
ಹಿಂದಿ ಬಾಕ್ಸ್ ಆಫೀಸ್ನಲ್ಲಿ ಒಂದು ಬಿರುಗಾಳಿಯ ರೂಪದಲ್ಲಿ ‘ಕೆಜಿಎಫ್: ಚಾಪ್ಟರ್ 2’ (KGF Chapter 2) ಸಿನಿಮಾ ಬಂದಿದೆ. ಮೂಲ ಹಿಂದಿ ಸಿನಿಮಾಗಳೇ ಉತ್ತಮ ಕಲೆಕ್ಷನ್ ಮಾಡಲು ಕಷ್ಟಪಡುತ್ತಿರುವ ಈ ಸಮಯದಲ್ಲಿ ‘ಕೆಜಿಎಫ್ 2’ ಚಿತ್ರ ಮಾಡುತ್ತಿರುವ ಸಾಧನೆ ಸಣ್ಣದೇನಲ್ಲ. ಭಾರತೀಯ ಚಿತ್ರರಂಗದಲ್ಲಿ ಈ ಸಿನಿಮಾ ಹಲವು ದಾಖಲೆಗಳನ್ನು ಬರೆದಿದೆ. ಕನ್ನಡದ ನಟ ಯಶ್ (Yash) ಅವರು ಹಿಂದಿಯ ಯಾವ ಸ್ಟಾರ್ ಹೀರೋಗಳಿಗೂ ಕಮ್ಮಿ ಇಲ್ಲ ಎಂಬ ಮಟ್ಟಕ್ಕೆ ಇಂದು ಬೆಳೆದು ನಿಂತಿದ್ದಾರೆ. ಇದಕ್ಕೆಲ್ಲ ಕಾರಣ ಆಗಿರುವುದು ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ. ಬಾಲಿವುಡ್ ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾ ಬಂಗಾರದ ಬೆಳೆ ತೆಗೆಯುತ್ತಿದೆ. ಬಿಡುಗಡೆಯಾಗಿ 6 ದಿನ ಕಳೆದರೂ ಈ ಚಿತ್ರದ ಅಬ್ಬರ ಕಮ್ಮಿ ಆಗಿಲ್ಲ. ಪ್ರತಿ ದಿನ ಬಹುಕೋಟಿ ರೂಪಾಯಿ ಕಮಾಯಿ ಮಾಡುತ್ತಲೇ ಮುನ್ನುಗ್ಗುತ್ತಿದೆ. ಹಿಂದಿ ಬಾಕ್ಸ್ ಆಫೀಸ್ನಲ್ಲಿ ಈ ಚಿತ್ರಕ್ಕೆ ಈವರೆಗೆ 238.70 ಕೋಟಿ ರೂಪಾಯಿ ಗಳಿಕೆ ಆಗಿದೆ. ರಾಜಮೌಳಿ ನಿರ್ದೇಶನದ ‘ಆರ್ಆರ್ಆರ್’ ಚಿತ್ರದ (RRR movie) ಹಿಂದಿ ಕಲೆಕ್ಷನ್ ಅನ್ನು ಬೀಟ್ ಮಾಡಲು ಇನ್ನು ಕೆಲವೇ ಕೋಟಿಗಳು ಬಾಕಿ ಇದೆ.
ಹೌದು, ‘ಆರ್ಆರ್ಆರ್’ ಸಿನಿಮಾ ಹಿಂದಿಗೆ ಡಬ್ ಆಗಿ ಉತ್ತಮ ಕಲೆಕ್ಷನ್ ಮಾಡಿದೆ. ಆ ಚಿತ್ರ ಬಾಲಿವುಡ್ ಮಾರ್ಕೆಟ್ನಲ್ಲಿ ಲೈಫ್ ಟೈಮ್ ಗಳಿಕೆ ಮಾಡಿರುವುದು 255 ಕೋಟಿ ರೂಪಾಯಿ. ಆ ದಾಖಲೆ ಮುರಿಯಲು ‘ಕೆಜಿಎಫ್ 2’ ಚಿತ್ರಕ್ಕೆ ಇನ್ನು 17 ಕೋಟಿ ರೂಪಾಯಿ ಮಾತ್ರ ಬಾಕಿ ಇದೆ. 6 ದಿನಗಳಲ್ಲಿ 238.70 ಕೋಟಿ ರೂಪಾಯಿ ಗಳಿಸಿರುವ ‘ಕೆಜಿಎಫ್ 2’ ಚಿತ್ರ 7ನೇ ದಿನವೂ ಬಹುತೇಕ ಕಡೆಗಳಲ್ಲಿ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಹಾಗಾಗಿ ಇನ್ನೆರಡು ದಿನಗಳಲ್ಲಿ ‘ಆರ್ಆರ್ಆರ್’ ಚಿತ್ರವನ್ನು ಹಿಂದಿಕ್ಕುವುದು ಗ್ಯಾರಂಟಿ.
ಟ್ರೇಡ್ ಅನಲಿಸ್ಟ್ ತರಣ್ ಆದರ್ಶ್ ಅವರು ‘ಕೆಜಿಎಫ್: ಚಾಪ್ಟರ್ 2’ ಸಿನಿಮಾದ ಹಿಂದಿ ಕಲೆಕ್ಷನ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಮೊದಲ ದಿನ 53.95 ಕೋಟಿ ರೂಪಾಯಿ, ಎರಡನೇ ದಿನ 46.79 ಕೋಟಿ, ಮೂರನೇ ದಿನ 42.90 ಕೋಟಿ, ನಾಲ್ಕನೇ ದಿನ 50.35 ಕೋಟಿ, ಐದನೇ ದಿನ 25.57 ಕೋಟಿ ಹಾಗೂ ಆರನೇ ದಿನ 19.14 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ.
ಪ್ರಶಾಂತ್ ನೀಲ್ ನಿರ್ದೇಶನದ ಈ ಸಿನಿಮಾದಲ್ಲಿ ಬಾಲಿವುಡ್ ಕಲಾವಿದರಾದ ಸಂಜಯ್ ದತ್, ರವೀನಾ ಟಂಡನ್ ಅವರು ನಟಿಸಿದ್ದಾರೆ. ಉತ್ತರ ಭಾರತದ ಪ್ರೇಕ್ಷಕರು ಈ ಚಿತ್ರವನ್ನು ಮುಗಿಬಿದ್ದು ನೋಡುತ್ತಿದ್ದಾರೆ. ಅಲ್ಲದೇ, ರವೀನಾ ಟಂಡನ್ ಅವರು ತೆರೆ ಮೇಲೆ ಕಾಣಿಸಿಕೊಂಡಾಗ ಅಭಿಮಾನಿಗಳು ನಾಣ್ಯಗಳನ್ನು ತೂರುತ್ತಿದ್ದಾರೆ. ಜನರು ಈ ಪರಿ ಪ್ರೀತಿ ತೋರಿಸುತ್ತಿರುವುದಕ್ಕೆ ರವೀನಾ ಟಂಡನ್ ಫುಲ್ ಖುಷಿ ಆಗಿದ್ದಾರೆ.
ವಿಶ್ವಾದ್ಯಂತ ‘ಕೆಜಿಎಫ್ 2’ ಸಿನಿಮಾ ಧೂಳೆಬ್ಬಿಸಿದೆ. ಎಲ್ಲ ಭಾಷೆಗಳಿಂದ ಈಗಾಗಲೇ 600 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಆಗಿದೆ. ಚಿತ್ರಕ್ಕೆ ಬಂಡವಾಳ ಹೂಡಿದ ‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆ ಭರ್ಜರಿ ಲಾಭದಲ್ಲಿದೆ. ಯಶ್ ವೃತ್ತಿ ಜೀವನಕ್ಕೆ ಈ ಸಿನಿಮಾದಿಂದ ಬಹು ದೊಡ್ಡ ಗೆಲುವು ಸಿಕ್ಕಿದೆ. ‘ಕೆಜಿಎಫ್ 2’ ಸಿನಿಮಾದ ಲೈಫ್ ಟೈಮ್ ಕಲೆಕ್ಷನ್ ಎಷ್ಟಾಗಬಹುದು ಎಂಬುದನ್ನು ತಿಳಿಯುವ ಕುತೂಹಲ ಮೂಡಿದೆ.
ಇದನ್ನೂ ಓದಿ:
‘ಕೆಜಿಎಫ್ 2’ನಲ್ಲಿ ರವೀನಾ ಟಂಡನ್ ಕಂಡು ಥಿಯೇಟರ್ ಪರದೆಗೆ ದುಡ್ಡು ಎಸೆದ ಫ್ಯಾನ್ಸ್; ವಿಡಿಯೋ ಹಂಚಿಕೊಂಡ ನಟಿ
ಸೌತ್ ಚಿತ್ರಗಳ ಎದುರು ಬಾಲಿವುಡ್ ಎಡವಿದ್ದು ಎಲ್ಲಿ? ಉತ್ತರ ಹುಡುಕಿದ ‘ಕೆಜಿಎಫ್ 2’ ಅಧೀರ ಸಂಜಯ್ ದತ್