ ಪೋಸ್ಟರ್ ಶೇರ್ ಮಾಡಿಕೊಂಡಿದ್ದಾರೆ. ಇದರಿಂದ ಚಿತ್ರತಂಡದ ಖುಷಿ ಹೆಚ್ಚಿದೆ.
ಪೃಥ್ವಿ ಅಂಬಾರ್ ಅವರಿಗೆ ಜುಲೈ ತಿಂಗಳು ತುಂಬ ಸ್ಪೆಷಲ್. ಶಿವರಾಜ್ಕುಮಾರ್ ಜೊತೆ ಅವರು ನಟಿಸಿದ ‘ಬೈರಾಗಿ’ ಚಿತ್ರ ಜುಲೈ 1ರಂದು ತೆರೆಕಂಡಿತು. ಜುಲೈ 8ಕ್ಕೆ ‘ಶುಗರ್ಲೆಸ್’ ಬಿಡುಗಡೆ ಆಯಿತು. ಎರಡು ಸಿನಿಮಾಗಳ ಮೂಲಕ ಅವರು ಚಿತ್ರಮಂದಿರದಲ್ಲಿ ಅಭಿಮಾನಿಗಳನ್ನು ರಂಜಿಸಿದ್ದಾರೆ. ಇನ್ನೂ ಅನೇಕ ಸಿನಿಮಾಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ. ಇತ್ತೀಚೆಗೆ ಕನ್ನಡ ಚಿತ್ರರಂಗದ ಹಲವು ಸೆಲೆಬ್ರಿಟಿಗಳಿಗಾಗಿ ‘ಶುಗರ್ಲೆಸ್’ ಸಿನಿಮಾದ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು.