ನೈಜೀರಿಯಾದಲ್ಲಿ ಆತಂಕದ ಕ್ಷಣ, ಬಂಧನದಿಂದ ಪಾರಾದ ಡಾ ಬ್ರೋ

|

Updated on: Oct 27, 2024 | 7:16 AM

ಕನ್ನಡದ ಹೆಮ್ಮೆಯ ಯೂಟ್ಯೂಬರ್, ಟ್ರಾವೆಲ್ ವ್ಲಾಗರ್ ಡಾ ಬ್ರೋ ನೈಜೀರಿಯಾಕ್ಕೆ ಹೋಗಿದ್ದು, ಅಲ್ಲಿನ ಶಾಲೆಯೊಂದಕ್ಕೆ ಭೇಟಿ ನೀಡಿ ಅಲ್ಲಿನ ಮಕ್ಕಳಿಗೆ ಕನ್ನಡದ ವರ್ಣಮಾಲೆ ಹೇಳಿಕೊಂಡಿದ್ದಾರೆ. ಆ ವಿಡಿಯೋ ಸಖತ್ ವೈರಲ್ ಆಗಿದ್ದು, ಕನ್ನಡಿಗರ ಅಪಾರ ಮೆಚ್ಚುಗೆ ಗಳಿಸುತ್ತಿದೆ.

ನೈಜೀರಿಯಾದಲ್ಲಿ ಆತಂಕದ ಕ್ಷಣ, ಬಂಧನದಿಂದ ಪಾರಾದ ಡಾ ಬ್ರೋ
Follow us on

ಕನ್ನಡದಲ್ಲಿ ಸಾಕಷ್ಟು ಮಂದಿ ಯೂಟ್ಯೂಬರ್​ಗಳಿದ್ದಾರೆ. ಆದರೆ ಕನ್ನಡಿಗರಿಗೆ ಅತ್ಯಂತ ಪ್ರೀತಿಯ, ಇಷ್ಟವಾಗುವ ಯೂಟ್ಯೂಬರ್​ ಎಂದರೆ ಅದು ಡಾ ಬ್ರೋ. ಈ ಯುವಕ ಮಾಡುವ ಸಾಹಸಗಳು, ಆಪ್ತವಾಗಿ ಮಾತನಾಡುವ ರೀತಿ, ಆತನ ಧೈರ್ಯ, ತನ್ನ ವೀಕ್ಷಕರಿಗೆ ಅತ್ಯುತ್ತಮವಾದುದ ಮಾಹಿತಿ, ಹೊಸ ಸ್ಥಳಗಳನ್ನು ತೋರಿಸಬೇಕೆಂಬ ತುಡಿತ, ಆಡಂಭರವಿಲ್ಲದ, ದಿಮಾಕುಗಳಿಲ್ಲದ ಸರಳವಾದ ಮಾತು ಎಲ್ಲವೂ ಇಷ್ಟ. ಎಲ್ಲದಕ್ಕಿಂತಲೂ ಹೆಚ್ಚಾಗಿ ಡಾ ಬ್ರೋನ ಕನ್ನಡ ಪ್ರೀತಿ ಕನ್ನಡಿಗರಿಗೆ ಬಹಳ ಇಷ್ಟ. ಪ್ರವಾಸ ಮಾಡುತ್ತಾ ಟ್ರಾವೆಲ್ ವ್ಲಾಗ್ ಮಾಡುವ ಡಾ ಬ್ರೋ ಇತ್ತೀಚೆಗೆ ಆಫ್ರಿಕಾ ಪ್ರವಾಸಕ್ಕೆ ತೆರಳಿದ್ದು, ಅಲ್ಲಿನ ಶಾಲಾ ಮಕ್ಕಳಿಗೆ ಕನ್ನಡ ಹೇಳಿಕೊಟ್ಟಿದ್ದಾರೆ.

ಡಾ ಬ್ರೋ ನೈಜೀರಿಯಾ ಪ್ರವಾಸಕ್ಕೆ ಹೋಗಿದ್ದರು. ಯಾವುದೇ ದೇಶಕ್ಕೆ ಪ್ರವಾಸಕ್ಕೆ ಹೋದರು ಅಲ್ಲಿನ ಪ್ರವಾಸಿ ತಾಣದ ಬದಲಿಗೆ ಅಲ್ಲಿನ ನಗರ, ಹಳ್ಳಿ, ಜನ ಅವರ ಜೀವನಗಳನ್ನು ತೋರಿಸುವುದು ಡಾ ಬ್ರೋ ವಿಶೇಷತೆ. ನೈಜೀರಿಯಾ ಪ್ರವಾಸಕ್ಕೆ ಹೋದಾಗಲೂ ಸಹ ಅಲ್ಲಿನ ಮಾರುಕಟ್ಟೆ, ಅಲ್ಲಿನ ಜನ ಕುರಿ, ಮೇಕೆ, ಹಾವುಗಳ ಚರ್ಮಗಳನ್ನು ಹದ ಮಾಡುವ ವಿಧಾನ ಇನ್ನಿತರೆಗಳನ್ನು ತೋರಿಸಿದ್ದಾರೆ. ಹಾಗೆಯೇ ಅಲ್ಲಿನ ಶಾಲೆಯೊಂದಕ್ಕೆ ಭೇಟಿ ನೀಡಿರುವ ಡಾ ಬ್ರೋ ಅಲ್ಲಿನ ಮಕ್ಕಳಿಗೆ ಕನ್ನಡ ಹೇಳಿಕೊಟ್ಟಿದ್ದಾರೆ.

ಇದನ್ನೂ ಓದಿ:Viral Video: ಹಲೋ ಎಂಚ ಉಲ್ಲರ್, ಇಂಡೋನೇಷ್ಯಾದಲ್ಲಿ  ತುಳು ಮಾತನಾಡಿದ ಡಾ. ಬ್ರೋ 

ಡಾ ಬ್ರೋ ಹಂಚಿಕೊಂಡಿರುವ ವ್ಲಾಗ್ ಒಂದರಲ್ಲಿ, ಅಲ್ಲಿನ ಶಾಲೆಯೊಂದಕ್ಕೆ ಭೇಟಿ ನೀಡಿ, ‘ನಾನು ನಿಮ್ಮ ಹೊಸ ಶಿಕ್ಷಕ ಎಂದು ಬ್ರೋ ಪರಿಚಯ ಮಾಡಿಕೊಂಡಿದ್ದಾರೆ. ಬಳಿಕ ನಿಮಗೆ ಭಾರತ ಗೊತ್ತ? ಎಂದು ಕೇಳಿದ್ದಾರೆ. ಬಳಿಕ ಭಾರತದಲ್ಲಿ ಕರ್ನಾಟಕ ಎಂಬ ರಾಜ್ಯವಿದೆ ಎಂದು ಮಕ್ಕಳಿಗೆ ಹೇಳಿದ ಡಾ ಬ್ರೋ, ಇಂಗ್ಲೀಷ್​ನ ಅಲ್ಫಾಬೆಟ್​ ರೀತಿಯಲ್ಲಿಯೇ ಕರ್ನಾಟಕದ ಕನ್ನಡ ಭಾಷೆಗೂ ಒಂದೊಂದು ಅಕ್ಷರವಿದೆ ಎಂದು ಹೇಳುತ್ತಾ, ‘ಅ, ಆ, ಇ, ಈ..’ ಎಂದು ಇಡೀ ವರ್ಣಮಾಲೆಯನ್ನು ಮಕ್ಕಳಿಗೆ ಹೇಳಿಕೊಟ್ಟಿದ್ದಾರೆ. ನೈಜೀರಿಯಾದ ಮಕ್ಕಳು ಸಹ ಖುಷಿಯಿಂದ ಬ್ರೋ ಹೇಳಿಕೊಟ್ಟಂತೆ ಅ ಆ ಇ ಈ ಹೇಳಿದ್ದಾರೆ. ಈ ವಿಡಿಯೋ ಈಗ ಸಖತ್ ವೈರಲ್ ಆಗಿದೆ. ಡಾ ಬ್ರೋನ ಕನ್ನಡ ಪ್ರೀತಿಗೆ ಮತ್ತೊಮ್ಮೆ ಭೇಷ್ ಎಂದಿದ್ದಾರೆ ಕನ್ನಡಿಗರು.

ಡಾ ಬ್ರೋ ಅಲಿಯಾಸ್ ಗಗನ್ ಹಲವು ವರ್ಷಗಳಿಂದಲೂ ಟ್ರಾವೆಲ್ ವ್ಲಾಗ್​ಗಳನ್ನು ಮಾಡುತ್ತಿದ್ದಾರೆ. ಈವರೆಗೆ ಸುಮಾರು 25ಕ್ಕೂ ಹೆಚ್ಚು ದೇಶಗಳನ್ನು ಡಾ ಬ್ರೋ ಸುತ್ತಿದ್ದಾರೆ. ಎಲ್ಲ ಪ್ರವಾಸಿಗರು ಹೋಗುವ ಅಮೆರಿಕ, ಸಿಂಗಪುರ ಇಂಥಹಾ ಜನಪ್ರಿಯ ದೇಶಗಳ ಬದಲಿಗೆ ಹೆಚ್ಚು ಜನರಿಗೆ ಪರಿಚಯವಿಲ್ಲದ ದೇಶಗಳಿಗೆ ಹೋಗಿ ಅಲ್ಲಿನ ಜನ, ಅವರ ಜೀವನವನ್ನು ಪರಿಚಯ ಮಾಡಿಸುವುದು ಡಾ ಬ್ರೋ ಶೈಲಿ. ಈಗ ನೈಜೀರಿಯಾಗೆ ಹೋದಾಗ ಡಾ ಬ್ರೋ ಬಂಧನ ಆಗುವುದರಲ್ಲಿತ್ತು, ಅಲ್ಲಿನ ಮಿಲಿಟರಿ ಅಧಿಕಾರಿಗಳು ಡಾ ಬ್ರೋ ಮೊಬೈಲ್ ಕಿತ್ತುಕೊಂಡಿದ್ದರು. ಮಿಲಿಟರಿ ಅಧಿಕಾರಿನ್ನು ವಿಡಿಯೋ ಮಾಡಿದ್ದೀಯ ಎಂದು ಡಾ ಬ್ರೋರ ಮೊಬೈಲ್ ಪರಿಶೀಲನೆ ಮಾಡಿದ್ದಾರೆ. ಆದರೆ ಕೆಲ ಸ್ಥಳೀಯರು ಸಹಾಯ ಮಾಡಿದ ಕಾರಣ ಡಾ ಬ್ರೋ ಬಂಧನ ಆಗಲಿಲ್ಲ. ಈ ವಿಷಯವನ್ನು ವ್ಲಾಗ್ ಒಂದರಲ್ಲಿ ಬ್ರೋ ಹೇಳಿಕೊಂಡಿದ್ದು, ನೈಜೀರಿಯಾದ ಭಯಾನಕ ಪರಿಸ್ಥಿತಿಯ ಬಗ್ಗೆಯೂ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:12 am, Sun, 27 October 24