
ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ರಿಲೀಸ್ಗೆ ದಿನಗಣನೆ ಶುರುವಾಗಿದೆ. ಇನ್ನು 100 ದಿನಗಳಲ್ಲಿ ಈ ಚಿತ್ರ ತೆರೆಗೆ ಅಪ್ಪಳಿಸಲಿದೆ. ಕನ್ನಡ ಮಾತ್ರವಲ್ಲದೆ, ಇಂಗ್ಲಿಷ್ ಭಾಷೆಯಲ್ಲೂ ಸಿನಿಮಾ ರಿಲೀಸ್ ಆಗಲಿದೆ. ಇನ್ನು ತೆಲುಗು, ತಮಿಳು, ಹಿಂದಿ ಮೊದಲಾದ ಭಾಷೆಗಳಿಗೆ ಸಿನಿಮಾ ಡಬ್ ಆಗಿ ತೆರೆಗೆ ಬರುತ್ತಿದೆ. ಈಗ ‘ಟಾಕ್ಸಿಕ್’ ಸಿನಿಮಾ ಜೊತೆ ತೆರೆಗೆ ಬರಲು ಒಂದಲ್ಲ, ಎರಡಲ್ಲ ಬರೋಬ್ಬರಿ ಐದು ಸಿನಿಮಾಗಳು ಸಿದ್ಧವಾಗಿವೆ.
ಮಾರ್ಚ್ 19 ಈದ್ ಹಬ್ಬ. ಅದೇ ದಿನ ಹಿಂದೂಗಳ ಹೊಸ ವರ್ಷ ಯುಗಾದಿ ಕೂಡ ಬಂದಿದೆ. ಈ ದಿನ ಗುರುವಾರ ಬಂದಿದ್ದು, ಸರ್ಕಾರಿ ರಜೆಯ ಲಾಭ ಪಡೆಯಲು ಸಿನಿಮಾ ತಂಡಗಳು ಮುಂದಾಗಿವೆ. ಶುಕ್ರವಾರ ಸಿನಿಮಾ ರಂಗದ ಪಾಲಿಗೆ ವಿಶೇಷ ಆಗಿರುವುದರಿಂದ ಸಾಂಪ್ರದಾಯಿಕ ವೀಕ್ಷಕರು ಹಾಗೂ ಸಿನಿ ಪ್ರಿಯರು ಚಿತ್ರಮಂದಿರಕ್ಕೆ ತೆರಳುತ್ತಾರೆ. ಶನಿವಾರ ಹಾಗೂ ಭಾನುವಾರ ಸಹಜವಾಗಿಯೇ ಅದ್ದೂರಿ ಕಲೆಕ್ಷನ್ ಆಗುತ್ತದೆ. ಈ ಎಲ್ಲಾ ಕಾರಣಕ್ಕೆ ‘ಟಾಕ್ಸಿಕ್’ ತಂಡ ಮಾರ್ಚ್ 19 ಅನ್ನು ಆಯ್ಕೆ ಮಾಡಿಕೊಂಡಿದೆ. ಇದೇ ಲೆಕ್ಕಾಚಾರದಲ್ಲಿ ಇನ್ನೂ ಹಲವು ಸಿನಿಮಾಗಳಿವೆ.
ಸದ್ಯದ ಮಾಹಿತಿ ಪ್ರಕಾರ್ ಅಜಯ್ ದೇವಗನ್ ಮೊದಲಾದವರು ನಟಿಸಿರೋ ‘ಧಮಾಲ್ 4’ ಸಿನಿಮಾ 2026ರ ಮಾರ್ಚ್ 20ಕ್ಕೆ ರಿಲೀಸ್ ಆಗಲಿದೆಯಂತೆ. ಹಿಂದಿ ಬೆಲ್ಟ್ನಲ್ಲಿ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಸ್ಪರ್ಧೆ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಬಾಲಿವುಡ್ನ ಅತ್ಯಂತ ಯಶಸ್ವಿ ಫ್ರಾಂಚೈಸಿಗಳಲ್ಲಿ ‘ಧಮಾಲ್’ ಕೂಡ ಒಂದು. ರಿತೇಶ್ ದೇಶ್ಮುಖ್, ಅರ್ಷದ್ ವಾರ್ಸಿ ಮೊದಲಾದವರು ನಟಿಸಿದ್ದಾರೆ.
ರಣವೀರ್ ಸಿಂಗ್ ನಟನೆಯ ‘ಧುರಂಧರ್’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ಯಶಸ್ಸು ಕಂಡಿದೆ. ಈ ಚಿತ್ರದ ಸೀಕ್ವೆಲ್ ಮಾರ್ಚ್ 19ರಂದು ತೆರೆಗೆ ಬರಲಿದೆ. ಈ ಸಿನಿಮಾ ಕೂಡ ಹಿಂದಿ ಬೆಲ್ಟ್ನಲ್ಲಿ ಯಶ್ ಸಿನಿಮಾಗೆ ಸ್ಪರ್ಧೆ ನೀಡಲಿದೆ.
ತೆಲುಗಿನಲ್ಲಿ ಮಾರ್ಚ್ ತಿಂಗಳಾಂತ್ಯಕ್ಕೆ ಮೂರು ಸಿನಿಮಾಗಳು ತೆರೆಗೆ ಬರಲು ರೆಡಿ ಆಗಿವೆ. ಈ ಪೈಕಿ ಅಡವಿ ಶೇಷ್ ಅವರ ‘ಡಕಾಯತ್’ (ಮಾರ್ಚ್ 19), ನಾನಿ ಅವರ ‘ದಿ ಪ್ಯಾರಡೈಸ್’ (ಮಾರ್ಚ್ 27) ಹಾಗೂ ರಾಮ್ ಚರಣ್ ಅವರ ‘ಪೆದ್ದಿ’ (ಮಾರ್ಚ್ 27) ಟಾಕ್ಸಿಕ್ ಜೊತೆ ಸ್ಪರ್ಧಿಸಲಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 2:59 pm, Tue, 9 December 25