ಪ್ರೇಕ್ಷಕರ ಮನಗೆದ್ದ ‘ಬ್ಲಿಂಕ್’, ಶೋಗಳ ಸಂಖ್ಯೆ ಹೆಚ್ಚಳ
Blink: ‘ಬ್ಲಿಂಕ್’ ಕನ್ನಡ ಸಿನಿಮಾ ಬಿಡುಗಡೆ ಆದಾಗ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರಲಿಲ್ಲ. ಆದರೆ ಈಗ ಸಿನಿಮಾದ ಶೋಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ.
ಕನ್ನಡ ಸಿನಿಮಾಗಳನ್ನು ನೋಡಲು ಜನ ಚಿತ್ರಮಂದಿರಗಳಿಗೆ (Theater) ಬರುತ್ತಿಲ್ಲ ಎಂಬ ದೂರಿನ ನಡುವೆಯೇ ಅಲ್ಲೊಂದು ಇಲ್ಲೊಂದು ಸಿನಿಮಾಗಳು ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯಲು ಯಶಸ್ವಿಯಾಗುತ್ತಿವೆ. ಇಂಥಹಾ ಸಿನಿಮಾಗಳ ಸಂಖ್ಯೆ ದೊಡ್ಡದಿಲ್ಲವಾದರೂ, ಕೆಲ ಯುವಕರ ತಂಡಗಳು ಪ್ರೇಕ್ಷಕರನ್ನು ಸೆಳೆಯಲು ಯಶಸ್ವಿಯಾಗಿರುವುದು ಭರವಸೆ ಮೂಡಿಸಿದೆ. ಚಿತ್ರಮಂದಿರದಲ್ಲಿ ಬಿಡುಗಡೆ ಆದಾಗ ಕೆಲವೇ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದ್ದ, ಶೋಗಳ ಸಂಖ್ಯೆಯಲ್ಲಿ ಇಳಿಮುಖವಾಗಿದ್ದ ಸಿನಿಮಾ ಕಂಟೆಂಟ್ನಿಂದ ಪ್ರೇಕ್ಷಕರನ್ನು ಸೆಳೆದು ಇದೀಗ ಶೋಗಳ ಸಂಖ್ಯೆಯನ್ನು ಹೆಚ್ಚು ಮಾಡಿಕೊಂಡಿದೆ.
ಶಿವರಾತ್ರಿ ಹಬ್ಬದಂದು ಸೂಪರ್ ಸ್ಟಾರ್ಸ್ ಸಿನಿಮಾಗಳ ಮಧ್ಯೆ ತೆರೆಗೆ ಬಂದ ‘ಬ್ಲಿಂಕ್’ ಸಿನಿಮಾಗೆ ಪ್ರಾರಂಭದಲ್ಲಿ ಅಷ್ಟಾಗಿ ಉತ್ತಮ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಇದು ಮೂರರಲ್ಲಿ ಮತ್ತೊಂದು ಸಿನಿಮಾ ಎಂದೇ ಅಂದುಕೊಳ್ಳಲಾಗಿತ್ತು. ಆದರೆ ಆರಂಭದ ದಿನಗಳಲ್ಲಿ ಸಿನಿಮಾ ನೋಡಿದ ಪ್ರೇಕ್ಷಕರು, ಸಿನಿಮಾದ ಬಗ್ಗೆ ಮಾತನಾಡಿ ಆದ ಮೌತ್ ಪಬ್ಲಿಸಿಟಿಯಿಂದ ‘ಬ್ಲಿಂಕ್’ ಶೋಗಳು ಏರಿಕೆಯಾಗುತ್ತಾ ಹೋದವು. ಕನ್ನಡ ಸಿನಿಮಾಗಳಿಗೆ ಶೋ ಸಿಕ್ತಿಲ್ಲ ಎಂಬ ಆಪವಾದದ ನಡುವೆ 8 ಶೋಗಳಿಂದ 82 ಶೋ ಬ್ಲಿಂಕ್ ಪಾಲಾಗಿದೆ ಎಂಬುದು ಚಿತ್ರತಂಡದ ಹೆಮ್ಮೆ.
‘ಬ್ಲಿಂಕ್’ ಸಿನಿಮಾಕ್ಕೆ ಚಿತ್ರರಂಗದ ಕೆಲವು ಪ್ರಮುಖ ನಟ, ನಟಿಯರು ಸಹ ಬೆಂಬಲ ವ್ಯಕ್ತಪಡಿಸಿದರು. ಸಿನಿಮಾಗೆ ಸಿಗುತ್ತಿರುವ ಉತ್ತಮ ಪ್ರತಿಕ್ರಿಯೆ, ಸಿನಿಮಾದ ಬಗ್ಗೆ ಕೇಳಿ ಬಂದ ಉತ್ತಮ ವಿಮರ್ಶೆಗಳನ್ನು ಗಮನಿಸಿ ಸ್ವತಃ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ‘ಬ್ಲಿಂಕ್’ ಸಿನಿಮಾ ನೋಡುವ ಇಂಗಿತ ವ್ಯಕ್ತಪಡಿಸಿದ್ದರು. ಇನ್ನುಳಿದಂತೆ ಸಿಂಪಲ್ ಸುನಿ, ನವೀನ್ ಶಂಕರ್, ರುಕ್ಮಿಣಿ ವಸಂತ್ ಹಾಗೂ ನಟಿ ಬೃಂದಾ ಆಚಾರ್ ಸೇರಿದಂತೆ ಹಲವಾರು ಕನ್ನಡ ತಾರೆಯರು ‘ಬ್ಲಿಂಕ್’ ಗೆ ಬಹುಪರಾಕ್ ಎಂದಿದ್ದರು.
ಇದನ್ನೂ ಓದಿ:Blink Movie Review: ಟೈಮ್ ಟ್ರಾವೆಲ್ ಮೂಲಕ ಸ್ಯಾಂಡಲ್ವುಡ್ಗೆ ಬಂದ ಈಡಿಪಸ್
‘ಬ್ಲಿಂಕ್’ ಸಿನಿಮಾದ ಶೋಗಳು ಹೆಚ್ಚಾಗಿರುವ ಖುಷಿ ನಡುವೆಯೇ ಇದೀಗ ಈ ಸಿನಿಮಾ ವಿದೇಶದಲ್ಲಿಯೂ ತೆರೆಕಂಡಿದೆ. ಆಸ್ಟ್ರೇಲಿಯಾ, ಯುಎಸ್ ಹಾಗೂ ಐರ್ಲೆಂಡ್ ಗಳಲ್ಲಿ ‘ಬ್ಲಿಂಕ್’ ಸಿನಿಮಾ ಬಿಡುಗಡೆಯಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಯುಕೆ, ಯೂರೋಪ್ನ ಕೆಲ ದೇಶಗಳು, ನ್ಯೂಜಿಲೆಂಡ್, ಯುಎಸ್, ಸಿಂಗಾಪುರ್, ಮಲೇಷಿಯಾ, ಜರ್ಮನ್, , ಕೆನಡಾ, ಫ್ರಾನ್ಸ್ ಸೇರಿದಂತೆ ಹಲವು ದೇಶಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡಲಾಗುತ್ತಿದೆಯಂತೆ.
ಶ್ರೀನಿಧಿ ಬೆಂಗಳೂರು ನಿರ್ದೇಶನದ ‘ಬ್ಲಿಂಕ್’ ಚಿತ್ರಕ್ಕೆ ರವಿಚಂದ್ರ ಎ. ಜೆ ಬಂಡವಾಳ ಹೂಡಿದ್ದಾರೆ. ‘ದಿಯಾ’ ಖ್ಯಾತಿಕ ದೀಕ್ಷಿತ್ ಶೆಟ್ಟಿ, ಚೈತ್ರಾ ಆಚಾರ್, ಗೋಪಾಲ ದೇಶಪಾಂಡೆ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ. ಈ ಸಿನಿಮಾ ಭಿನ್ನವಾದ ಕತೆ ಹೊಂದಿದೆ. ಟೈಮ್ ಲೂಪ್, ಟೈಮ್ ಟ್ರಾವೆಲ್ ಕಾನ್ಸೆಪ್ಟ್ ಹೊಂದಿರುವ ಸಿನಿಮಾ ಇದಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ