ಕೇವಲ ಒಂದು ರೂಪಾಯಿಗೆ ಕನ್ನಡ ಸಿನಿಮಾ: ಯಾವುದು? ಯಾವಾಗ?

Yada Yada Hi: ವಸಿಷ್ಠ ಸಿಂಹ, ಹರಿಪ್ರಿಯಾ ಹಾಗೂ ದಿಗಂತ್ ನಟಿಸಿರುವ ಯದಾ ಯದಾ ಹಿ ಸಿನಿಮಾವನ್ನು ಕೇವಲ ಒಂದು ರುಪಾಯಿಗೆ ನೋಡಬಹುದು. ಎಲ್ಲಿ? ಯಾವಾಗ? ಮಾಹಿತಿ ಇಲ್ಲಿದೆ.

ಕೇವಲ ಒಂದು ರೂಪಾಯಿಗೆ ಕನ್ನಡ ಸಿನಿಮಾ: ಯಾವುದು? ಯಾವಾಗ?
ಯದಾ ಯದಾ ಹಿ

Updated on: May 29, 2023 | 7:56 PM

ಚಿತ್ರಮಂದಿರಗಳತ್ತ (Theater) ಪ್ರೇಕ್ಷಕರನ್ನು ಕರೆತರಲು ಚಿತ್ರತಂಡಗಳು ನಾನಾ ಪ್ರಯತ್ನಗಳನ್ನು ಮಾಡುತ್ತಿವೆ. ಸೆಲೆಬ್ರಿಟಿಗಳನ್ನು ಶೋಗೆ ಕರೆಸುವುದು, ಸಿನಿಮಾ ನೋಡಿದವರಿಗೆ ಉಡುಗೊರೆ ನೀಡುವುದು, ಅತ್ಯಂತ ಕಡಿಮೆ ಬೆಲೆಗೆ ಸಿನಿಮಾ ತೋರಿಸುವುದು ಹೀಗೆ ಒಟ್ಟಿನಲ್ಲಿ ಪ್ರೇಕ್ಷಕರನ್ನು ಸೆಳೆಯಲು ನಾನಾ ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ. ಕೆಲವು ದಿನಗಳ ಹಿಂದಷ್ಟೆ ಕೆಲವೆಡೆ ದಿ ಕೇರಳ ಸ್ಟೋರಿ (The Kerala Story) ಸಿನಿಮಾದ ಟಿಕೆಟ್ ಬೆಲೆಯನ್ನು ರುಪಾಯಿಗೆ ನಿಗದಿಪಡಿಸಲಾಗಿತ್ತು. ಕನ್ನಡದ ಹೊಸಬರ ‘ಡೇರ್ ಡೆವಿಲ್ ಮುಸ್ತಾಫಾ’ ಸಿನಿಮಾ ನೋಡಿದವರಿಗೆ ನೂರು ರುಪಾಯಿ ಕ್ಯಾಶ್ ಬ್ಯಾಕ್ ಘೋಷಿಸಲಾಗಿತ್ತು. ಇದೀಗ ಕನ್ನಡದ ಹೊಸ ಸಿನಿಮಾ ಒಂದನ್ನು ಕೇವಲ ಒಂದು ರುಪಾಯಿ ಟಿಕೆಟ್ ಬೆಲೆಗೆ ಪ್ರದರ್ಶಿಸಲಾಗುತ್ತಿದೆ. ಆದರೆ ಸೀಮಿತ ಅವಧಿಗೆ ಮಾತ್ರ.

ಮರ್ಡರ್ ಮಿಸ್ಟ್ರಿ ಸುತ್ತ ನಡೆಯುವ ಕುತೂಹಲಕಾರಿ ಕಥಾಹಂದರ ಹೊಂದಿರುವ ಚಿತ್ರ ‘ಯದಾ ಯದಾ ಹಿ’ ಇದೇ ಶುಕ್ರವಾರ ರಾಜ್ಯದಾದ್ಯಂತ ಅದ್ದೂರಿಯಾಗಿ ತೆರೆಕಾಣಲಿದೆ. ಯುವ ತಾರಾಜೋಡಿ ವಸಿಷ್ಠಸಿಂಹ ಹಾಗೂ ಹರಿಪ್ರಿಯ ತೆರೆಮೇಲೂ ಒಟ್ಟಾಗಿ ಕಾಣಿಸಿಕೊಂಡಿರುವ ಚಿತ್ರ ಇದಾಗಿದ್ದು, ಒಂದಷ್ಟು ಕುತೂಹಲಗಳನ್ನು ಹುಟ್ಟುಹಾಕಿದೆ. ಅಲ್ಕದೆ ಹರಿಪ್ರಿಯಾ ನೆಗೆಟಿವ್ ಶೇಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಲ್ಲದೆ ಇಡೀ ಚಿತ್ರಕಥೆ ನಿಂತಿರುವುದೆ ಅವರ ಪಾತ್ರದ ಮೇಲೆ. ಇಷ್ಟೆಲ್ಲ ವಿಶೇಷತೆಗಳನ್ನು ಹೊಂದಿರುವ ಈ ಚಿತ್ರದ ಪ್ರೀಮಿಯರ್ ಶೋವನ್ನು ಕೇವಲ ಒಂದು ರೂಪಾಯಿಯಲ್ಲಿ ನೋಡಬಹುದು.

ಮೇ 31ರ ಬುಧವಾರ ಸಂಜೆ ನಡೆಯಲಿರುವ ಯದಾ ಯದಾ ಹಿ ಚಿತ್ರದ ಪ್ರೀಮಿಯರ್ ಶೋವನ್ನು ಬೆಂಗಳೂರಿನ ವೀರೇಶ ಚಿತ್ರಮಂದಿರ ಹಾಗೂ ಹುಬ್ಬಳ್ಳಿಯ ಸುಧಾ ಚಿತ್ರಮಂದಿರಗಳಲ್ಲಿ 1 ರೂ.ಪ್ರವೇಶ ದರ ನೀಡಿ ಚಿತ್ರ ವೀಕ್ಷಿಸುವ ಅವಕಾಶವನ್ನು ನಿರ್ಮಾಪಕರು ಒದಗಿಸಿಕೊಟ್ಟಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಇದೇ ಮೊದಲಬಾರಿಗೆ ಇಂಥದ್ದೊಂದು ವಿಭಿನ್ನ ಪ್ರಯತ್ನ ನಡೆಯುತ್ತಿದೆ.

ಶಾಲಿನಿ ಎಂಟರ್‌ ಪ್ರೈಸಸ್ ಮೂಲಕ ಜಾಕ್‌ ಮಂಜು ಅವರು ಈ ಚಿತ್ರವನ್ನು ರಿಲೀಸ್ ಮಾಡುತ್ತಿದ್ದಾರೆ. ವಿಶೇಷವಾಗಿ ಈ ಚಿತ್ರದ ಟೈಟಲ್ ಸಾಂಗನ್ನು ವಸಿಷ್ಠಸಿಂಹ ಹಾಗೂ ಹರಿಪ್ರಿಯ ಹಾಡಿದ್ದಾರೆ. ತೆಲುಗು ಮೂಲದ ಅಶೋಕ ತೇಜ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದು, ಗೈಸ್ ಅಂಡ್ ಡಾಲ್ಸ್‌ ಕ್ರಿಯೇಶನ್ಸ್ ಮೂಲಕ ಹೈದರಾಬಾದ್​ನ ರಾಜೇಶ್ ಅಗರವಾಲ್ ಅವರು ನಿರ್ಮಿಸಿದ್ದಾರೆ.

ಸಿನಿಮಾವು ಮರ್ಡರ್ ಮಿಸ್ಟರಿ ಕತೆಯನ್ನು ಒಳಗೊಂಡಿದೆ. ಈ ಸಿನಿಮಾದಲ್ಲಿ ನಟಿಸುವ ಮುನ್ನ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಸ್ನೇಹಿತರಾಗಿದ್ದರಂತೆ. ನಟಿಸುವಾಗ ಪ್ರೇಮಿಗಳಾಗಿದ್ದರು. ಬಿಡುಗಡೆ ಆಗುವ ಹೊತ್ತಿಗೆ ಇಬ್ಬರೂ ಸತಿ-ಪತಿ ಆಗಿದ್ದಾರೆ. ಹಾಗಾಗಿ ಈ ಸಿನಿಮಾ ಈ ಇಬ್ಬರಿಗೂ ಬಹಳ ವಿಶೇಷವಾದ ಸಿನಿಮಾ. ದಿಗಂತ್ ಸಹ ಈ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಖಡಕ್ ಪೊಲೀಸ್ ಅಧಿಕಾರಿಯಾಗಿ ಅವರು ಕಾಣಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ