Jack Manju: ‘ನನಗೆ ವಿಕ್ರಾಂತ್​ ರೋಣ ಚಿತ್ರದಿಂದ ನಷ್ಟ ಆಗಿಲ್ಲ’: ಪತ್ರದ ಮೂಲಕ ನಿರ್ಮಾಪಕರ ಸಂಘಕ್ಕೆ ಜಾಕ್​ ಮಂಜು ಸ್ಪಷ್ಟನೆ

|

Updated on: Jul 13, 2023 | 12:52 PM

Kichcha Sudeep: ರೆಹಮಾನ್​ ಅವರು ಸುದ್ದಿಗೋಷ್ಠಿ ನಡೆಸಿದ್ದರ ಬಗ್ಗೆ ಜಾಕ್​ ಮಂಜು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಅವರು ನಿರ್ಮಾಪಕರ ಸಂಘಕ್ಕೆ ಸುದೀರ್ಘ ಪತ್ರ ಬರೆದು ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.

Jack Manju: ‘ನನಗೆ ವಿಕ್ರಾಂತ್​ ರೋಣ ಚಿತ್ರದಿಂದ ನಷ್ಟ ಆಗಿಲ್ಲ’: ಪತ್ರದ ಮೂಲಕ ನಿರ್ಮಾಪಕರ ಸಂಘಕ್ಕೆ ಜಾಕ್​ ಮಂಜು ಸ್ಪಷ್ಟನೆ
ಜಾಕ್​ ಮಂಜು, ಸುದೀಪ್​
Follow us on

ಕಿಚ್ಚ ಸುದೀಪ್​ (Kichcha Sudeep) ವರ್ಸಸ್​ ಎಂ.ಎನ್​. ಕುಮಾರ್​ ಅವರ ವಿವಾದವು ಬೇರೆ ಬೇರೆ ಸ್ವರೂಪ ಪಡೆದುಕೊಳ್ಳುತ್ತಿದೆ. ಸುದೀಪ್​ ನಟಿಸಿದ ಇತರೆ ಸಿನಿಮಾಗಳ ವಿಷಯ ಕೂಡ ಇದಕ್ಕೆ ಸೇರ್ಪಡೆ ಆಗುತ್ತಿದೆ. ‘ಹುಚ್ಚ’ ಚಿತ್ರದ ನಿರ್ಮಾಪಕ ರೆಹಮಾನ್​ ಅವರು ಸುದ್ದಿಗೋಷ್ಠಿ ನಡೆಸಿದ್ದರ ಬಗ್ಗೆ ಜಾಕ್​ ಮಂಜು (Jack Manju) ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಅವರು ನಿರ್ಮಾಪಕರ ಸಂಘಕ್ಕೆ ಸುದೀರ್ಘ ಪತ್ರ ಬರೆದು ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಸುದ್ದಿಗೋಷ್ಠಿ ವೇಳೆ ರೆಹಮಾನ್​ ಆಡಿದ ಅನೇಕ ಮಾತುಗಳನ್ನು ಜಾಕ್​ ಮಂಜು ಅವರು ತಳ್ಳಿ ಹಾಕಿದ್ದಾರೆ. ‘ವಿಕ್ರಾಂತ್​ ರೋಣ’ (Vikrant Rona) ಸಿನಿಮಾದಿಂದ ತಮಗೆ ನಷ್ಟ ಆಗಿಲ್ಲ ಎಂದು ಕೂಡ ಅವರು ಸ್ಪಷ್ಟನೆ ನೀಡಿದ್ದಾರೆ. ಅವರು ಬರೆದ ಪತ್ರ ಇಲ್ಲಿದೆ..

‘ಎಲ್ಲರಿಗೂ ನಮಸ್ಕಾರ.. ಕಳೆದ ಹಲವಾರು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ನಾನೂ ಓರ್ವ ನಿರ್ಮಾಪಕ- ವಿತರಕನಾದ್ದೇನೆ. ಅದೃಷ್ಟವಶಾತ್​​ ನಾನೂ ನಿರ್ಮಾಪಕರ ಸಂಘದ ಸದಸ್ಯನಾಗಿದ್ದೇನೆ. ಮೊನ್ನೆ ನನಗೂ ನಿರ್ಮಾಪಕರ ಸಂಘದ ಕಚೇರಿಗೆ ಧಿಡೀರನೆ ಬಂದು ಪತ್ರಕರ್ತರನ್ನೆಲ್ಲಾ ಗುಡ್ಡೆ ಹಾಕಿಕೊಂಡು ಯಾವುದೇ ಮುನ್ಸೂಚನೆ ಇಲ್ಲದೇ ಗೋಷ್ಠಿ ನಡೆಸಿ ಸತ್ಯವನ್ನು ಬಟಾಬಯಲು ಮಾಡಬೇಕೆಂದೆನಿಸಿತು. ಆದರೆ ನನಗೆ ಆ ಸ್ಥಳದ ಬಗ್ಗೆ, ಗೌರವವಿದೆ. ನಿರ್ಮಾಪಕರ ಸಂಘ ಈ ಹಿಂದಿನಿಂದಲೂ ಸಮಸ್ತ ನಿರ್ಮಾಪಕರುಗಳನ್ನು ಕಾಪಾಡಿಕೊಂಡು ಬರಲು ಹಾಕಿಕೊಂಡಿರುವ ಸ್ವಯಂ ಕಟ್ಟುಪಾಡುಗಳ ಅರಿವಿದೆ.’

‘ನಿಮ್ಮಿಂದ ಯಾವುದೇ ಪ್ರತಿಕ್ರಿಯೆ ಬಯಸದೇ ನನ್ನ ಉತ್ತರ-ಅಭಿಪ್ರಾಯಗಳನ್ನು ನಿಮಗೇ ಬರೆಯುತ್ತಿದ್ದೇನೆ. ಪತ್ರಿಕಾಗೋಷ್ಠಿ ಕರೆದು ಸ್ವಕುಚಮರ್ಧನ ಮಾಡಿಕೊಳ್ಳುವ, ಸುಳ್ಳುಗಳ ರಾಶಿ ತಂದೊಡಿ ನಿರ್ಮಾಪಕರದಷ್ಟೇ ಅಲ್ಲ, ಸಂಘದ ಮರ್ಯಾದೆಯನ್ನೂ ತೆಗೆಯುವ ಇರಾದೆ ನನಗಿಲ್ಲ. ನಾನು ಹೇಳುವುದರಲ್ಲಿ ಸುಳ್ಳಿದ್ದರೆ, ಕಾರಾನಿನ ಅಲ್ಲಾ ಭಗವದ್ಗೀತೆಯ ಶ್ರೀಕೃಷ್ಣನೇ ನೋಡಿಕೊಳ್ಳುತ್ತಾನೆ.’

ಇದನ್ನೂ ಓದಿ: Kichcha Sudeep: ಎಷ್ಟೇ ಮೀಟಿಂಗ್​ ಆದ್ರೂ ಸುದೀಪ್​-ಎಂ.ಎನ್​. ಕುಮಾರ್​ ನಡುವೆ ಕಿರಿಕ್​ ಯಾಕೆ ಬಗೆಹರಿಯಲಿಲ್ಲ? ವಿವರ ನೀಡಿದ ಜಾಕ್​ ಮಂಜು

‘ನನಗಂತೂ ನಿರ್ಮಾಪಕರ ಸಂಘವು ನಿರ್ಮಾಪಕರ ಹಿತ ಕಾಯುವಲ್ಲಿ ಬಳಸುತ್ತಿರುವ ತಾರತಮ್ಯ, ಮಲತಾಯಿ ಧೋರಣೆಗಳ ಬಗ್ಗೆ ಅತೀವವಾದ ಸಂಕಟವಿದೆ. ಆದರೂ ತಮ್ಮ ಘನ ಸಮಕ್ಷಮಕ್ಕೆ ಉತ್ತರಿಸುತ್ತೇನೆ. ಸಂಘ ನಾಲ್ಕಾರು ಜನರ ಹಿತಕಾಯುವ ಮಾಫಿಯಾ ಮಾತ್ರ ಆಗದಿರಲಿ. ಸ್ವಯಂ ಕಟ್ಟುಪಾಡು ಎಲ್ಲರ ಹಿತಾಸಕ್ತಿಗೆ ಒಗ್ಗಲಿ ಎಂಬುದು ನನ್ನ ಮನವಿ. ನನಗೆ ಸುದೀಪ್ ನಾಯಕತ್ವದ ಪ್ಯಾನ್​ ಇಂಡಿಯಾ ಸಿನಿಮಾ ‘ವಿಕ್ರಾಂತ್ ರೋಣ’ದಿಂದ ಯಾವುದೇ ನಷ್ಟವಾಗಿಲ್ಲ. ತನ್ನ ಕೋಟಿಗಟ್ಟಲೇ ಸಂಭಾವನೆ ಪಡೆಯದೇ ಸುದೀಪ್ ಎಂದಿನಂತೆ ನನ್ನ ಕೈ ಹಿಡಿದಿದ್ದಾರೆ. ಅದಿರಲಿ, ಅದು ನಮ್ಮ ಮನೆಯ ಸಹೋದರರ ವಿಷಯ.’

‘ಖಾವಂದರೇ.. ರೆಹಮಾನ್ ರವರ ಹೇಳಿಕೆಯಲ್ಲಿನ ದ್ವಂದ ಕಾಡುತ್ತಿದೆ. ಸಾವಿರಾರು ಸಲ ಫೋನ್ ಮಾಡಿದರೂ ಅವರ ಕರೆ ಸ್ವೀಕರಿಸದ ನಾನು, ನನಗೆ ವಿಕ್ರಾಂತ್ ರೋಣ ಸಿನಿಮಾದಿಂದ ನಷ್ಟವೇ ಆಗಿದ್ದರೆ, ಇದೇ ವ್ಯಕ್ತಿ ಅಂದರೆ ಸಾವಿರಾರು ಕರೆಗಳನ್ನು ಸ್ವೀಕರಿಸದ ರೆಹಮಾನ್​ರ​ನ್ನು ಹುಡುಕಿ ನನಗೆ ನಷ್ಟವಾಯಿತು ಎಂದು ಹೇಳಿಕೊಂಡೆನೇ? ಎಷ್ಟು ಹಾಸ್ಯಾಸ್ಪದ ಹೇಳಿಕೆಯಲ್ಲವೇ? ಅವರಿಗೆ ಕರೆ ಮಾಡಿ ಕಷ್ಟ ಹೇಳಿಕೊಳ್ಳಲು ನನ್ನ ರೆಹಮಾನ್ ಸಂಬಂಧವೇನು? ಇದರಲ್ಲೇ ರೆಹಮಾನ್ ಅವರ ಸತ್ಯಾಸತ್ಯತೆ ನಿಮಗೆ ತಿಳಿಯಲಿಲ್ಲವೇ?’

‘ಇದು ನನ್ನ ಸಹೋದರರಾದ ಸುದೀಪ್ ಮತ್ತು ನನ್ನ ನಡುವೆ ತಂದಿಟ್ಟು ಅಣ್ಣ-ತಮ್ಮಂದಿರನ್ನು ಮತ್ತು ಅವರ ಅಭಿಮಾನಿಗಳನ್ನು ನನ್ನಿಂದ ದೂರ ಮಾಡುವ ಕುತಂತ್ರ ಅಲ್ಲವೇ? ಇದಕ್ಕೇ ಹೇಳಿದ್ದು ಶ್ರೀಯುತರಾದ ಸುದೀಪ್ ಅವರು ಪ್ರತಿಕ್ರಿಯಿಸಲು ಯೋಗ್ಯವಾದರೆ ಮಾತ್ರ ಉತ್ತರಿಸುತ್ತಾರೆಂದು. ನನ್ನ ಎಲ್ಲ ಕಷ್ಟ-ನಷ್ಟ ಹೇಳಿಕೊಳ್ಳಲು ಹಿತೈಷಿಗಳಿದ್ದಾರೆ. ನಿರ್ಮಾಪಕರ ಸಂಘದ ಖಾವಂದರುಗಳಾದ ತಾವಿದ್ದೀರಿ. ಎಲ್ಲ ಬಿಟ್ಟು, ರೆಹಮಾನ್​ರಿಗೆ ಕರೆ ಮಾಡಿದೆನೇ? ನಾನೇ ನನ್ನ ಕೈಯಾರೆ, ಆಸ್ಪತ್ರೆ, ಮನೆ ಮುಂತಾದ ತುರ್ತು ಪರಿಸ್ಥಿತಿಗಳಲ್ಲಿ ಸುದೀಪ್ ಅವರು ನೀಡಿದ ಸಹಾಯವನ್ನು ರೆಹಮಾನ್​ರಿಗೆ ತಲುಪಿಸಿ ಜೀವಂತ ಸಾಕ್ಷಿಯಾಗಿದ್ದೇನೆ.’

ಇದನ್ನೂ ಓದಿ: Kichcha Sudeep: ಸುದೀಪ್​ ವರ್ಸಸ್​ ಎಂ.ಎನ್​. ಕುಮಾರ್​ ವಿವಾದ ಹುಟ್ಟಿಕೊಂಡಿದ್ದು ಹೇಗೆ? ಪೂರ್ತಿ ಮಾಹಿತಿ ಇಲ್ಲಿದೆ..

‘ನನ್ನ ಸಹೋದರರಾದ ನಿರ್ಮಾಪಕರೂ ಆದ ಹಿರಿಯ ಕಲಾವಿದ ಶ್ರೀ ಸುದೀಪ್ ಅವರ ಬಗ್ಗೆ ನಿರರ್ಗಳ ಎರಡು ಗಂಟೆಗಳ ಕಾಲ ಸುಳ್ಳಿನ ‘ಪ್ರವಾಹ ಗೋಷ್ಠಿ’ಗೆ ಅವಕಾಶ ಮಾಡಿಕೊಟ್ಟು ನನ್ನ ಹೆಸರೂ ಅದರಲ್ಲಿ ಸಾಕ್ಷಿಯಾಗಿ ಬಂತು. ಆ ಎರಡು ಗಂಟೆಗಳ ದಿಗ್ಭ್ರಮಾ ಗೋಷ್ಠಿಯ ಸುಳ್ಳುಗಳಿಗೆ ಶ್ರೀಯುತರಾದ ಸುದೀಪ್ ಅವರು ಓರ್ವ ನಿರ್ಮಾಪಕನಾಗಿ ಉತ್ತರ ಕೊಡದೇ ನಿರ್ಲಕ್ಷ್ಯ ಮಾಡಬಹುದು. ಅದು ಉತ್ತರ ಕೊಡಲು ಯೋಗ್ಯವಾದ ಸಂಗತಿಯಾದರೆ ಪ್ರತಿಕ್ರಿಯಿಸಬಹುದು.’

‘ಎಲ್ಲದಕ್ಕೂ ಒಂದು ಪರಿವೀಕ್ಷಣೆ, ಅಪ್ತ ಸಮಾಲೋಚನೆ ಮಾಡಬೇಕು. ನಂತರ ನನ್ನಂತಹ ಓರ್ವ ನಿರ್ಮಾಪಕ – ವಿತರಕನ ಮೇಲೆ ಇಲ್ಲಸಲ್ಲದ ಸುಳ್ಳು ಹೇಳಲು ಸಂಘದ ಕಚೇರಿಯನ್ನೇ ಪತ್ರಿಕಾಗೋಷ್ಠಿಗೆ ಈಡುಮಾಡುವಾಗ ನನ್ನ ದೂರವಾಣಿಗಾದರೂ ಒಂದು ಸಂದೇಶ ಕೊಡಬಹುದಿತ್ತಲ್ಲವೇ? ನಿರ್ಮಾಪಕರ ಹಿತಕಾಯುವಲ್ಲಿ ತಾವು ಹಿಡಿಯುತ್ತಿರುವ ಮಾರ್ಗ ಸಂಘದ ಘನತೆಯನ್ನೂ ಕುಗ್ಗಿಸುತ್ತಿದೆ. ಇನ್ನು ಮುಂದಾದರೂ ಇದಾಗದಿರಲಿ ಎಂದು ನನಗೆ ನಾನೇ ಸಮಾಧಾನ ಹೇಳಿಕೊಳ್ಳುತ್ತಾ, ನಂಬುತ್ತಾ..’

ನಿಮ್ಮಲ್ಲಿ ನಾನೂ ಒಬ್ಬನಾದ
ನಿರ್ಮಾಪಕ, ವಿತರಕ ಜಾಕ್​ ಮಂಜು

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.