ಸುಮಲತಾ ಪರ ಚುನಾವಣೆ ಪ್ರಚಾರ ಮಾಡಲಿದ್ದಾರೆಯೇ ಯಶ್-ದರ್ಶನ್?

|

Updated on: Feb 25, 2024 | 11:40 PM

Yash-Darshan: ಮತ್ತೊಮ್ಮೆ ಲೋಕಸಭೆ ಚುನಾವಣೆ ಬಂದಿದೆ. ಕಳೆದ ಬಾರಿ ಸುಮಲತಾ ಪರವಾಗಿ ಯಶ್ ಹಾಗೂ ದರ್ಶನ್ ಪ್ರಚಾರ ಮಾಡಿದ್ದರು. ಈ ಬಾರಿಯೂ ಯಶ್ ಹಾಗೂ ದರ್ಶನ್, ಸುಮಲತಾರ ಬೆಂಬಲಕ್ಕೆ ನಿಲ್ಲುತ್ತಾರೆಯೇ? ಅವರೇ ಉತ್ತರ ನೀಡಿದ್ದಾರೆ.

ಸುಮಲತಾ ಪರ ಚುನಾವಣೆ ಪ್ರಚಾರ ಮಾಡಲಿದ್ದಾರೆಯೇ ಯಶ್-ದರ್ಶನ್?
Follow us on

ಮತ್ತೊಮ್ಮೆ ಲೋಕಸಭೆ ಚುನಾವಣೆ ಬಂದಿದೆ. ಕರ್ನಾಟಕದಲ್ಲಿ ರಾಜ್ಯದ ಜನರ ಚಿತ್ತ ಮತ್ತೊಮ್ಮೆ ಮಂಡ್ಯದತ್ತ ಹರಿದಿದೆ. ಕಳೆದ ಬಾರಿ ನಿಖಿಲ್ ಕುಮಾರಸ್ವಾಮಿ ಹಾಗೂ ಸುಮಲತಾ (Sumalatha) ನಡುವೆ ಭರ್ಜರಿ ಪೈಪೋಟಿ ನಡೆದು ಸ್ವತಂತ್ರ್ಯ ಅಭ್ಯರ್ಥಿಯಾಗಿದ್ದ ಸುಮಲತಾ ಜಯಭೇರಿ ಭಾರಿಸಿದ್ದರು. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿದ್ದ ನಿಖಿಲ್ ಕುಮಾರಸ್ವಾಮಿ ಸೋತಿದ್ದರು. ಈ ಬಾರಿ ಚಿತ್ರಣ ಉಲ್ಟಾ ಆಗಿದೆ. ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಮಂಡ್ಯದಿಂದ ಕಣಕ್ಕೆ ಇಳಿಯುವ ಸಾಧ್ಯತೆ ಇದೆ. ಆದರೆ ತಮ್ಮ ಮಂಡ್ಯ ಕ್ಷೇತ್ರವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಸುಮಲತಾ ಇದ್ದಾರೆ. ಇಂದು (ಫೆಬ್ರವರಿ 25) ಸುಮಲತಾ ಅವರು ಮಂಡ್ಯ ರಾಜಕೀಯ ಮುಖಂಡರ ಸಭೆ ನಡೆಸಿದ್ದು ಸಭೆಯ ಬಳಿಕ, ಮಾಧ್ಯಮಗಳೊಟ್ಟಿಗೆ ಮಾತನಾಡುತ್ತಾ, ಕಳೆದ ಬಾರಿಯಂತೆ ಈ ಚುನಾವಣೆಯಲ್ಲಿಯೂ ದರ್ಶನ್ ಹಾಗೂ ಯಶ್ ತಮ್ಮ ಪರವಾಗಿ ಪ್ರಚಾರ ಮಾಡುತ್ತಾರೆಯೇ ಇಲ್ಲವೇ ಎಂಬ ಬಗ್ಗೆ ಮಾತನಾಡಿದರು.

ದರ್ಶನ್​ಗೆ ಪಕ್ಷದ ಹಂಗಿಲ್ಲ, ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ, ರೈತ ಸಂಘದ ದರ್ಶನ್ ಪುಟ್ಟಣ್ಣಯ್ಯ ಹೀಗೆ ವಿವಿಧ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದ್ದಾರೆ. ಇಂಥಹಾ ಪಕ್ಷ ಎಂಬ ಹಂಗು ಅವರಿಗೆ ಇಲ್ಲ. ಈ ಬಾರಿಯೂ ಸಹ ಅವರು ನನ್ನ ಪರವಾಗಿ ಪ್ರಚಾರಕ್ಕೆ ಬರಲಿದ್ದಾರೆ. ಪಕ್ಷ ಯಾವುದಾದರೂ ಸರಿಯೇ ನೀವು ಮುಖ್ಯ ನಿಮ್ಮ ಪರವಾಗಿ ಪ್ರಚಾರಕ್ಕೆ ಬರುತ್ತೀನಿ ಎಂದು ಸ್ಪಷ್ಟವಾಗಿ ದರ್ಶನ್ ಹೇಳಿದ್ದಾರೆ ಎಂದು ಸುಮಲತಾ ಹೇಳಿದ್ದಾರೆ.

ಇದನ್ನೂ ಓದಿ:ಬೆಂಬಲಿಗರ ಸಭೆ ಅಂತ್ಯ: ಮಂಡ್ಯದಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಸುಮಲತಾ ಅಂಬರೀಶ್ ಹೇಳಿದ್ದಿಷ್ಟು

ಯಶ್​ ಸಹ ಪ್ರಚಾರಕ್ಕೆ ಬರಲಿದ್ದಾರೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಸುಮಲತಾ, ‘ಯಶ್​ ಬಳಿ ಈ ಕುರಿತು ನಾನಿನ್ನೂ ಮಾತನಾಡಿಲ್ಲ. ಯಶ್ ಪ್ರಸ್ತುತ ತಮ್ಮ ಹೊಸ ಸಿನಿಮಾದ ಚಿತ್ರೀಕರಣದ ಸಂಬಂಧ ಲಂಡನ್​ನಲ್ಲಿದ್ದಾರೆ ಹಾಗಾಗಿ ಅವರೊಟ್ಟಿಗೆ ಈ ಬಗ್ಗೆ ಚರ್ಚಿಸಲು ಸಾಧ್ಯವಾಗಿಲ್ಲ. ಅವರು ಬಂದ ಕೂಡಲೇ ಈ ಬಗ್ಗೆ ಮಾತನಾಡುತ್ತೇನೆ’ ಎಂದಿದ್ದಾರೆ. ಕಳೆದ ಬಾರಿ ದರ್ಶನ್ ಹಾಗೂ ಯಶ್ ಇಬ್ಬರೂ ಸಹ ಸುಮಲತಾ ಅವರಿಗೆ ಬೆಂಬಲ ನೀಡಿ ಅವರ ಪರವಾಗಿ ಸತತ ಪ್ರಚಾರ ಮಾಡಿ ಗೆಲ್ಲಿಸಿಕೊಂಡು ಬಂದಿದ್ದರು. ಆದರೆ ಆಗ ಸುಮಲತಾ ಅವರಿಗೆ ಪಕ್ಷದ ಹಂಗಿರಲಿಲ್ಲ. ಆದರೆ ಈಗ ಸುಮಲತಾ ಅವರು ಬಿಜೆಪಿ ಪಕ್ಷದ ಸಕ್ರಿಯ ಸದಸ್ಯೆ. ಹಾಗಾಗಿ ಯಶ್ ಅವರು ಕಳೆದ ಬಾರಿಯಂತೆ ಪ್ರಚಾರಕ್ಕೆ ಬರುತ್ತಾರೆಯೇ ಇಲ್ಲವೇ ಎಂಬ ಬಗ್ಗೆ ಅನುಮಾನವಿದೆ.

ಕೆಲ ದಿನಗಳ ಹಿಂದೆ ತಮ್ಮ ಆಪ್ತ ಪಾನಿಪುರಿ ಕಿಟ್ಟಿಯ ಹೊಸ ಜಿಮ್ ಉದ್ಘಾಟನೆಗೆ ಆಗಮಿಸಿದ್ದಾಗಲೂ ಸಹ ಯಶ್​ಗೆ ಈ ಪ್ರಶ್ನೆ ಎದುರಾಗಿತ್ತು. ಆದರೆ ಯಶ್ ಯಾವುದೇ ಉತ್ತರ ನೀಡದೆ ತೆರಳಿದ್ದರು. ಒಂದೊಮ್ಮೆ ಪ್ರಚಾರಕ್ಕೆ ಹೋಗುವವರೇ ಆಗಿದ್ದಿದ್ದರೆ ಹಿಂಜರಿಯದೇ ಹೌದೆನ್ನುತ್ತಿದ್ದರು, ಈ ಬಾರಿ ಪ್ರಚಾರಕ್ಕೆ ಹೋಗದೇ ಇರಲು ಯಶ್ ನಿರ್ಧರಿಸಿದ್ದಾರೆ ಎನ್ನಲಾಗುತ್ತಿದ್ದು, ಅದೇ ಕಾರಣಕ್ಕೆ ಈ ಬಗ್ಗೆ ಹೆಚ್ಚಿಗೇನೂ ಬಹಿರಂಗವಾಗಿ ಯಶ್ ಮಾತನಾಡುತ್ತಿಲ್ಲ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ