Exclusive: ಚುನಾವಣಾ ನೀತಿ ಸಂಹಿತೆ, ಸಿನಿಮಾ ಹಾಗೂ ಒಟಿಟಿಳಿಗೆ ಕಡಿವಾಣ ಹೇಗೆ?

|

Updated on: Mar 31, 2023 | 7:40 PM

ಮತದಾರರ ಮೇಲೆ ಪ್ರಭಾವ ಬೀರಬಹುದಾದಂಥಹಾ ಸಿನಿಮಾಗಳು, ವೆಬ್ ಸರಣಿಗಳು ಒಟಿಟಿಯಲ್ಲಿ ಈಗಾಗಲೇ ಲಭ್ಯವಿವೆ, ಇವು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಎನಿಸಿಕೊಳ್ಳುತ್ತವೆಯೇ? ಇವುಗಳ ವಿರುದ್ಧ ಕ್ರಮ ಹೇಗೆ? ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಟಿವಿ9ಗೆ ವಿವರಿಸಿದ್ದಾರೆ.

Exclusive: ಚುನಾವಣಾ ನೀತಿ ಸಂಹಿತೆ, ಸಿನಿಮಾ ಹಾಗೂ ಒಟಿಟಿಳಿಗೆ ಕಡಿವಾಣ ಹೇಗೆ?
ಚುನಾವಣೆ ಮತ್ತು ಸಿನಿಮಾ
Follow us on

ಸಿನಿಮಾ (Movie), ಅತ್ಯಂತ ಪ್ರಭಾವಶಾಲಿ ಮಾಧ್ಯಮ. ಸ್ವಾತಂತ್ರ್ಯ ಹೋರಾಟದ ಸಂದರ್ಭದಿಂದಲೂ ಜನರ ಅಭಿಪ್ರಾಯ ತಿದ್ದಲು ಸಿನಿಮಾಗಳನ್ನು ಬಳಸಿಕೊಳ್ಳಲಾಗುತ್ತಿದೆ. ಆದರೆ ಇತ್ತೀಚೆಗೆ ಸಿನಿಮಾಗಳನ್ನು ರಾಜಕೀಯಕ್ಕೆ ಬಳಸುವ ಪ್ರಯೋಗ ತುಸು ಹೆಚ್ಚಾಗಿಯೇ ನಡೆಯುತ್ತಿದೆ. ರಾಜಕೀಯ ನಾಯಕರುಗಳ ವ್ಯಕ್ತಿತ್ವ ವೈಭವೀಕರಿಸುವ ಸಿನಿಮಾಗಳನ್ನು ತೆರೆಗೆ ತರಲಾಗಿದೆ. ವಿಪಕ್ಷ ನಾಯಕರನ್ನು ಗೇಲಿ ಮಾಡುವ ಸಿನಿಮಾ ಸಹ ಬಂದಿದೆ, ರಾಜಕೀಯವಾಗಿ, ಸಾಮಾಜಿಕವಾಗಿ ಚರ್ಚಾಸ್ಪದ ವಿಷಯಗಳನ್ನಿಟ್ಟುಕೊಂಡು ಏಕಾಭಿಪ್ರಾಯವುಳ್ಳ ಸಿನಿಮಾಗಳನ್ನು ನಿರ್ಮಿಸಲಾಗಿದೆ, ನಿರ್ಮಿಸಲಾಗುತ್ತಿದೆ. ಇವುಗಳ ಸಿನಿಮಾ ಹಾಗೂ ಒಟಿಟಿಗಳನ್ನು ಬಳಸಿ ಮತದಾರರನ್ನು ಪ್ರಭಾವಿಸುವ ಪ್ರಯತ್ನಗಳು ಇತ್ತೀಚೆಗೆ ಆರಂಭಗೊಂಡಿವೆ. ಇದೀಗ ಕರ್ನಾಟಕ ವಿಧಾನಸಭೆ ಚುನಾವಣೆ (Karnatakak Assembly Election 2023) ದಿನಾಂಕ ಘೋಷಣೆಯಾಗಿದ್ದು ನೀತಿ ಸಂಹಿತೆ (Code Of Conduct) ಜಾರಿಯಲ್ಲಿದೆ. ಸಿನಿಮಾ ಹಾಗೂ ಒಟಿಟಿಗಳ ಮೂಲಕ ಮತದಾರರನ್ನು ಪ್ರಭಾವಿಸುವ ಚಾಲಾಕಿ ಪ್ರಯತ್ನಗಳನ್ನು ಆಯೋಗ ಹೇಗೆ ನಿಯಂತ್ರಿಸಲಿದೆ, ಏನು ಕ್ರಮ ಕೈಗೊಳ್ಳಲಿದೆ?

ರಾಜ್ಯದಲ್ಲಿ ಚುನಾವಣೆ ಘೋಷಣೆಯಾದ ಮರುದಿನವೇ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಜೀವನ ಆಧರಿಸಿದ ಸಿನಿಮಾ ಘೋಷಣೆಯಾಗಿದೆ. ಇದು ಮಾತ್ರವೇ ಅಲ್ಲದೆ, ಮತದಾರನ್ನು ಪ್ರಭಾವಿಸಬಲ್ಲ ಕಂಟೆಂಟ್ ಒಳಗೊಂಡ ಸಿನಿಮಾಗಳು, ವೆಬ್ ಸರಣಿಗಳು ಈಗಾಗಲೇ ಒಟಿಟಿಯಲ್ಲಿವೆ. ಇಂಥಹಾ ಸರಕು ಟಿವಿಗಳಲ್ಲಿಯೂ ಪ್ರಸಾರವಾಗುವ ಸಾಧ್ಯತೆಯೂ ಇದೆ. ಹಾಗಿದ್ದರೆ ಇವುಗಳ ಮೇಲೆ ನಿಯಂತ್ರಣ ಹೇಗೆ? ಸಿನಿಮಾಗಳು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ನಿಯಮಗಳ ಅಡಿಯಲ್ಲಿ ಬರುತ್ತವೆಯೇ? ಈ ಎಲ್ಲ ಅನುಮಾನಗಳಿಗೆ ರಾಜ್ಯ ಚುನಾವಣಾ ಆಯೋಗದ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಉತ್ತರಿಸಿದ್ದಾರೆ.

ಟಿವಿ9 ಜೊತೆ ಮಾತನಾಡಿ, ಸಿದ್ದರಾಮಯ್ಯ ಅವರ ಜೀವನ ಆಧರಿಸಿದ ಸಿನಿಮಾ ಘೋಷಣೆ ಆಗಿರುವ ಕುರಿತು ಮೊದಲು ಪ್ರತಿಕ್ರಿಯಿಸಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ, ”ಸಿನಿಮಾ ಘೋಷಣೆ ಮಾಡಿರುವ ಕುರಿತು ಈಗಾಗಲೇ ರಾಜಕೀಯ ಪಕ್ಷವೊಂದು ದೂರು ನೀಡಿದೆ. ಅದು ಚುನಾವಣೆ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡುತ್ತದಾ ಎಂಬುದನ್ನು ಪರಿಶೀಲನೆ ಮಾಡುತ್ತೇವೆ. ಏಕೆಂದರೆ ಆ ಸಿನಿಮಾ ಬಂದಿಲ್ಲ ಆದರೆ ಬರುತ್ತದೆ ಎಂದು ಹೇಳಿದ್ದಾರೆ. ಹಾಗಾಗಿ ಅದು ನೀತಿಸಂಹಿತೆಯ ಉಲ್ಲಂಘನೆಯಾ ಎಂಬ ಬಗ್ಗೆ ಪರಿಶೀಲನೆ ಆಗಬೇಕಿದೆ. ದೂರನ್ನು ಸ್ವೀಕರಿಸಲಾಗಿದ್ದು, ಸಂಬಂಧಿಸಿದವರಿಂದ ಉತ್ತರ ಕೇಳಲಾಗುತ್ತದೆ” ಎಂದರು.

”ನಾವು ಜಾಹೀರಾತುಗಳನ್ನು ಎರಡು ಬಗೆಯಾಗಿಯಷ್ಟೆ ಸದ್ಯಕ್ಕೆ ನೋಡುತ್ತಿದ್ದೇವೆ. ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಪ್ರಸಾರವಾಗುವ ಜಾಹೀರಾತುಗಳಿಗೆ ಆಯೋಗದಿಂದ ಪೂರ್ವಾನುಮತಿ ಪಡೆಯಬೇಕು. ಎಲೆಕ್ಟ್ರಾನಿಕ್ ಮಾಧ್ಯಮಗಳನ್ನು ಹೊರತುಪಡಿಸಿ ಬೇರೆ ಮಾದರಿಯಲ್ಲಿ ಮಾಡಲಾಗುವ ಜಾಹೀರಾತುಗಳ ಖರ್ಚನ್ನು ಸಂಬಂಧಪಟ್ಟ ಅಭ್ಯರ್ಥಿಯ ಅಥವಾ ಪಕ್ಷದ ಖಾತೆಗೆ ಸೇರಿಸುತ್ತೇವೆ. ಒಂದೊಮ್ಮೆ ಆ ಪ್ರಚಾರ ವಸ್ತುಗಳಲ್ಲಿ ಪ್ರಚೋದನಕಾರಿ ಅಂಶಗಳಿದ್ದರೆ ಅದರ ವಿರುದ್ಧ ಕ್ರಮ ಜರುಗಿಸುತ್ತೇವೆ ಎಂದರು ಮನೋಜ್ ಕುಮಾರ್ ಮೀನಾ.

ಇದನ್ನೂ ಓದಿ: ಮಾಜಿ ಸಿಎಂ ಸಿದ್ದರಾಮಯ್ಯ ಜೀವಾನಾಧಾರಿತ ಚಿತ್ರ: ಸಿನಿಮಾದ ಮೊದಲ ಪೋಸ್ಟರ್ ರಿಲೀಸ್​

ಒಟಿಟಿಯಲ್ಲಿ ಲಭ್ಯವಿರುವ ರಾಜಕೀಯ ನಾಯಕರುಗಳ ಕುರಿತ ಸಿನಿಮಾಗಳು ಹಾಗೂ ಟಿವಿಗಳಲ್ಲ ಪ್ರಸಾರವಾಗುವ ಸಿನಿಮಾ, ಧಾರಾವಾಹಿಗಳು ಸಹ ಮತದಾರರ ಮೇಲೆ ಪ್ರಭಾವ ಬೀರುವ ಸಾಧ್ಯತೆಯನ್ನು ಅಲ್ಲಗಳೆಯದ ಆಯುಕ್ತ ಮನೋಜ್ ಕುಮಾರ್, ”ಇದು ಬಹಳ ವಿಶಾಲ ವ್ಯಾಪ್ತಿಯನ್ನು ಹೊಂದಿರುವ ವಿಷಯ. ಈಗಾಗಲೇ ಹೇಳಿದಂತೆ ಜಾಹೀರಾತುಗಳನ್ನು ಪ್ರಸ್ತುತ ನಾವು ಎರಡು ವಿಭಾಗಗಳಾಗಿ ಮಾತ್ರವೇ ನೋಡುತ್ತಿದ್ದೇವೆ. ಆದರೆ ಒಟಿಟಿ ಅಥವಾ ಟಿವಿಗಳಲ್ಲಿ ಪ್ರಸಾರವಾಗುತ್ತಿರುವ ಕಂಟೆಂಟ್ ಕರ್ನಾಟಕದ ಚುನಾವಣೆಯ ಮೇಲೆ ಪ್ರಭಾವ ಬೀರುವಂತಿದ್ದರೆ, ಅದು ನಮ್ಮ ಗಮನಕ್ಕೆ ಬಂದರೆ ಅಥವಾ ದೂರುದಾರರಿಂದ ತಿಳಿದು ಬಂದರೆ ಅಂಥಹುಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದರು.

ಮುಂದುವರೆದು, ”ಜಾಹೀರಾತು ಅಥವಾ ಸಿನಿಮಾ, ಒಟಿಟಿಗಳ ವ್ಯಾಪ್ತಿ ಬಹಳ ದೊಡ್ಡದಾಗಿರುವ ಕಾರಣ, ಪ್ರತಿಯೊಂದು ಬೆಳವಣಿಗೆಗೂ ನಾವು ನಿರ್ದಿಷ್ಟ ಕಾನೂನು, ನಿಯಮಗಳನ್ನು ಮಾಡಲಾಗುವುದಿಲ್ಲ. ಆದರೂ ಈಗಾಗಲೇ ಒಟ್ಟಾರೆ ಮೀಡಿಯಾ ಬಗ್ಗೆ ವಿವರವಾದ ಗೈಡ್​ಲೈನ್ ಅನ್ನು ನಾವು ಹೊಂದಿದ್ದೇವೆ. ಹಾಗಿದ್ದರೂ ಸಹ ಕೆಲವು ಗ್ರೇ ಏರಿಯಾಗಳು ಉಳಿದುಕೊಂಡಿರುತ್ತವೆ. ಆದರೆ ದೂರುಗಳನ್ನು ಆಧರಿಸಿ, ನಿಜವಾಗಿಯೂ ಆ ನಿರ್ದಿಷ್ಟ ಘಟನೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಆಗಿದೆಯೇ ಎಂಬುದನ್ನು ನಾವು ಪರಿಶೀಲಿಸಿ, ವಿವೇಚನೆ ಹಾಗೂ ಕಾನೂನು ಆಧಾರದ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಸ್ವಚ್ಛ, ಸ್ವತಂತ್ರ್ಯ ಚುನಾವಣೆ ನಮ್ಮ ಗುರಿ ಎಂದರು ಚುನಾವಣಾ ಆಯುಕ್ತ ಮನೋಕ್ ಕುಮಾರ್ ಮೀನಾ.

ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಈಗಾಗಲೇ ಜಾರಿಯಲ್ಲಿದೆ. ಏಪ್ರಿಲ್ 20 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಮೇ 10 ಕ್ಕೆ ಮತದಾನ, ಮೇ 13 ಕ್ಕೆ ಫಲಿತಾಂಶ ಹೊರಬೀಳಲಿದೆ. ಮೇ 15 ಕ್ಕೆ ಚುನಾವಣಾ ಪ್ರಕ್ರಿಯೆ ಕೊನೆಗೊಳ್ಳಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ