ವಿನಯ್ ರಾಜ್ಕುಮಾರ್ ನಟನೆಯ ‘ಪೆಪೆ’ ಸಿನಿಮಾದ ಟ್ರೈಲರ್ ಇಂದು (ಆಗಸ್ಟ್ 18) ಬಿಡುಗಡೆ ಆಗಿದೆ. ಸಿನಿಮಾದ ಟ್ರೈಲರ್ ಬಹಳ ಭಿನ್ನವಾಗಿದ್ದು, ಹಳ್ಳಿಯೊಂದರ ದ್ವೇಷ, ರಾಜಕೀಯ, ನಂಬಿಕೆ, ಮೋಹ ಇನ್ನಿತರೆ ವಿಷಯಗಳನ್ನು ಸೇರಿಸಿ ಮಾಡಿದ ಕತೆಯ ಸಿನಿಮಾ ಇದೆಂಬುದು ತಿಳಿಯುತ್ತಿದೆ. ಪೂರ್ತಿ ಟ್ರೈಲರ್ ರಕ್ತದಲ್ಲಿ ಅದ್ದಿ ತೆಗೆದಂತಿದ್ದು, ವಿಜಯ್ ರಾಜ್ಕುಮಾರ್ ಬಹಳ ಭಿನ್ನವಾಗಿ ಈ ಟ್ರೈಲರ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಇಂದು (ಆಗಸ್ಟ್ 18) ಬೆಂಗಳೂರಿನಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ನಟ ಸುದೀಪ್ ಅವರು ‘ಪೆಪೆ’ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ. ಬಹಳ ವರ್ಷಗಳಿಂದಲೂ ತೆಗೆದ ಸಿನಿಮಾ ಇದಾಗಿದ್ದು, ಹಲವು ಸಮಸ್ಯೆಗಳನ್ನು ಎದುರಿಸಿದ ಬಳಿಕ ಈಗ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ. ಟ್ರೈಲರ್ ಬಿಡುಗಡೆ ಜೊತೆಗೆ ಸಿನಿಮಾದ ಬಿಡುಗಡೆ ದಿನಾಂಕವನ್ನು ಸಹ ಘೋಷಣೆ ಮಾಡಲಾಗಿದೆ. ಆಗಸ್ಟ್ 30 ರಂದು ‘ಪೆಪೆ’ ಸಿನಿಮಾ ಬಿಡುಗಡೆ ಆಗಲಿದೆ.
ಇದನ್ನೂ ಓದಿ:Vinay Rajkumar: ವಿನಯ್ ರಾಜ್ಕುಮಾರ್ ನಟನೆಯ ಪೆಪೆ ಸಿನಿಮಾಕ್ಕೆ ‘ಎ’ ಸರ್ಟಿಫಿಕೇಶನ್
ಸಿನಿಮಾದಲ್ಲಿ ನಾಯಕಿ ಇರುವ ಸುಳಿವು ಟ್ರೈಲರ್ನಲ್ಲಿ ಕಾಣುವುದಿಲ್ಲ. ಮೇದಿನ ಕೆಳಮನೆ ಒಂದೆರಡು ದೃಶ್ಯಗಳಲ್ಲಿ ಕಾಣಿಸಿಕೊಳ್ಳುತ್ತಾರೆ, ಆದರೆ ಅವರದ್ದು ನಾಯಕಿ ಪಾತ್ರ ಎಂದೆನಿಸುವುದಿಲ್ಲ. ಟ್ರೈಲರ್ನಲ್ಲಿ ಮಿಂಚುವುದು ಸ್ವತಃ ವಿನಯ್ ರಾಜ್ಕುಮಾರ್ ಮತ್ತು ಮಯೂರ್ ಪಟೇಲ್. ಇವರ ಹೊರತಾಗಿ ಕ್ಯಾಮೆರಾಮೆನ್ ಕೆಲಸ ಗಮನ ಸೆಳೆಯುತ್ತದೆ. ಕೆಲವು ಸುಂದರವಾದ ಲಾಂಗ್ ಶಾಟ್ಗಳು ಟ್ರೈಲರ್ನಲ್ಲಿ ಕಾಣುತ್ತವೆ. ರಕ್ತವನ್ನಂತೂ ನೀರಿನಂತೆ ಹರಿಸಲಾಗಿದೆ. ಅದರ ದೃಶ್ಯಗಳನ್ನೂ ಸಹ ಕಲಾತ್ಮಕವಾಗಿ ಕಟ್ಟಿಕೊಡುವ ಪ್ರಯತ್ನ ಮಾಡಿರುವುದು ಟ್ರೈಲರ್ನಿಂದ ತಿಳಿಯುತ್ತಿದೆ.
ವಿನಯ್ ರಾಜ್ಕುಮಾರ್ ನಟಿಸಿರುವ ಈ ಸಿನಿಮಾವನ್ನು ಶ್ರೀಲೇಶ್ ಎಸ್ ನಾಯರ್ ನಿರ್ದೇಶನ ಮಾಡಿದ್ದಾರೆ. ಕತೆ-ಚಿತ್ರಕತೆಯೂ ಅವರದ್ದೆ. ಸಿನಿಮಾವನ್ನು ಉದಯ್ ಸಿನಿ ಬ್ಯಾನರ್ ಮೂಲಕ ನಿರ್ಮಾಣ ಮಾಡಲಾಗುತ್ತಿದ್ದು, ಬಂಡಳವಾಳವನ್ನು ಉದಯ್ ಶಂಕರ್ ಮತ್ತು ಶ್ರೀರಾಮ್ ಕೋಲಾರ ಹಾಕಿದ್ದಾರೆ. ಸಿನಿಮಾಕ್ಕೆ ಸಂಗೀತ ನೀಡಿರುವುದು ಪೂರ್ಣಚಂದ್ರ ತೇಜಸ್ವಿ, ಕ್ಯಾಮೆರಾ ಕೆಲಸ ಮಾಡಿರುವುದು ಅಭಿಷೇಕ್ ಕಾಸರಗೋಡು, ಆಕ್ಷನ್ ದೃಶ್ಯಗಳನ್ನು ನಿರ್ದೇಶನ ಮಾಡಿರುವುದು ರವಿವರ್ಮ, ಚೇತನ್ ಡಿಸೋಝಾ, ಡಿಫರೆಂಟ್ ಡ್ಯಾನಿ ಮತ್ತು ನರಸಿಂಹ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ