ನಿರ್ದೇಶಕ ಸಂಗೀತ್​ ಶಿವನ್​ ನಿಧನ; ಅನಾರೋಗ್ಯದಿಂದ 61ನೇ ವಯಸ್ಸಿಗೆ ವಿಧಿವಶ

|

Updated on: May 08, 2024 | 10:57 PM

ಸಿನಿಮಾ ನಿರ್ದೇಶಕ ಸಂಗೀತ್​ ಶಿವನ್​ ಅವರು ಇಂದು (ಮೇ 8) ನಿಧನರಾಗಿದ್ದಾರೆ. ಅವರ ಅಗಲಿಕೆಗೆ ಅನೇಕ ಸೆಲೆಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ. ಅನಾರೋಗ್ಯದಿಂದ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಸಂಗೀತ್​ ಶಿವನ್​ ಅವರು ಚಿಕಿತ್ಸೆ ಫಲಕಾರಿ ಆಗದೇ ಕೊನೆಯುಸಿರು ಎಳೆದಿದ್ದಾರೆ. ತುಷಾರ್​ ಕಪೂರ್​, ರಿತೇಶ್​ ದೇಶಮುಖ್​ ಮುಂತಾದ ಸೆಲೆಬ್ರಿಟಿಗಳು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ನಿರ್ದೇಶಕ ಸಂಗೀತ್​ ಶಿವನ್​ ನಿಧನ; ಅನಾರೋಗ್ಯದಿಂದ 61ನೇ ವಯಸ್ಸಿಗೆ ವಿಧಿವಶ
ಸಂಗೀತ್​ ಶಿವನ್​
Follow us on

ಮಲಯಾಳಂ ಮತ್ತು ಹಿಂದಿ ಚಿತ್ರರಂಗದಲ್ಲಿ ಖ್ಯಾತಿ ಹೊಂದಿದ್ದ ನಿರ್ದೇಶಕ ಸಂಗೀತ್​ ಶಿವನ್ (Sangeeth Sivan)​ ಅವರು ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು 61ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ. ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿ ಆಗದೇ ಇಂದು (ಮೇ 8) ಕೊನೆಯುಸಿರು ಎಳೆದಿದ್ದಾರೆ. ಸಂಗೀತ್​ ಶಿವನ್​ ಅವರ ನಿಧನಕ್ಕೆ (Sangeeth Sivan Death) ಅನೇಕ ಸೆಲೆಬ್ರಿಟಿಗಳು ಕಂಬಿನಿ ಮಿಡಿದಿದ್ದಾರೆ. ಸೋಶಿಯಲ್​ ಮೀಡಿಯಾ ಮೂಲಕ ಅಭಿಮಾನಿಗಳು ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.

ಸಂಗೀತ್​ ಶಿವನ್​ ಅವರು ಮೂಲತಃ ಕೇರಳದ ತಿರುವನಂತಪುರಂನವರು. 1989ರಲ್ಲಿ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಆಮಿರ್​ ಖಾನ್​ ನಟನೆಯ ‘ರಾಖ್​’ ಸಿನಿಮಾಗೆ ಕಾರ್ಯಕಾರಿ ನಿರ್ಮಾಪಕರಾಗಿ ಅವರು ಕೆಲಸ ಆರಂಭಿಸಿದರು. ಬಳಿಕ 1990ರಲ್ಲಿ ಮಲಯಾಳಂನ ‘ವ್ಯೂಹಂ’ ಸಿನಿಮಾಗೆ ನಿರ್ದೇಶನ ಮಾಡುವ ಮೂಲಕ ಹೊಸ ಅಧ್ಯಾಯ ಆರಂಭಿಸಿದರು. ಮೋಹನ್​ಲಾಲ್​ ನಟನೆಯ ‘ಯೋಧ’ ಸಿನಿಮಾಗೆ ನಿರ್ದೇಶನ ಮಾಡಿ ಅವರು ಗುರುತಿಸಿಕೊಂಡರು.

ಇದನ್ನೂ ಓದಿ: ಸೌಂದರ್ಯ ಜಗದೀಶ್​ ಸಾವಿನ ಹಿಂದಿರುವ 2 ಅನುಮಾನದ ಬಗ್ಗೆ ಸ್ನೇಹಿತರ ಸ್ಪಷ್ಟನೆ

ಬಾಲಿವುಡ್​ನಲ್ಲಿ ಸಂಗೀತ್​ ಶಿವನ್​ ಅವರು ತಮ್ಮದೇ ಚಾಪು ಮೂಡಿಸಿದ್ದರು. ‘ಚುರಾ ಲಿಯಾ ಹೈ ತುಮ್ ನೇ’, ‘ಕ್ಯಾ ಕೂಲ್​ ಹೈ ಹಮ್​’, ‘ಅಪ್ನ ಸಪ್ನ ಮನಿ ಮನಿ’, ‘ಯಮ್ಲಾ ಪಗ್ಲ ದೀವಾನ 2’ ಮುಂತಾದ ಸಿನಿಮಾಗಳಿಗೆ ಅವರು ನಿರ್ದೇಶನ ಮಾಡಿದ್ದರು. ಮಲಯಾಳಂನ ‘ರೋಮಾಂಚಂ’ ಸಿನಿಮಾವನ್ನು ಹಿಂದಿಯಲ್ಲಿ ರಿಮೇಕ್​ ಮಾಡಲು ಅವರು ಮುಂದಾಗಿದ್ದರು. ಆ ಕೆಲಸ ಪೂರ್ಣಗೊಳ್ಳುವುದಕ್ಕೂ ಮೊದಲೇ ಅವರು ನಿಧನರಾಗಿರುವುದು ನೋವಿನ ಸಂಗತಿ.

ಸುನೀಲ್​ ಶೆಟ್ಟಿ, ರಿತೇಶ್​ ದೇಶಮುಖ್​, ಜಾಕಿ ಶ್ರಾಫ್​, ಸೆಲಿನಾ ಜೇಟ್ಲಿ, ಚಂಕಿ ಪಾಂಡೆ, ರಾಜ್​ಪಾಲ್​ ಯಾದವ್​, ತುಷಾರ್​ ಕಪೂರ್​, ಇಶಾ ಕೊಪ್ಪಿಕರ್​, ನೇಹಾ ದೂಪಿಯಾ, ಅನುಪಮ್​ ಖೇರ್​ ಮುಂತಾದ ಸೆಲೆಬ್ರಿಟಿಗಳ ಜೊತೆ ಸಂಗೀತ್​ ಶಿವನ್​ ಕೆಲಸ ಮಾಡಿದ್ದರು. ನಿರ್ದೇಶಕನ ಅಗಲಿಕೆಗೆ ರಿತೇಶ್​ ದೇಶಮುಖ್​ ಸಂತಾಪ ಸೂಚಿಸಿದ್ದಾರೆ. ‘ಸಂಗೀತ್​ ಶಿವನ್​ ಸರ್​ ಇನ್ನಿಲ್ಲ ಎಂಬುದು ತಿಳಿದು ಶಾಕ್​ ಆಯಿತು. ಅವರು ತುಂಬ ಒಳ್ಳೆಯ ವ್ಯಕ್ತಿ ಆಗಿದ್ದರು. ಅವರ ಕುಟುಂಬದವರಿಗೆ ನನ್ನ ಸಂತಾಪಗಳು. ಅವರನ್ನು ಮತ್ತು ಅವರ ನಗುವನ್ನು ಮಿಸ್​ ಮಾಡಿಕೊಳ್ಳುತ್ತೇನೆ’ ಎಂದು ರಿತೇಶ್​ ದೇಶಮುಖ್​ ಟ್ವೀಟ್​ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.