ಯೋಗರಾಜ್ ಭಟ್ಟರ (Yogaraj Bhatt) ಸಿನಿಮಾಗಳ ನಾಯಕ ಸಾಮಾನ್ಯವಾಗಿ ತರ್ಲೆ ವ್ಯಕ್ತಿತ್ವದವನಾಗಿರುತ್ತಾನೆ. ಹಾಸ್ಯ, ವ್ಯಂಗ್ಯ, ಕೀಟಲೆ ತರ್ಲೆ ಒಟ್ಟಾರೆ ಒಂದು ಉಡಾಳತನ ಆತನ ವ್ಯಕ್ತಿತ್ವದಲ್ಲಿರುತ್ತದೆ. ಇದೀಗ ಇದೇ ಉಡಾಳತನವನ್ನೇ ಇಟ್ಟುಕೊಂಡು ಸಿನಿಮಾ ಒಂದನ್ನು ನಿರ್ಮಿಸುತ್ತಿದ್ದಾರೆ ಭಟ್ಟರು. ಯೋಗರಾಜ್ ಸಿನಿಮಾಸ್ ಹಾಗೂ ರವಿ ಶಾಮನೂರು ಫಿಲಮ್ಸ್ ಜಂಟಿಯಾಗಿ ನಿರ್ಮಿಸುತ್ತಿರುವ ‘ಉಡಾಳ’ ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದೆ. ಸಿನಿಮಾದ ಮೊದಲ ಹಂತದ ಚಿತ್ರೀಕರಣ ವಿಜಾಪುರದಲ್ಲಿ ಪೂರ್ಣಗೊಂಡಿದೆ.
ಅಮೋಲ್ ಪಾಟೀಲ್ ‘ಉಡಾಳ’ ಸಿನಿಮಾದ ನಿರ್ದೇಶನದ ಮಾಡಿದ್ದು, ಪೃಥ್ವಿ ಶಾಮನೂರು ನಾಯಕನಾಗಿ ನಟಿಸಿದ್ದಾರೆ. ನಾಯಕ ಪೃಥ್ವಿ ಈ ಚಿತ್ರದಲ್ಲಿ ಗೈಡ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 25 ದಿನಗಳ ಮೊದಲ ಹಂತದ ಚಿತ್ರೀಕರಣದಲ್ಲಿ ಹಾಡು, ನೃತ್ಯ ಹಾಗೂ ಮಾತಿನ ಭಾಗದ ಸನ್ನಿವೇಶಗಳನ್ನು ಚಿತ್ರಿಸಿಕೊಳ್ಳಲಾಗಿದೆ. ಈ ಭಾಗದ ಚಿತ್ರೀಕರಣ ಸಂಪೂರ್ಣ ಬಿಜಾಪುರದಲ್ಲೇ ನಡೆದಿದೆ. ಈಗಾಗಲೇ ಚಿತ್ರದ ಮುಕ್ಕಾಲು ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಸದ್ಯದಲ್ಲೇ ದ್ವಿತೀಯ ಹಂತದ ಚಿತ್ರೀಕರಣ ಆರಂಭವಾಗಲಿದೆ ಎಂದು ನಿರ್ದೇಶಕ ಅಮೋಲ್ ಪಾಟೀಲ್ ತಿಳಿಸಿದ್ದಾರೆ.
ಇದನ್ನೂ ಓದಿ:ಯೋಗರಾಜ್ ಭಟ್ಟರ ಸಿನಿಮಾದಲ್ಲಿ ನಟಿಸಿದ್ದ ಚೆಲುವೆ ಈಗ ಅಲ್ಲು ಅರ್ಜುನ್ಗೆ ನಾಯಕಿ
“ಉಡಾಳ” ಪಕ್ಕಾ ಕಮರ್ಷಿಯಲ್ ಜಾನರ್ ಚಿತ್ರವಾಗಿದೆ. ಲವ್, ಕಾಮಿಡಿ ಸೇರಿದಂತೆ ಎಲ್ಲಾ ಅಂಶಗಳು ಈ ಚಿತ್ರದಲ್ಲಿದೆ. ಯೋಗರಾಜ್ ಭಟ್ ಅವರ ಜೊತೆಗೆ ಸಹ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಅಮೋಲ್ ಪಾಟೀಲ್ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಚಿತ್ರರಂಗ ಪ್ರವೇಶಿಸಿದ್ದಾರೆ, ಅಮೋಲ್ ಪಾಟೀಲ್ ಬಿಜಾಪುರ ಮೂಲದವರು ಎನ್ನುವುದು ಮತ್ತೊಂದು ವಿಶೇಷ. ಈ ಸಿನಿಮಾ ಸಹ ಉತ್ತರ ಕರ್ನಾಟಕದ ಸೊಗಡನ್ನು ಒಳಗೊಂಡಿರಲಿದೆ.
ತಮ್ಮ ಮೊದಲ ಚಿತ್ರ ‘ಪದವಿಪೂರ್ವ’ ದಲ್ಲೇ ಪೃಥ್ವಿ ಶಾಮನೂರು ಪ್ರೇಕ್ಷಕರ ಮನ ಗೆದ್ದಿದ್ದರು. ಪ್ರಸ್ತುತ ಅವರು ನಾಯಕರಾಗಿ ನಟಿಸುತ್ತಿರುವ ‘ಉಡಾಳ’ ಚಿತ್ರದ ಕುರಿತು ಸಾಕಷ್ಟು ನಿರೀಕ್ಷೆಯಿದೆ. ಪೃಥ್ವಿ ಶಾಮನೂರು ಅವರಿಗೆ ನಾಯಕಿಯಾಗಿ ಹೃತಿಕ ಶ್ರೀನಿವಾಸ್ ನಟಿಸುತ್ತಿದ್ದಾರೆ. ಬಲ ರಾಜವಾಡಿ, ಸುಮಿತ್, ಹರೀಶ್ ಹಿರಿಯೂರು, ಮಾಳು ನಿತ್ನಾಳ್, ಪ್ರವೀಣ್ ಗೋಕಾಕ್, ದಯಾನಂದ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಯೋಗರಾಜ್ ಭಟ್ ಅವರು ಚಿತ್ರದ ಹಾಡುಗಳನ್ನು ರಚಿಸಿದ್ದು, ಚೇತನ್ ಡ್ಯಾವಿ ಸಂಗೀತ ನೀಡಿದ್ದಾರೆ. ಶಿವಶಂಕರ್ ನೂರಂಬಡ ಛಾಯಾಗ್ರಹಣ, ಅರ್ಜುನ್ ರಾಜ್ ಸಾಹಸ ನಿರ್ದೇಶನ ಹಾಗೂ ಮೋಹನ್, ರಘು ಅವರ ನೃತ್ಯ ನಿರ್ದೇಶನ “ಉಡಾಳ” ಚಿತ್ರಕ್ಕಿದೆ. ಇದೇ ವರ್ಷದ ಕೊನೆಯಲ್ಲಿ ಸಿನಿಮಾ ಬಿಡುಗಡೆ ಮಾಡುವ ಸಾಧ್ಯತೆ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ