
‘ಗೋಲ್ಡನ್ ಸ್ಟಾರ್’ ಗಣೇಶ್ (Golden Star Ganesh) ನಟನೆಯ ಸಿನಿಮಾಗಳಲ್ಲಿ ಹಾಡುಗಳು ಸೂಪರ್ ಆಗಿರುತ್ತವೆ ಎಂಬುದು ಅಭಿಮಾನಿಗಳ ನಂಬಿಕೆ. ಆ ನಂಬಿಕೆಯನ್ನು ಗಣಿ ಎಂದಿಗೂ ಹುಸಿ ಮಾಡಿಲ್ಲ. ಈಗ ಅವರು ನಟಿಸಿರುವ ‘ತ್ರಿಬಲ್ ರೈಡಿಂಗ್’ ಸಿನಿಮಾದಲ್ಲೂ ಹಾಡಿನ ಗಮ್ಮತ್ತು ಜೋರಾಗಿದೆ. ಈ ಚಿತ್ರದ ‘ಯಟ್ಟ ಯಟ್ಟ..’ (Yatta Yatta Song) ಹಾಡು ಬಿಡುಗಡೆ ಆಗಿದೆ. ಈ ಗೀತೆಗೆ ಚಂದನ್ ಶೆಟ್ಟಿ ಹಾಗೂ ಮಂಗ್ಲಿ ಅವರು ಜೊತೆಯಾಗಿ ಧ್ವನಿ ನೀಡಿದ್ದಾರೆ. ಮೂರು ದಿನ ಕಳೆಯುವುದರೊಳಗೆ ಯೂಟ್ಯೂಬ್ನಲ್ಲಿ 4 ಮಿಲಿಯನ್ ವೀವ್ಸ್ ಪಡೆಯುವತ್ತ ಮುನ್ನುಗ್ಗುತ್ತಿದೆ ಈ ಗೀತೆ. ಮಹೇಶ್ ಗೌಡ ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ಸಾಯಿ ಕಾರ್ತಿಕ್ ಸಂಗೀತ ಸಂಯೋಜನೆ ಮಾಡಿದ್ದಾರೆ. ‘ತ್ರಿಬಲ್ ರೈಡಿಂಗ್’ (Triple Riding) ಚಿತ್ರದಲ್ಲಿ ಗಣೇಶ್ ಜೊತೆಯಲ್ಲಿ ಅದಿತಿ ಪ್ರಭುದೇವ, ರಚನಾ ಇಂದರ್ ಹಾಗೂ ಮೇಘಾ ಶೆಟ್ಟಿ ಅವರ ನಟಿಸಿದ್ದಾರೆ.
ಇತ್ತೀಚೆಗೆ ‘ತ್ರಿಬಲ್ ರೈಡಿಂಗ್’ ಸಿನಿಮಾದ ‘ಯಟ್ಟ ಯಟ್ಟ..’ ಹಾಡಿನ ಬಿಡುಗಡೆ ಸಮಾರಂಭ ನಡೆಯಿತು. ಅದರಲ್ಲಿ ಚಿತ್ರತಂಡದ ಸದಸ್ಯರು ಭಾಗಿ ಆಗಿದ್ದರು. ಗಣೇಶ್ ಮತ್ತು ನಿರ್ದೇಶಕ ಮಹೇಶ್ ಗೌಡ ಅವರು ‘ಮುಂಗಾರು ಮಳೆ’ ಸಮಯದಿಂದಲೂ ಪರಿಚಿತರು. ಜೊತೆಯಾಗಿ ಸಿನಿಮಾ ಮಾಡಬೇಕು ಎಂಬ ಅವರ ಕನಸು ಈಗ ಈಡೇರಿದೆ. ಈ ಚಿತ್ರದಲ್ಲಿ ಒಳ್ಳೆಯ ಪಾತ್ರ ನೀಡಿರುವ ನಿರ್ದೇಶಕರಿಗೆ ಗಣೇಶ್ ಧನ್ಯವಾದ ಹೇಳಿದ್ದಾರೆ. ಮೊದಲ ಬಾರಿ ನಿರ್ಮಾಣ ಮಾಡಿರುವ ರಾಮ್ ಗೋಪಾಲ್ ವೈ.ಎಂ. ಅವರಿಗೆ ಒಳ್ಳೆಯದಾಗಲಿ ಎಂದು ಅವರು ಹಾರೈಸಿದ್ದಾರೆ.
‘ಚಿತ್ರದ ಆರಂಭದಿಂದ ಕೊನೆಯವರೆಗೂ ಸಾಕಷ್ಟು ಟ್ವಿಸ್ಟ್ ಮತ್ತು ಟರ್ನ್ಗಳು ಇವೆ. ಇದೊಂದು ಪಕ್ಕಾ ಕಾಮಿಡಿ ಚಿತ್ರ. ಅದರಲ್ಲೂ ಚಿತ್ರದ ಕೊನೆಯ 20 ನಿಮಿಷ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತದೆ. ತ್ರಿಬಲ್ ರೈಡಿಂಗ್ ಹೋದರೆ ಏನೆಲ್ಲಾ ತೊಂದರೆ ಆಗಬಹುದು ಎನ್ನುವುದನ್ನ ಈ ಚಿತ್ರದಲ್ಲಿ ನೋಡಬಹುದು’ ಎಂದಿದ್ದಾರೆ ಗಣೇಶ್.
ಮೇಘಾ ಶೆಟ್ಟಿ ಅವರು ಈ ಚಿತ್ರದಲ್ಲಿ ಡಾಕ್ಟರ್ ಪಾತ್ರ ಮಾಡಿದ್ದಾರೆ. ‘ಲವ್ ಮಾಕ್ಟೇಲ್’ ಖ್ಯಾತಿಯ ನಟಿ ರಚನಾ ಇಂದರ್ ಅವರು ಹಠಮಾರಿ ಹೆಣ್ಣಿನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಗಣೇಶ್ ಜೊತೆ ನಟಿಸಿರುವುದು ಅವರಿಬ್ಬರಿಗೂ ಖುಷಿ ನೀಡಿದೆ.
ಗಣೇಶ್ ಮತ್ತು ಚಂದನ್ ಶೆಟ್ಟಿ ಕಾಂಬಿನೇಷನ್ನಲ್ಲಿ ಬರುತ್ತಿರುವ ಮೂರನೇ ಹಾಡು ಇದು. ಈ ಹಾಡಿನ ರೀತಿ ಸಿನಿಮಾ ಕೂಡ ಸೂಪರ್ ಹಿಟ್ ಆಗಲಿ ಎಂದು ಚಂದನ್ ಶೆಟ್ಟಿ ಹಾರೈಸಿದ್ದಾರೆ. ಸಾಯಿ ಕಾರ್ತಿಕ್ ಸಂಗೀತದ ಬಗ್ಗೆಯೂ ಅವರು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.