ಏಷ್ಯಾ , ಇಂಟರ್‌ ನ್ಯಾಷನಲ್‌ ದಾಖಲೆಗಳ ಪುಸ್ತಕ ಸೇರಿದ ಡಾ.ವಿಷ್ಣುವರ್ಧನ್‌ ಕಟೌಟ್ ಜಾತ್ರೆ

|

Updated on: Jun 01, 2023 | 10:45 PM

Vishnuvardhan: ಅಗಲಿ 13 ವರ್ಷಗಳಾದರೂ ವಿಷ್ಣುವರ್ಧನ್ ಹೆಸರು ಹಸಿರಾಗಿರುವಂತೆ ಅಭಿಮಾನಿಗಳು ನೋಡಿಕೊಂಡಿದ್ದಾರೆ. ಇದೀಗ ಅವರಿಲ್ಲದ ಹೊತ್ತಿನಲ್ಲಿ ಅವರ ಹೆಸರು ದಾಖಲೆ ಪುಸ್ತಕ ಸೇರುವಂತೆ ಅಭಿಮಾನಿಗಳು ಮಾಡಿದ್ದಾರೆ.

ಏಷ್ಯಾ , ಇಂಟರ್‌ ನ್ಯಾಷನಲ್‌ ದಾಖಲೆಗಳ ಪುಸ್ತಕ ಸೇರಿದ ಡಾ.ವಿಷ್ಣುವರ್ಧನ್‌ ಕಟೌಟ್ ಜಾತ್ರೆ
ವಿಷ್ಣುವರ್ಧನ್ ಕಟೌಟ್ ಜಾತ್ರೆ
Follow us on

ವಿಷ್ಣುವರ್ಧನ್ (Vishnuvardhan) ಅಗಲಿ 13 ವರ್ಷಗಳಾದರೂ ಅಭಿಮಾನಿಗಳು (Fans) ಇಂದಿಗೂ ಅವರನ್ನು ಸ್ಮರಿಸುತ್ತಲೇ ಇರುತ್ತಾರೆ. ಅವರ ಸಿನಿಮಾಗಳು, ಅವರ ವ್ಯಕ್ತಿತ್ವ ಅವರನ್ನು ಸದಾ ಜೀವಂತವಾಗಿಟ್ಟಿವೆ. ಇದರ ನಡುವೆ ಅವರ ಅಭಿಮಾನಿಗಳು ಸ್ವಶ್ರಮದಿಂದ ತಮ್ಮ ಮೆಚ್ಚಿನ ನಟನ ಹೆಸರು ಸದಾ ಹಸಿರಾಗಿರುವಂತೆ ವಿವಿಧ ಕಾರ್ಯಕ್ರಮಗಳನ್ನು ಮಾಡುತ್ತಲೇ ಬಂದಿದ್ದಾರೆ. ಅಂಥಹದ್ದೇ ಒಂದು ಕಾರ್ಯ, ಏಷ್ಯಾ ಬುಕ್‌ ಆಫ್‌ ರೆಕಾರ್ಡ್ (Asia Book Of Record) ಮತ್ತು ಇಂಟರ್‌ ನ್ಯಾಷನಲ್‌ ಬುಕ್‌ ಆಫ್‌ ರೆಕಾರ್ಡ್‌ ನಲ್ಲಿ (International Book Of Record) ದಾಖಲಾಗಿ ವಿಷ್ಣು ಅಭಿಮಾನಿಗಳಿಗೆ ಹೆಮ್ಮೆ ಮೂಡಿಸಿದೆ.

ಡಾ.ವಿಷ್ಣುವರ್ಧನ್‌ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ 50 ವರ್ಷಗಳಾದ ಹಿನ್ನಲೆಯಲ್ಲಿ ಅವರ 50 ಸೇನಾನಿಗಳು ಡಾ.ವಿಷ್ಣು ಸೇನಾ ಸಮಿತಿಯ ವೀರಕಪುತ್ರ ಶ್ರೀನಿವಾಸ ಅವರ ನೇತೃತ್ವದಲ್ಲಿ 2022 ರ ಸೆಪ್ಟೆಂಬರ್‌ 18 ರಂದು ಬೆಂಗಳೂರಿನ ಡಾ.ವಿಷ್ಣು ಪುಣ್ಯಭೂಮಿಯಲ್ಲಿ 51 ಬೃಹತ್‌ ಕಟೌಟ್‌ಗಳನ್ನು ಸ್ಥಾಪಿಸಿ “ಕಟೌಟ್‌ ಜಾತ್ರೆ” ಎಂಬ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಆ ಕಟೌಟ್‌ಗಳಿಗೆ ಬೃಹತ್‌ ಹಾರಗಳನ್ನು ಸಹ ಹಾಕಿಸಿದ್ದರು. ಇಡೀ ಕಾರ್ಯಕ್ರಮಕ್ಕೆ ಅಂದಾಜು 40 ಲಕ್ಷದಷ್ಟು ಹಣ ಖರ್ಚಾಗಿತ್ತು. ಪೊಲೀಸ್‌ ಇಲಾಖೆಯ ಪ್ರಕಾರ ಎರಡೂವರೆ ಲಕ್ಷ ಕನ್ನಡಿಗರು ಈ ಕಟೌಟ್‌ ಜಾತ್ರೆಯಲ್ಲಿ ಭಾಗವಹಿಸಿದ್ದರು.

ಅಂದೇ ಈ ಕಟೌಟ್‌ ಜಾತ್ರೆಯನ್ನು ಏಷ್ಯಾ ಬುಕ್‌ ಆಫ್‌ ರೆಕಾರ್ಡ್ ಮತ್ತು ಇಂಟರ್‌ ನ್ಯಾಷನಲ್‌ ಬುಕ್‌ ಆಫ್‌ ರೆಕಾರ್ಡ್‌ ನಲ್ಲಿ ದಾಖಲಿಸಲು ಮನವಿಯನ್ನು ಸಲ್ಲಿಸಲಾಗಿತ್ತು. ಆ ಸಂಸ್ಥೆಗಳು ನಮ್ಮ ದಾಖಲೆ ಸಂಬಂಧ ಅನೇಕ ಹಂತದ ಪರೀಕ್ಷೆಗಳನ್ನು ನಡೆಸಿದರಲ್ಲದೆ, ಖುದ್ದಾಗಿ ಸ್ಥಳ ಪರಿಶೀಲನೆಯನ್ನು ಸಹ ಮಾಡಿದ್ದರು. ಇದೀಗ ಆ ಎಲ್ಲಾ ಹಂತದ ಪರೀಕ್ಷೆಗಳೂ ಮುಗಿದಿದ್ದು, ಈ ಕಟೌಟ್ ಜಾತ್ರೆಯು ಏಷ್ಯಾ ಬುಕ್‌ ಆಫ್‌ ರೆಕಾರ್ಡ್‌ ಮತ್ತು ಇಂಟರ್‌ ನ್ಯಾಷನಲ್‌ ಬುಕ್‌ ಆಫ್‌ ರೆಕಾರ್ಡ್‌ ನಲ್ಲಿ ದಾಖಲೆಯಾಗಿ ದಾಖಲೆಯಾಗಿದೆ. ಆ ಎರಡೂ ದಾಖಲೆಗಳ ಸರ್ಟಿಫಿಕೇಟ್‌ ಮತ್ತು ಪದಕಗಳು ಸಂಬಂಧಿಸಿದವರಿಗೆ ತಲುಪಿವೆ.

ಇದನ್ನೂ ಓದಿ: ಅಂತ ಸಿನಿಮಾದಲ್ಲಿ ರಾಜ್​ಕುಮಾರ್, ವಿಷ್ಣುವರ್ಧನ್ ನಟಿಸಲಿಲ್ಲ ಏಕೆ?

ತೆರೆಮುಂದೆ ತೆರೆಹಿಂದೆ ನುಡಿದಂತೆ ನಡೆದ ಮೇರುನಟನ ಹೆಸರಲ್ಲಿ ಇಂತಹದ್ದೊಂದು ದಾಖಲೆಯನ್ನು ಅವರಿಲ್ಲದ ಹೊತ್ತಿನಲ್ಲಿ ಸ್ಥಾಪಿಸಲು ಸಾಧ್ಯವಾಗಿದ್ದಕ್ಕೆ ನಿಜಕ್ಕೂ ಹೆಮ್ಮೆಪಡುತ್ತೇವೆ. ಈ ದಾಖಲೆಯು ಡಾ.ವಿಷ್ಣುವರ್ಧನ್‌ ಅವರ ಅಗಲಿಕೆಯ 13 ವರ್ಷಗಳ ನಂತರವೂ ಅವರ ನೆನಪನ್ನು ಹಸಿರಾಗಿಡುವ ಕೆಲಸವನ್ನು ಅವರ ಅಭಿಮಾನಿಗಳು ನಿರಂತರವಾಗಿ ಮಾಡುತ್ತಿರುವುದರ ದ್ಯೋತಕವಾಗಿದೆ. ಈ ಕಟೌಟ್‌ ಜಾತ್ರೆಗೆ ಬೆನ್ನೆಲುಬಾಗಿ ನಿಂತ 50 ಸೇನಾನಿಗಳಿಗೆ, ಯೋಜನೆ ಕಾರ್ಯಸಾಧುಗೊಳಿಸಿದ ಆನಂದ್‌ ರಾಚ್‌, ಕಟೌಟ್‌ ವಿನ್ಯಾಸ ಮಾಡಿದ ರಾಜುವಿಷ್ಣು ಮತ್ತು ಈ ಸಂಸ್ಥೆಗಳ ಜೊತೆ ಸಂವಹನ ನಡೆಸಿ, ಸಾಧ್ಯವಾಗಿಸಿದ ಸಾಹಿತಿ ಜನಾರ್ಧನ್‌ ರಾವ್‌ ಅವರಿಗೆ ಧನ್ಯವಾದಗಳನ್ನು ಅರ್ಪಿಸಲು ಇಚ್ಚಿಸುತ್ತೇನೆ ಎಂದಿದ್ದಾರೆ ವಿಷ್ಣುಸೇನೆಯ ಮುಖಂಡ ವೀರಕಪುತ್ರ ಶ್ರೀನಿವಾಸ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ