ಗಿಲ್ಲಿ ನಟ ಓದಿದ ಶಾಲೆಯಲ್ಲಿ ಬಿಡುಗಡೆ ಆಯ್ತು ‘ಸರ್ಕಾರಿ ಶಾಲೆ H8’ ಸಿನಿಮಾ ಪೋಸ್ಟರ್
‘ಸರ್ಕಾರಿ ಶಾಲೆ H8’ ಸಿನಿಮಾದಲ್ಲಿ ಗಿಲ್ಲಿ ನಟ ಜೊತೆ ಗುಣ ಹರಿಯಬ್ಬೆ, ಮೇಘಶ್ರೀ ಅವರು ನಟಿಸಿದ್ದಾರೆ. ಗಿಲ್ಲಿ ನಟ ಓದಿದ ಸರ್ಕಾರಿ ಶಾಲೆಯಲ್ಲಿ ಅವರ ತಂದೆ, ತಾಯಿ ಈ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದರು. ಸೆನ್ಸಾರ್ ಪ್ರಕ್ರಿಯೆ ಮುಗಿದಿದ್ದು, 2026ರ ಫೆಬ್ರವರಿಯಲ್ಲಿ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಕಿರುತೆರೆಯಲ್ಲಿ ಅಪಾರ ಜನಪ್ರಿಯತೆ ಪಡೆದ ಗಿಲ್ಲಿ ನಟ (Gilli Nata) ಅವರು ಸಿನಿಮಾಗಳಲ್ಲಿ ಕೂಡ ಬೇಡಿಕೆ ಹೊಂದಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ಶೋನಲ್ಲಿ ಗಿಲ್ಲಿ ಮಿಂಚಲು ಆರಂಭಿಸಿದ ಬಳಿಕ, ಅವರ ಸಿನಿಮಾಗಳ ಬಗ್ಗೆಯೂ ಕ್ರೇಜ್ ಸೃಷ್ಟಿ ಆಗಿದೆ. ಇತ್ತೀಚೆಗಷ್ಟೇ ಅವರ ‘ಸೂಪರ್ ಹಿಟ್’ ಸಿನಿಮಾದ ಟೀಸರ್ ಬಿಡುಗಡೆ ಆಗಿತ್ತು. ಈಗ ಗಿಲ್ಲಿ ಅಭಿನಯದ ‘ಸರ್ಕಾರಿ ಶಾಲೆ H8’ (Sarkari Shale H8) ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಶೀರ್ಷಿಕೆಯ ಮೂಲಕ ಈ ಸಿನಿಮಾ ಕುತೂಹಲ ಮೂಡಿಸಿದೆ. ಈ ಸಿನಿಮಾದಲ್ಲಿ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಇದೆ ಎಂದು ಚಿತ್ರತಂಡ ಹೇಳಿದೆ.
‘ಸರ್ಕಾರಿ ಶಾಲೆ H8’ ಸಿನಿಮಾದ ಎಲ್ಲ ಕೆಲಸಗಳು ಮುಗಿದಿವೆ. ಸಿನಿಮಾವನ್ನು ಬಿಡುಗಡೆ ಮಾಡಲು ಚಿತ್ರತಂಡದವರು ಸಿದ್ಧವಾಗಿದ್ದಾರೆ. ಗಿಲ್ಲಿ ನಟ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾಗೆ ಗುಣ ಹರಿಯಬ್ಬೆ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ‘ಗಿರಿಚಂದ್ರ ಪ್ರೊಡಕ್ಷನ್ಸ್’ ಮೂಲಕ ತೇಜಸ್ವಿನಿ ಎಸ್. ಅವರು ‘ಸರ್ಕಾರಿ ಶಾಲೆ H8’ ಸಿನಿಮಾವನ್ನು ನಿರ್ಮಿಸಿದ್ದಾರೆ.
ವಿಶೇಷ ಏನೆಂದರೆ, ‘ಸರ್ಕಾರಿ ಶಾಲೆ H8’ ಸಿನಿಮಾದ ಪೋಸ್ಟರ್ ಅನ್ನು ಇತ್ತಿಚೆಗೆ ಗಿಲ್ಲಿ ನಟ ಅವರ ಊರಾದ ಮಳವಳ್ಳಿ ತಾಲೂಕಿನ ದಡದಪುರದಲ್ಲಿ ಬಿಡುಗಡೆ ಮಾಡಲಾಯಿತು. ಗಿಲ್ಲಿ ನಟ ಓದಿದ ಸರ್ಕಾರಿ ಶಾಲೆಯಲ್ಲಿ ಅವರ ತಂದೆ-ತಾಯಿ ಪೋಸ್ಟರ್ ಬಿಡುಗಡೆ ಮಾಡಿದ್ದು ವಿಶೇಷ. ಈ ಸಿನಿಮಾದಲ್ಲಿ ಗಿಲ್ಲಿ ನಟ, ಗುಣ ಹರಿಯಬ್ಬೆ, ಮೇಘಶ್ರೀ ಅವರು ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ.
ರಾಘವೇಂದ್ರ ರಾಜ್ಕುಮಾರ್, ಸುಚೇಂದ್ರ ಪ್ರಸಾದ್ , ನವಾಜ್, ಜಗಪ್ಪ, ಸುಶ್ಮಿತಾ ಜಗಪ್ಪ, ಕಡ್ಡಿಪುಡಿ, ಜೋತಿರಾಜ್, ನಮ್ರತಾ ಮುಂತಾದವರು ಕೂಡ ‘ಸರ್ಕಾರಿ ಶಾಲೆ H8’ ಸಿನಿಮಾದಲ್ಲಿ ನಟಿಸಿದ್ದಾರೆ. ರವಿ ರಾಮದುರ್ಗ ಹಾಗೂ ವೀನಸ್ ಮೂರ್ತಿ ಅವರು ಛಾಯಾಗ್ರಹಣ ಮಾಡಿದ್ದಾರೆ. ರವಿತೇಜ ಸಿ.ಹೆಚ್. ಅವರ ಸಂಕಲನ ಈ ಸಿನಿಮಾಗಿದೆ. ವಿಜೇತ್ ಮಂಜಯ್ಯ ಅವರು ಸಂಗೀತ ನೀಡಿದ್ದಾರೆ.
ಇದನ್ನೂ ಓದಿ: ಇಡೀ ಕರ್ನಾಟಕದಲ್ಲಿ ಗಿಲ್ಲಿ ಕ್ರೇಜ್: ಎಲಿಮಿನೇಟ್ ಆಗಿ ಬಂದ ಅಭಿಷೇಕ್ ಹೇಳಿದ್ದೇನು?
‘ಕುತೂಹಲ ಕೆರಳಿಸುತ್ತ ಸಾಗುವ ಈ ಸಿನಿಮಾದ ಕಥೆಯು ಒಂದು ವಿಗ್ರಹದ ಮೇಲೆ ನಿಂತಿರುತ್ತೆ. ಕಥೆ 4 ಕಡೆಗಳಲ್ಲಿ ಸಾಗುತ್ತದೆ’ ಎಂದು ಚಿತ್ರತಂಡ ಮಾಹಿತಿ ನೀಡಿದೆ. ಬೆಂಗಳೂರು, ಚಿತ್ರದುರ್ಗ, ಶಿರಾ, ಶಿವಮೊಗ್ಗ ಸುತ್ತಮುತ್ತ ಶೂಟಿಂಗ್ ಮಾಡಲಾಗಿದೆ. ಈಗಾಗಲೇ ಚಿತ್ರಕ್ಕೆ ಸೆನ್ಸಾರ್ ಪ್ರಕ್ರಿಯೆ ಕೂಡ ಮುಗಿದಿದೆ. 2026ರ ಫೆಬ್ರವರಿಯಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಶರಣ್, ಮೆಹಬೂಬ್ ಸಾಬ್ ಅವರು ಹಾಡುಗಳಿಗೆ ಧ್ವನಿ ನೀಡಿದ್ದಾರೆ. ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




