ಹಣ ಕೊಟ್ಟು ವಿಮರ್ಶೆ ಖರೀದಿಸಿದ್ದಾರೆ ಎಂದವಗೆ ಖಡಕ್ ಉತ್ತರ ನೀಡಿದ ‘ಹೊಯ್ಸಳ’ ನಿರ್ಮಾಪಕ
ಹಣ ಚೆಲ್ಲಿ ಹೊಯ್ಸಳ ಸಿನಿಮಾದ ಪರ ವಿಮರ್ಶೆ ಕೊಡಿಸಲಾಗಿದೆ ಎಂದವರಿಗೆ ಖಡಕ್ ಪ್ರತ್ಯುತ್ತರ ನೀಡಿದ್ದಾರೆ ಸಿನಿಮಾದ ನಿರ್ಮಾಪಕ ಕಾರ್ತಿಕ್ ಗೌಡ.
ಡಾಲಿ ಧನಂಜಯ್ (Daali Dhananjay) ನಟನೆಯ ಹೊಯ್ಸಳ (Hoysala) ಸಿನಿಮಾ ನಿನ್ನೆಯಷ್ಟೆ (ಮಾರ್ಚ್ 31) ಬಿಡುಗಡೆ ಆಗಿದ್ದು, ಮೊದಲ ದಿನ ಒಳ್ಳೆಯ ಪ್ರತಿಕ್ರಿಯೆಯನ್ನು ಪ್ರೇಕ್ಷಕರಿಂದ, ವಿಮರ್ಶಕರಿಂದ ಪಡೆದುಕೊಂಡಿದೆ. ಖಡಕ್ ಪೊಲೀಸ್ ಅಧಿಕಾರಿಯ ಕತೆಯುಳ್ಳ ಈ ಸಿನಿಮಾವನ್ನು ಹೊಂಬಾಳೆಯ ಸಹೋದರ ಸಂಸ್ಥೆಯಾದ ಕೆಆರ್ಜಿ ಸ್ಟುಡಿಯೋಸ್ ನಿರ್ಮಿಸಿದೆ. ಕಾರ್ತಿಕ್ ಗೌಡ ಹಾಗೂ ಯೋಗಿ ಗೌಡ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಸಿನಿಮಾದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿದೆ, ಆದರೆ ಬೆರಳಿಣೆಯಷ್ಟು ಮಂದಿ ಸಿನಿಮಾದ ಬಗ್ಗೆ ನಕಾರಾತ್ಮಕವಾಗಿಯೂ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸಿನಿಮಾ ಫ್ಲಾಪ್ ಎಂದು ಸಾಮಾಜಿಕ ಜಾಲತಾಣದಲ್ಲಿ ಕೆಲವರು ಗುಲ್ಲು ಎಬ್ಬಿಸಿದ್ದು, ಅಂಥಹವರಿಗೆ ನಿರ್ಮಾಪಕ ಕಾರ್ತಿಕ್ ಗೌಡ (Karthik Gowda) ಖಡಕ್ ಉತ್ತರ ಕೊಟ್ಟಿದ್ದಾರೆ.
ಮಸಾಲೆ ದೋಸೆ ಎಂಬ ಹೆಸರುಳ್ಳ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಿರುವ ವ್ಯಕ್ತಿಯೊಬ್ಬರು, ಟ್ವಿಟ್ಟರ್ನಲ್ಲಿ ಹೊಯ್ಸಳ ಸಿನಿಮಾ ಸೂಪರ್, ಬ್ಲಾಕ್ ಬಸ್ಟರ್, ಚಿಂದಿ ಚಿತ್ರಾನ್ನ ಎಂದು ಹೊಗಳುತ್ತಿದ್ದಾರೆ. ಆದರೆ ಬಾಕ್ಸ್ ಆಫೀಸ್ನಲ್ಲಿ ಸಿನಿಮಾ ಸೋತಿದೆ. ನೀವು ಜನಗರ ಅಭಿಪ್ರಾಯವನ್ನು ಖರೀದಿ ಮಾಡಲಾರಿರಿ” ಎಂದು ಪೋಸ್ಟ್ ಹಂಚಿಕೊಂಡಿದ್ದರು, ಹೊಯ್ಸಳ ಸಿನಿಮಾದಂತೆ ಬಿಡುಗಡೆ ಆದ ದಸರಾ ಸಿನಿಮಾದ ನಾಯಕಿ ಅಳುತ್ತಿರುವ ಪೋಸ್ಟ್ ಅನ್ನು ಅನ್ನು ಜೊತೆಗೆ ಹಂಚಿಕೊಂಡಿದ್ದರು.
ಇದನ್ನೂ ಓದಿ: ‘ಹೊಯ್ಸಳ’ ನಿರ್ಮಾಪಕರಿಂದ ಧನಂಜಯ್ಗೆ ಕಾರು ಗಿಫ್ಟ್; ಈ ಕಾರಿನ ಬೆಲೆ 1 ಕೋಟಿ ರೂಪಾಯಿ
ಮಸಾಲೆ ದೋಸೆ ಖಾತೆಯಿಂದ ಮಾಡಲಾದ ಟ್ವೀಟ್ಗೆ ಸಿಟ್ಟಿನಿಂದಲೇ ಪ್ರತಿಕ್ರಿಯೆ ನೀಡಿರುವ ಕಾರ್ತಿಕ್ ಗೌಡ, ನಾವು ಯಾರೂ ಸಹ ವಿಮರ್ಶಕರನ್ನು ಖರೀದಿಸಿಲ್ಲ, ವಿಮರ್ಶೆಗಳ ಮೇಲೆ ಪ್ರಭಾವ ಸಹ ಬೀರಿಲ್ಲ. ಜನಪ್ರಿಯತೆ ಗಳಿಸಲೋ ಅಥವಾ ನಿನ್ನ ಖಾಸಗಿ ಉದ್ದೇಶದಿಂದಲೋ ಏನೋ, ನೀನು, ನಮ್ಮ ಸಿನಿಮಾದ ಬಗ್ಗೆ ಕೆಲ ದಿನಗಳಿಂದಲೂ ಋಣಾತ್ಮಕವಾಗಿಯೇ ಮಾತನಾಡುತ್ತಿದ್ದೀಯ. ನಿಮಗೆ ಸಿನಿಮಾ ಮಾಡಲು ಬರದಿದ್ದರೆ, ಸಿನಿಮಾವನ್ನು ಮುರಿಯುವ ಪ್ರಯತ್ನವನ್ನೂ ಮಾಡಬೇಡಿ. ಹೊಯ್ಸಳ ಸಿನಿಮಾದ ಬಗ್ಗೆ ಪ್ರಕಟವಾಗಿರುವ ಎಲ್ಲ ವಿಮರ್ಶೆಗಳು ನೈಜ ವಿಮರ್ಶೆಗಳು. ಮತ್ತು ನಮ್ಮ ಸಿನಿಮಾ ಸಹ ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಸಿನಿಮಾದ ಕಲೆಕ್ಷನ್ ಏರುಗತಿಯಲ್ಲಿದೆ ಎಂದಿದ್ದಾರೆ.
ಹೊಯ್ಸಳ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡುತ್ತಿರುವ ಕಾರಣ ನಿರ್ಮಾಪಕ ಕಾರ್ತಿಕ್ ಗೌಡ, ನಟ ಡಾಲಿ ಧನಂಜಯ್ಗೆ ಒಂದು ಕೋಟಿ ಬೆಲೆಯ ಟೊಯೊಟಾ ವಿಲ್ಫೈರ್ ಹೆಸರಿನ ಐಶಾರಾಮಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಆ ಚಿತ್ರವನ್ನು ನಟ ಡಾಲಿ ಧನಂಜಯ್ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
No one bought or influenced reviews. You have been negative on the film from a few days to garner attention or having a personal agenda. If you can’t make a film, do not break it. Every review is a genuine review and the collections are on the upward trend 🙂 https://t.co/Rmq8H15tb4
— Karthik Gowda (@Karthik1423) March 31, 2023
ಹೊಯ್ಸಳ ಸಿನಿಮಾವು ಡಾಲಿ ಧನಂಜಯ್ರ 25ನೇ ಸಿನಿಮಾ ಆಗಿದ್ದು, ಖಡಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಡಾಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಅಮೃತಾ ಐಯ್ಯಂಗಾರ್ ನಾಯಕಿಯಾಗಿ ನಟಿಸಿದ್ದಾರೆ. ವಿಜಯ್ ನಿರ್ದೇಶನದ ಈ ಸಿನಿಮಾದಲ್ಲಿ ಗುಲ್ಟು ನವೀನ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಅಚ್ಯುತ್ ಕುಮಾರ್, ರಾಜೇಶ್ ನಟರಂಗ ಕೆಜಿಎಫ್ ಖ್ಯಾತಿಯ ವಿಲನ್ ಆಂಡ್ರ್ಯೂ ಸಹ ನಟಿಸಿದ್ದಾರೆ. ಸಿನಿಮಾಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:22 pm, Fri, 31 March 23