ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮಾಡುವ ಸಂದರ್ಭದಲ್ಲಿ ಮಚ್ಚು ತೋರಿಸಿದ್ದ ಕಾರಣ ವಿನಯ್ ಗೌಡ ಮತ್ತು ರಜತ್ ಅವರನ್ನು ಪೊಲೀಸರು ಬಂಧಿಸಿದ್ದರು. ಇದರಿಂದಾಗಿ ಕೆಲ ದಿನಗಳ ಕಾಲ ವಿನಯ್ ಮತ್ತು ರಜತ್ ಅವರುಗಳು ಜೈಲು ವಾಸ ಅನುಭವಿಸಬೇಕಾಯ್ತು. ನಿನ್ನೆ ಈ ಇಬ್ಬರಿಗೂ ಜಾಮೀನು ದೊರೆತಿದ್ದು, ಇಂದು (ಮಾರ್ಚ್ 29) ಇಬ್ಬರೂ ಸಹ ಜೈಲಿನಿಂದ ಬಿಡುಗಡೆ ಆಗಿದ್ದಾರೆ. ಜೈಲಿಂದ ಬಿಡುಗಡೆ ಆಗುತ್ತಿದ್ದಂತೆ ವಿನಯ್ ಗೌಡ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದು ಎಲ್ಲರ ಕ್ಷಮೆ ಕೋರಿದ್ದಾರೆ.
ವಿಡಿಯೋ ಅಪ್ಲೋಡ್ ಮಾಡಿರುವ ವಿನಯ್ ಗೌಡ, ‘ಎಲ್ಲರಿಗೂ ಗೊತ್ತಿರುವಂತೆ ಒಂದು ಘಟನೆ ನಡೆದು ಹೋಗಿದೆ. ಈ ವಿಡಿಯೋ ಮಾಡುತ್ತಿರುವ ಉದ್ದೇಶವೆಂದರೆ ಕರ್ನಾಟಕದಲ್ಲಿರುವ ಪ್ರತಿಯೊಬ್ಬರಿಗೂ ನನ್ನ ಕಡೆಯಿಂದ ಕ್ಷಮೆ ಕೇಳಬೇಕಿತ್ತು. ದಯವಿಟ್ಟು ನನ್ನನ್ನು ಕ್ಷಮಿಸಿಬಿಡಿ. ಕಳೆದ ನಾಲ್ಕು ದಿನಗಳಿಂದ ನೀವು ಟಿವಿ, ಯೂಟ್ಯೂಬ್ ಇನ್ನಿತರೆ ಕಡೆಗಳಲ್ಲಿ ‘ಒಂದು ಮಚ್ಚಿನ ಕತೆ’ ನೀವು ನೋಡಿರಬಹುದು. ಅದಕ್ಕಾಗಿ ನಾನು ಕ್ಷಮೆ ಕೇಳಬೇಕಿತ್ತು. ದಯವಿಟ್ಟು ನನ್ನನ್ನು ಕ್ಷಮಿಸಿ’ ಎಂದಿದ್ದಾರೆ ವಿನಯ್ ಗೌಡ.
‘ನನ್ನ ಅಭಿಮಾನಿಗಳಿಗೆ, ನನ್ನ ಕುಟುಂಬದವರಿಗೆ ಹಾಗೂ ನನ್ನ ಸ್ನೇಹಿತರಿಗೆ, ನನ್ನಿಂದ ತೊಂದರೆ ಆದ ಎಲ್ಲರಿಗೂ ನಾನು ಮನಃಪೂರ್ವಕವಾಗಿ ಕ್ಷಮೆ ಕೋರುತ್ತೀನಿ. ಸ್ನೇಹಿತರಾದ ಚೇತನ್, ಶಂಕರ್, ಸೀನಾ ಸಾಕಷ್ಟು ಜನ, ಹಗಲು-ರಾತ್ರಿ ಎಂದು ನೋಡದೆ ಬೆಂಬಲ ನೀಡಿದ್ದೀರಿ. ಪೊಲೀಸ್ ಠಾಣೆ, ಪರಪ್ಪನ ಅಗ್ರಹಾರದ ಬಳಿ ಎಲ್ಲ ಬಂದು ಸಾಕಷ್ಟು ತೊಂದರೆ ತೆಗೆದುಕೊಂಡಿದ್ದೀರಿ. ನಿಮಗೆಲ್ಲ ಧನ್ಯವಾದಗಳು’ ಎಂದಿದ್ದಾರೆ.
ಇದನ್ನೂ ಓದಿ:ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ? ವಿವರಿಸಿದ ಲಾಯರ್
ನನ್ನ ಅಕ್ಕ-ಭಾವ, ಮಾಧ್ಯಮದವರಿಗೂ ಕ್ಷಮೆ ಕೇಳುವೆ. ನಾನು ಆ ಮಚ್ಚು ಹಿಡಿದುಕೊಂಡು ವಿಡಿಯೋ ಮಾಡಬಾರದಿತ್ತು. ಈ ವಿಷಯ ಇಷ್ಟು ದೊಡ್ಡದಾಗುತ್ತೆ ಎಂಬುದು ನನಗೆ ಗೊತ್ತಿರಲಿಲ್ಲ. ನನ್ನ ಎಚ್ಚರಿಕೆಯಲ್ಲಿ ನಾನು ಇರಬೇಕಿತ್ತು. ನನ್ನ ಫಾಲೋವರ್ಗಳಿಗೆ ನಾನ ಕೆಟ್ಟ ಉದಾಹರಣೆ ನೀಡಬಾರದಿತ್ತು. ಸಾಕಷ್ಟು ಮಂದಿ ನನಗೆ ಬೆಂಬಲ ಸಹ ನೀಡಿದ್ದೀರಿ’ ಎಂದಿದ್ದಾರೆ ವಿನಯ್.
‘ಪೊಲೀಸರು ಅವರ ವೃತ್ತಿ ಮಾಡಿದ್ದಾರೆ. ಸೆಲೆಬ್ರಿಟಿ, ಸಾಮಾನ್ಯ ವ್ಯಕ್ತಿ ಎಂಬ ಭಿನ್ನತೆ ಇಲ್ಲದೆ ಅವರು ಕಾರ್ಯ ಮಾಡಿದ್ದಾರೆ. ಪೊಲೀಸರು ನಮ್ಮನ್ನು ಸಾಮಾನ್ಯರಂತೆ ನಡೆಸಿಕೊಂಡರು. ಗೌರವಯುತವಾಗಿಯೇ ನಡೆದುಕೊಂಡರು. ದಯವಿಟ್ಟು ಯಾರೂ ಸಹ ಅವರ ಮೇಲೆ ಆರೋಪಗಳನ್ನು ಮಾಡುವುದು ಬೇಡ’ ಎಂದಿದ್ದಾರೆ ನಟ ವಿನಯ್ ಗೌಡ.
ವಿನಯ್ ಗೌಡ ಮತ್ತು ರಜತ್ ಅವರುಗಳು ಮಚ್ಚು ಹಿಡಿದುಕೊಂಡು ರೀಲ್ಸ್ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದರಿಂದಾಗಿ ಪೊಲೀಸರು ಇಬ್ಬರನ್ನೂ ಬಂಧಿಸಿ ವಿಚಾರಣೆ ನಡೆಸಿದ್ದರು. ನಾಲ್ಕು ದಿನಗಳ ಕಾಲ ರಜತ್ ಮತ್ತು ವಿನಯ್ ಅವರುಗಳು ನ್ಯಾಯಾಂಗ ಬಂಧನ ಹಾಗೂ ಪೊಲೀಸ್ ಕಸ್ಟಡಿಯಲ್ಲಿ ಕಳೆಯಬೇಕಾಯ್ತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ