ಸೂರಣಗಿ ಗ್ರಾಮದಲ್ಲಿ ಕಳೆದ ತಿಂಗಳು ದೊಡ್ಡ ದುರಂತ ನಡೆದಿತ್ತು. ಯಶ್ (Yash) ಬರ್ತ್ಡೇಗೂ ಒಂದು ದಿನ ಮೊದಲು ಅಂದರೆ ಜನವರಿ 7ರಂದು ಹುಟ್ಟುಹಬ್ಬದ ಬ್ಯಾನರ್ ನಿಲ್ಲಿಸಲು ಹೋದ ಮೂವರು ಮೃತಪಟ್ಟಿದ್ದರು. ಇವರ ಕುಟುಂಬಕ್ಕೆ ಯಶ್ ತಲಾ ಐದು ಲಕ್ಷ ರೂಪಾಯಿ ನೀಡಿದ್ದರು. ಈಗ ಗಾಯಗೊಂಡ ಕುಟುಂಬಕ್ಕೂ ಯಶ್ ಧನ ಸಹಾಯ ಮಾಡಿದ್ದಾರೆ. ಗಾಯಾಳುಗಳಿಗೆ ತಲಾ ಒಂದು ಲಕ್ಷ ರೂಪಾಯಿ ನೀಡಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಜ.7 ರಂದು ದುರಂತ ನಡೆದಿತ್ತು. ಜ.8 ರಂದು ಯಶ್ ಬರ್ತಡೇ. ಈ ಹಿನ್ನೆಲೆಯಲ್ಲಿ ಹಿಂದಿನ ರಾತ್ರಿ ಕಟೌಟ್ ನಿಲ್ಲಿಸಲು ಹೋದಾಗ ವಿದ್ಯುತ್ ಅವಘಡ ಸಂಭವಿಸಿತ್ತು. ಕಟೌಟ್ಗೆ ವಿದ್ಯುತ್ ತಂತಿ ಸ್ಪರ್ಶವಾಗಿ ಸ್ಥಳದಲ್ಲಿ ಹನುಮಂತ ಹರಿಜನ, ಮುರಳಿ ನಡುವಿನಮನಿ ಹಾಗೂ ನವೀನ್ ಗಾಜಿ ಮೃತಪಟ್ಟಿದ್ದರು. ಘಟನೆಯಲ್ಲಿ ಇನ್ನುಳಿದ ನಾಲ್ಕು ಜನ ಯುವಕರಿಗೆ ಗಂಭೀರ ಗಾಯವಾಗಿತ್ತು. ಇವರಿಗೆ ಧನಸಹಾಯ ಸಿಕ್ಕಿದೆ.
ಅವಘಡದಲ್ಲಿ ಮಂಜುನಾಥ, ಪ್ರಕಾಶ, ಹನುಮಂತ ಹಾಗೂ ನಾಗರಾಜ್ ಗಾಯಗೊಂಡಿದ್ದರು. ಇವರಿಗೆ ಒಂದು ಲಕ್ಷ ರೂಪಾಯಿ ಸಿಕ್ಕಿದೆ. ಈ ವಿಚಾರವನ್ನು ಕುಟುಂಬದವರು ಖಚಿತಪಡಿಸಿದ್ದಾರೆ.
ಜನವರಿ 8ರಂದು ಸೂರಣಗಿ ಗ್ರಾಮಕ್ಕೆ ಸ್ವತಃ ಯಶ್ ಅವರೇ ಭೇಟಿ ಕೊಟ್ಟಿದ್ದರು. ಕುಟುಂಬದವರಿಗೆ ಸಾಂತ್ವನ ಹೇಳಿ ಸಹಾಯ ಮಾಡುವ ಭರವಸೆ ನೀಡಿದ್ದರು. ಆ ಬಳಿಕ ಜ.17 ರಂದು ಯಶ್ ಆಪ್ತರು ಮೃತ ಯುವಕರ ಕುಟುಂಬಸ್ಥರಿಗೆ ತಲಾ 5 ಲಕ್ಷ ರೂ. ಚೆಕ್ ವಿತರಿಸಿದರು. ಈ ವೇಳೆ ಗಾಯಾಳುಗಳ ಬ್ಯಾಂಕ್ ಮಾಹಿತಿ ಪಡೆದು ತೆರಳಿದ್ದರು. ಆ ಪ್ರಕಾರ ಗಾಯಾಳುಗಳ ಕುಟುಂಬಕ್ಕೆ ತಲಾ ಒಂದು ಲಕ್ಷ ರೂಪಾಯಿ ಜಮಾ ಮಾಡಲಾಗಿದೆ. ನಾಲ್ಕು ಜನ ಗಾಯಾಳುಗಳ ಕುಟುಂಬಸ್ಥರ ಬ್ಯಾಂಕ್ ಖಾತೆಗೆ ನೇರವಾಗಿ ಒಂದು ಲಕ್ಷ ರೂಪಾಯಿ ಜಮಾ ಮಾಡಲಾಗಿದೆ.
ಇದನ್ನೂ ಓದಿ: ಸಂಗೀತಾಗೆ ಯಶ್ ವಿಶ್ ಮಾಡಿದ ವಿಡಿಯೋ ಫೇಕ್; ವೈರಲ್ ವಿಡಿಯೋದ ಅಸಲಿಯತ್ತು ಇಲ್ಲಿದೆ..
ಯಶ್ ಅವರ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ. ಗಾಯಾಳುಗಳಿಗೂ ಅವರ ಕಡೆಯಿಂದ ಸಹಾಯ ಸಿಕ್ಕಿರುವುದಕ್ಕೆ ಅನೇಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ‘ಟಾಕ್ಸಿಕ್’ ಸಿನಿಮಾ ಕೆಲಸಗಳಲ್ಲಿ ಯಶ್ ಅವರು ಸದ್ಯ ಬ್ಯುಸಿ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ