
ತೆಲುಗು ಚಿತ್ರರಂಗದ ಜನಪ್ರಿಯ ಹಾಸ್ಯನಟ ಸಪ್ತಗಿರಿ ಅವರು ಇತ್ತೀಚೆಗೆ ತಮ್ಮ ‘ಪುರುಷ’ ಚಿತ್ರದ ಪ್ರಚಾರದ ವೇಳೆ ನೀಡಿದ ಹೇಳಿಕೆಯೊಂದು ಈಗ ದೊಡ್ಡ ವಿವಾದಕ್ಕೆ ನಾಂದಿ ಹಾಡಿದೆ. ರೆಬೆಲ್ ಸ್ಟಾರ್ ಪ್ರಭಾಸ್ ನಟನೆಯ ಬಹುನಿರೀಕ್ಷಿತ ‘ದಿ ರಾಜಾ ಸಾಬ್’ ಚಿತ್ರವನ್ನು ಸಪ್ತಗಿರಿ ಅವರು ‘ಸಣ್ಣ ಸಿನಿಮಾ’ ಎಂದು ಕರೆದಿದ್ದಾರೆ. ಪ್ರಭಾಸ್ ಅವರಂತಹ ಪ್ಯಾನ್ ಇಂಡಿಯಾ ಸ್ಟಾರ್ ಚಿತ್ರವನ್ನು ಹೀಗೆ ಹಗುರವಾಗಿ ಬಿಂಬಿಸಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಮಾಧ್ಯಮಗೋಷ್ಠಿಯಲ್ಲಿ ತಮ್ಮ ಸಿನಿಮಾ ಜರ್ನಿ ಬಗ್ಗೆ ಮಾತನಾಡಿದ ಸಪ್ತಗಿರಿ, ‘ನಾನು ಈಗ ಕೇವಲ ಹಣಕ್ಕಾಗಿ ನಟಿಸುತ್ತಿಲ್ಲ, ವೃತ್ತಿಪರ ತೃಪ್ತಿಗಾಗಿ ಪಾತ್ರಗಳನ್ನು ಆರಿಸಿಕೊಳ್ಳುತ್ತಿದ್ದೇನೆ. ಇತ್ತೀಚೆಗೆ ಸರಸ್ವತಿ, ದಿ ರಾಜಾ ಸಾಬ್ ಮತ್ತು ಕೊಕ್ಕರೊಕೊದಂತಹ ಚಿತ್ರಗಳನ್ನು ಮಾಡಿದ್ದೇನೆ. ಇವು ಸಣ್ಣ ಪ್ರಮಾಣದ ಚಿತ್ರಗಳಾದ ಕಾರಣ ಜನರನ್ನು ಸರಿಯಾಗಿ ತಲುಪಲಿಲ್ಲ. ಅದೇ ದೊಡ್ಡ ಚಿತ್ರಗಳಾಗಿದ್ದರೆ ಅವುಗಳ ವ್ಯಾಪ್ತಿ ಚೆನ್ನಾಗಿರುತ್ತಿತ್ತು’ ಎಂದಿದ್ದಾರೆ. ಪ್ರಭಾಸ್ ಅವರ ಬಿಗ್ ಬಜೆಟ್ ಸಿನಿಮಾವನ್ನು ಸಣ್ಣ ಚಿತ್ರಗಳ ಸಾಲಿಗೆ ಸೇರಿಸಿದ ಅವರ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಟ್ರೋಲ್ ಆಗುತ್ತಿವೆ.
ಇನ್ನು ಸಪ್ತಗಿರಿ ಅವರ ವೃತ್ತಿಜೀವನದ ಬಗ್ಗೆ ನೋಡುವುದಾದರೆ, ‘ಜಬರ್ದಸ್ತ್’ ಕಾರ್ಯಕ್ರಮದ ಮೂಲಕ ಜನಪ್ರಿಯರಾದ ಇವರು, ನಂತರ ಹಾಸ್ಯನಟರಾಗಿ ‘ವೆಂಕಟಾದ್ರಿ ಎಕ್ಸ್‌ಪ್ರೆಸ್’, ‘ದೃಶ್ಯಂ’ನಂತಹ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದರು. ನಾಯಕನಾಗಿ ‘ಸಪ್ತಗಿರಿ ಎಲ್‌ಎಲ್‌ಬಿ’ಯಂತಹ ಸಿನಿಮಾಗಳಲ್ಲಿ ಅದೃಷ್ಟ ಪರೀಕ್ಷೆ ನಡೆಸಿದರೂ ಅವು ಕೈ ಹಿಡಿಯಲಿಲ್ಲ. ಹೀಗಾಗಿ ಮತ್ತೆ ಪೋಷಕ ನಟ ಮತ್ತು ಹಾಸ್ಯನಟನಾಗಿ ಬ್ಯುಸಿಯಾಗಿದ್ದಾರೆ. ಚಿತ್ರರಂಗಕ್ಕೆ ಬಂದು 18 ವರ್ಷ ಕಳೆದರೂ ತಮಗೆ ಇನ್ನೂ ಸರಿಯಾದ ಬ್ರೇಕ್ ಸಿಕ್ಕಿಲ್ಲ ಎಂಬ ಅಸಮಾಧಾನ ಅವರ ಮಾತಿನಲ್ಲಿ ವ್ಯಕ್ತವಾಯಿತು.
ಇದನ್ನೂ ಓದಿ: ‘ದಿ ರಾಜಾ ಸಾಬ್’ ಸೋಲಿನ ಬಳಿಕ ಹೊಸ ಸಿನಿಮಾ ಘೋಷಿಸಿದ ನಿರ್ದೇಶಕ ಮಾರುತಿ
ಸದ್ಯ ಸಪ್ತಗಿರಿ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಪುರುಷ’ ಸಿನಿಮಾ ಮೇ 22 ರಂದು ಬಿಡುಗಡೆಯಾಗಲಿದೆ. ಈ ಚಿತ್ರದ ಯಶಸ್ಸಿನ ನಿರೀಕ್ಷೆಯಲ್ಲಿರುವ ಅವರು, ಹೊಸ ರೀತಿಯ ಭಾವನಾತ್ಮಕ ಪಾತ್ರಗಳನ್ನು ಮಾಡಲು ಬಯಸುತ್ತಿರುವುದಾಗಿ ತಿಳಿಸಿದ್ದಾರೆ. ಆದರೆ, ರಾಜಾ ಸಾಬ್ ಚಿತ್ರದ ಬಗ್ಗೆ ಅವರು ನೀಡಿದ ಹೇಳಿಕೆ ಮಾತ್ರ ಪ್ರಭಾಸ್ ಅಭಿಮಾನಿಗಳನ್ನು ಕೆರಳಿಸಿದ್ದು, ಸಪ್ತಗಿರಿ ಈ ಬಗ್ಗೆ ಸ್ಪಷ್ಟನೆ ನೀಡುತ್ತಾರೆಯೇ ಎಂದು ಕಾದು ನೋಡಬೇಕಿದೆ. ಅವರ ಕ್ಷಮೆಗೆ ಆಗ್ರಹ ಕೇಳಿ ಬಂದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.