
ಇಡೀ ಭಾರತೀಯ ಚಿತ್ರರಂಗವೇ ‘ಕೆಜಿಎಫ್: ಚಾಪ್ಟರ್ 2’ ಚಿತ್ರದ ಬಿಡುಗಡೆಗಾಗಿ ಕಾದು ಕುಳಿತಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಇಷ್ಟುಹೊತ್ತಿಗಾಗಲೇ ಈ ಸಿನಿಮಾ ತೆರೆಕಂಡಿರಬೇಕಿತ್ತು. ಆದರೆ ಕೊರೊನಾ ಕಾಟದಿಂದಾಗಿ ಚಿತ್ರದ ಕೆಲಸಗಳು ವಿಳಂಬವಾದವು. ಕೆಲವೇ ದಿನಗಳ ‘ಕೆಜಿಎಫ್ 2’ ತಂಡ ಹೊಸ ಬಿಡುಗಡೆ ದಿನಾಂಕ ಘೋಷಿಸಿತು. ಮುಂದಿನ ವರ್ಷ ಏಪ್ರಿಲ್ 14ರಂದು ಸಿನಿಮಾ ರಿಲೀಸ್ ಆಗಲಿದೆ. ಅಲ್ಲಿಯವರೆಗೂ ಕಾಯಲು ಫ್ಯಾನ್ಸ್ ಸಿದ್ಧರಿಲ್ಲ. ಆದಷ್ಟು ಬೇಗ ಈ ಚಿತ್ರದ ಬಗ್ಗೆ ಏನಾದರೂ ಅಪ್ಡೇಟ್ ಸಿಗಬಹುದೇ ಎಂದು ಯಶ್ ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ.
ಈಗಾಗಲೇ ‘ಕೆಜಿಎಫ್: ಚಾಪ್ಟರ್ 2’ ತಂಡ ಶೂಟಿಂಗ್ ಮುಗಿಸಿಕೊಂಡಿದೆ. ಆದರೆ ಕೆಲವು ದೃಶ್ಯಗಳ ಪ್ಯಾಚ್ ವರ್ಕ್ ನಡೆಯುತ್ತಿರುವ ಸಾಧ್ಯತೆ ಇದೆ. ಅದಕ್ಕೆ ಸಾಕ್ಷಿ ಎಂಬಂತೆ ಒಂದೆರಡು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ‘ಕೆಜಿಎಫ್ 2’ ಚಿತ್ರೀಕರಣದ ಸೆಟ್ನಲ್ಲಿ ಕ್ಲಿಕ್ಕಿಸಲಾಗಿದ್ದು ಎಂಬಂತಿರುವ ಈ ಫೋಟೋಗಳನ್ನು ಅಭಿಮಾನಿಗಳು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಬೆಂಗಳೂರಿನ ನೈಸ್ ರಸ್ತೆಯಲ್ಲಿ ‘ಕೆಜಿಎಫ್: ಚಾಪ್ಟರ್ 2’ ಚಿತ್ರದ ಚೇಸಿಂಗ್ ದೃಶ್ಯಗಳ ಶೂಟಿಂಗ್ ನಡೆದಿದೆ ಎಂದು ಈ ಫೋಟೋಗಳಿಗೆ ಕ್ಯಾಪ್ಷನ್ ನೀಡಲಾಗಿದೆ. ಈ ಸಿನಿಮಾದಲ್ಲಿ ಕಥಾನಾಯಕ ರಾಕಿ ಭಾಯ್ ಮತ್ತು ಖಳನಾಯಕ ಅಧೀರನ ನಡುವೆ ಭರ್ಜರಿ ಚೇಸಿಂಗ್ ಸೀನ್ ಇರಬಹುದೇ ಎಂದು ಫ್ಯಾನ್ಸ್ ಊಹಿಸುತ್ತಿದ್ದಾರೆ. ಆ ಬಗ್ಗೆ ಏನಾದರೂ ಮಾಹಿತಿ ಹೊರಬರಲಿ ಅಂತ ಕಾಯುತ್ತಿರುವ ಅಭಿಮಾನಿಗಳಿಗೆ ನಿರ್ದೇಶಕ ಪ್ರಶಾಂತ್ ನೀಲ್ ಅವರೇ ಪ್ರತಿಕ್ರಿಯೆ ನೀಡಬೇಕಿದೆ.
2021ರ ಜನವರಿಯಲ್ಲಿ ಯಶ್ ಜನ್ಮದಿನದ ಪ್ರಯುಕ್ತ ಬಿಡುಗಡೆಯಾದ ಟೀಸರ್ನಿಂದ ಈ ಸಿನಿಮಾ ಬಗ್ಗೆ ಇದ್ದ ಕ್ರೇಜ್ ಹತ್ತು ಪಟ್ಟು ಹೆಚ್ಚಾಯಿತು. ಈವರೆಗೂ 21 ಕೋಟಿಗೂ ಅಧಿಕ ಬಾರಿ ವೀಕ್ಷಣೆ ಕಂಡಿರುವುದು ಈ ಟೀಸರ್ನ ಹೆಚ್ಚುಗಾರಿಕೆ. ಟ್ರೇಲರ್ಗಾಗಿ ಅಭಿಮಾನಿಗಳ ಬಳಗ ತುದಿಗಾಲಿನಲ್ಲಿ ನಿಂತು ಕಾಯುತ್ತಿದೆ. ಆಡಿಯೋ ಬಿಡುಗಡೆಗಾಗಿಯೂ ಕಾತರ ಹೆಚ್ಚಿದೆ. ಚಿತ್ರದ ಆಡಿಯೋ ಹಕ್ಕುಗಳನ್ನು ಲಹರಿ ಸಂಸ್ಥೆ ಬಾಚಿಕೊಂಡಿದೆ. ಸಂಜಯ್ ದತ್, ರವೀನಾ ಟಂಡನ್ ಮುಂತಾದ ಕಲಾವಿದರು ಇರುವುದರಿಂದ ಉತ್ತರ ಭಾರತದಲ್ಲೂ ‘ಕೆಜಿಎಫ್ 2’ ಧೂಳೆಬ್ಬಿಸಲಿದೆ.
ಇದನ್ನೂ ಓದಿ:
ಕೆಜಿಎಫ್ 2ಗೆ ಬಂತು 255 ಕೋಟಿ ಆಫರ್? ದಯವಿಟ್ಟು ಒಪ್ಪಬೇಡಿ ಎಂದ ಫ್ಯಾನ್ಸ್
ಶೂಟಿಂಗ್ ಸೆಟ್ನಲ್ಲಿ ಊಟ ಮಾಡಿ ಬೈಯಿಸಿಕೊಂಡಿದ್ದ ಸಂಜಯ್ ದತ್; ‘ಕೆಜಿಎಫ್’ ಅಧೀರನ ಕಷ್ಟದ ಹಾದಿ
Published On - 3:18 pm, Fri, 8 October 21