ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ತೂಗುದೀಪ ಬಂಧನವಾಗಿ 19 ದಿನಗಳಾಗಿವೆ. ದರ್ಶನ್ ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ದಿನಗಳನ್ನು ಕಳೆಯುತ್ತಿದ್ದಾರೆ. ಇತ್ತ ಹೊರಗೆ ಅವರ ಪತ್ನಿ, ಪತಿಯನ್ನು ಹೇಗಾದರೂ ಜೈಲಿನಿಂದ ಹೊರತರುವ ಪ್ರಯತ್ನದಲ್ಲಿದ್ದಾರೆ. ಆದರೆ ವಿಚಿತ್ರವೆಂದರೆ ದರ್ಶನ್ ಜೈಲು ಪಾಲಾಗಿರುವುದು ಆಪ್ತೆ ಪವಿತ್ರಾರ ಕಾರಣದಿಂದಲೇ. ಹೀಗಿರುವಾಗ ಪತ್ನಿ ವಿಜಯಲಕ್ಷ್ಮಿ ಅವರ ಮನಸ್ಥಿತಿ ಹೇಗಿದೆ? ವಿಜಯಲಕ್ಷ್ಮಿಯವರನ್ನು ಭೇಟಿಯಾಗಿದ್ದ ಅವರ ಬಹುಕಾಲದ ಗೆಳತಿ ಗಾಯಕಿ ಶಮಿತಾ ಮಲನಾಡ್ ಈ ಬಗ್ಗೆ ಮಾತನಾಡಿದ್ದಾರೆ.
‘ನಾನು, ವಿಜಯಲಕ್ಷ್ಮಿ ಬಹು ಕಾಲದಿಂದಲೂ ಗೆಳತಿಯರು. ಇಬ್ಬರು ಒಟ್ಟಿಗೆ ಟಿವಿ ಆಂಕರಿಂಗ್ ಮಾಡುತ್ತಿದ್ದೆವು. ವಿಜಯಲಕ್ಷ್ಮಿ ನಾನು ನೋಡಿದ ಅತ್ಯಂತ ಧೈರ್ಯವಂತ, ದಿಟ್ಟ ಮಹಿಳೆ. ಅಷ್ಟು ಧೈರ್ಯವಂತ, ಸಹಿಷ್ಣು ಮಹಿಳೆಯನ್ನು ನಾನಂತೂ ನನ್ನ ಜೀವನದಲ್ಲಿ ನೋಡಿಲ್ಲ. ಈ ಘಟನೆ ಆದಾಗ ನನಗೆ ಬಹಳ ಶಾಕ್ ಆಗಿತ್ತು. ವಿಜಯಲಕ್ಷ್ಮಿಯ ಸ್ಥಿತಿ ನೆನಪಿಸಿಕೊಂಡು ಬಹಳ ದುಃಖ ಪಟ್ಟಿದ್ದೆ. ಘಟನೆ ಬಳಿಕ ಹೋಗಿ ಭೇಟಿ ಸಹ ಆದೆ’ ಎಂದಿದ್ದಾರೆ.
‘ವಿಜಯಲಕ್ಷ್ಮಿ ಧೈರ್ಯವಾಗಿದ್ದಾರೆ. ದರ್ಶನ್ ತಪ್ಪು ಮಾಡಿಲ್ಲ ಎಂಬ ಖಾತ್ರಿ ಅವರಿಗಿದೆ. ದರ್ಶನ್ ಖಂಡಿತ ಹೊರಗೆ ಬರುತ್ತಾರೆ ಆತಂಕ ಪಡಬೇಡಿ ಎಂದು ನಮಗೇ ಅವರು ಧೈರ್ಯ ಹೇಳಿದ್ದಾರೆ. ಅವರಿಗೆ ಇರುವ ಆತಂಕ ಒಂದೇ ಎಂದರೆ ಅಭಿಮಾನಿಗಳದ್ದು, ಅಭಿಮಾನಿಗಳು ಏನೋ ಮಾಡಲು ಹೋಗಿ ಮತ್ತೇನಾದರೂ ಮಾಡಿಬಿಟ್ಟಾರು ಎಂಬ ಆತಂಕವಿದೆ. ಅದೇ ಕಾರಣಕ್ಕೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಸಹ ಹಂಚಿಕೊಂಡಿದ್ದರು.
‘ವಿಜಯಲಕ್ಷ್ಮಿ ಬುದ್ಧಿವಂತ ಮಹಿಳೆ, ಪತಿಗಾಗಿ ಹೋರಾಟ ಮಾಡುತ್ತಿದ್ದಾರೆ. ದರ್ಶನ್ ಅವರನ್ನು ಹೊರಗೆ ಕರೆದುಕೊಂಡು ಬರುವ ವಿಶ್ವಾಸದಲ್ಲಿದ್ದಾರೆ. ಅವರ ಮಗ ಚಿಕ್ಕವನಾದರೂ ಸಹ ಬಹಳ ಗಟ್ಟಿಯಾಗಿದ್ದಾನೆ. ನಾನು ಕಂಡಂತೆ ವಿಜಯಲಕ್ಷ್ಮಿಗೆ ಈ ರೀತಿಯ ಸಮಸ್ಯೆಗಳು ಇದು ಮೊದಲೇನೂ ಅಲ್ಲ. ಈ ಹಿಂದೆಯೂ ಸಹ ಕೆಲವು ಬಾರಿ ಇಂಥಹಾ ಸಮಸ್ಯೆಗಳನ್ನು ಎದುರಿಸಿದ್ದಾರೆ. ಆಗೆಲ್ಲ ಅವನ್ನು ಗಟ್ಟಿಯಾಗಿ ನಿಭಾಯಿಸಿದ್ದಾರೆ. ತಮ್ಮ ಕುಟುಂಬಕ್ಕಾಗಿ ಹಲವು ನೋವುಗಳನ್ನು ಅವರು ಸಹಿಸಿಕೊಂಡಿದ್ದಾರೆ. ಕೇವಲ ಕುಟುಂಬದ ಕಡೆ ಮಾತ್ರವೇ ಗಮನ ಹರಿಸಿದ್ದಾರೆ’ ಎಂದಿದ್ದಾರೆ ಶಮಿತಾ.
ಇದನ್ನೂ ಓದಿ:ಸೆಂಟ್ರಲ್ ಜೈಲಿನ ಬಳಿ ಬಂದ ಕುಡುಕನೊಬ್ಬ ದರ್ಶನ್ ರನ್ನು ನೋಡಲೇಬೇಕೆಂದು ಹಠ ಸಾಧಿಸಿದ!
‘ದರ್ಶನ್ ಜೊತೆಗೆ ಮಾತನಾಡಿದ್ದಾಗಿಯೂ ಯಾವುದೇ ಸಮಸ್ಯೆ ಇಲ್ಲ, ಅವರು ಆರಾಮವಾಗಿದ್ದಾರೆ ಎಂದು ವಿಜಯಲಕ್ಷ್ಮಿ ಹೇಳಿದ್ದಾರೆ. ಬಂಧನವಾದ ದಿನ ಖಂಡಿತ ಅವರಿಗೆ ಶಾಕ್ ಆಗಿತ್ತು, ಏಕೆಂದರೆ ಈ ವಿಷಯಗಳೆಲ್ಲ ಅವರಿಗೆ ಗೊತ್ತಿರಲಿಲ್ಲ. ಆದರೆ ವಿಜಯಲಕ್ಷ್ಮಿ, ಮನಸ್ಸಿನಿಂದ ದರ್ಶನ್ ಅನ್ನು ಪ್ರೀತಿಸಿದವರು, ಹಾಗಾಗಿ ಏನೇ ಆದರು ಪತಿಯ ಬೆಂಬಲಕ್ಕೆ ನಿಲ್ಲುತ್ತಾರೆ, ನಿಂತಿದ್ದಾರೆ. ಎಲ್ಲವೂ ಒಳ್ಳೆಯದೇ ಆಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದಾರೆ’ ಎಂದಿದ್ದಾರೆ ಶಮಿತಾ ಮಲ್ನಾಡ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ