ತಮ್ಮ ವಿಭಿನ್ನ ಬಗೆಯ ಪಾತ್ರಪೋಷಣೆ ಹಾಗೂ ಪಾತ್ರ ವೈವಿಧ್ಯದಿಂದ ದೇಶದ ಗಮನ ಸೆಳೆದಿರುವವರು ತಮಿಳು ನಟ ಆರ್ಯ. ಇದೀಗ ಆರ್ಯ ಅವರ ಹೊಸ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಬಾಕ್ಸರ್ನ ಪಾತ್ರದಲ್ಲಿ ಅವರು ಮಿಂಚುತ್ತಿದ್ದಾರೆ. ಪಾ.ರಂಜಿತ್(Pa.Ranjith) ನಿರ್ದೇಶನದ ಸರ್ಪಟ್ಟ ಪರಂಬರೈ (Sarpatta Parambarai) ಚಿತ್ರವು ಉತ್ತರ ಚೆನ್ನೈನ ಬಾಕ್ಸಿಂಗ್ ಪರಂಪರೆಯನ್ನು ಕಟ್ಟಿಕೊಡುತ್ತದೆ. ಇದೀಗ ಬಿಡುಗಡೆಯಾಗಿರುವ ಟ್ರೇಲರ್ನಲ್ಲಿ ಮೊದಲಿಗೆ ಉತ್ತರ ಚೆನ್ನೈನ ಜನರು ಬಾಕ್ಸಿಂಗ್ ಬಗ್ಗೆ ಪ್ರೀತಿಯನ್ನು ಹೇಗೆ ಬೆಳೆಸಿಕೊಂಡರು ಎಂಬುದನ್ನು ತಿಳಿಸಲಾಗಿದೆ. ಪಶುಪತಿಯ ಪಾತ್ರವು ಇಲ್ಲಿ ಬಾಕ್ಸಿಂಗ್ ಆರಂಭವಾದ ಬಗ್ಗೆ ತಿಳಿಸುತ್ತಾ, ಬ್ರಿಟೀಷರಿಂದ ಈ ಕ್ರೀಡೆಯನ್ನು ಕಲಿತು ಅವರನ್ನೇ ಮಣಿಸುವ ಮಟ್ಟಕ್ಕೆ ಬೆಳೆದ ನಂತರ ಇಲ್ಲಿನ ಜನರ ನರನಾಡಿಯಲ್ಲಿ ಈ ಕ್ರೀಡೆಯು ರಕ್ತಗತವಾಯಿತು ಎಂದು ತಿಳಿಸುತ್ತದೆ.
ಟ್ರೇಲರ್ ಮುಖಾಂತರ ತಿಳಿಯುವುದೇನೆಂದರೆ, ಬಾಕ್ಸಿಂಗ್ ಎನ್ನುವುದು ಅಲ್ಲಿ ಕೇವಲ ಪರಂಪರೆಯಾಗಿ ಉಳಿದಿಲ್ಲ. ಅದು ಅಲ್ಲಿ ಪ್ರತಿಷ್ಠೆಯಾಗಿ ಬದಲಾಗಿದೆ. ತಮಿಳಿನ ಖ್ಯಾತ ನಟ ಸೂರ್ಯ ಟ್ರೇಲರ್ ಅನ್ನು ಟ್ವಿಟರ್ನಲ್ಲಿ ಬಿಡುಗಡೆಗೊಳಿಸಿದ್ದಾರೆ. ಇಡೀ ಚಿತ್ರತಂಡದ ಶ್ರಮ ಸಿನಿಮಾವನ್ನು ತೆರೆಯ ಮೇಲೆ ನೋಡುವಾಗ ವೇದ್ಯವಾಗುತ್ತದೆ; ಚಿತ್ರ ಗೆಲ್ಲಲಿ ಎಂದು ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.
ಚಿತ್ರದ ಟ್ರೇಲರ್ ಇಲ್ಲಿದೆ:
ಚಿತ್ರದಲ್ಲಿ 1970ರ ಕಾಲದ ಚೆನ್ನೈ ಅನ್ನು ಮರು ನಿರ್ಮಾಣ ಮಾಡಲಾಗಿದೆ. ನಿರ್ದೇಶಕ ಪಾ.ರಂಜಿತ್ ಈ ಮೊದಲು 2014ರಲ್ಲಿ ‘ಮದ್ರಾಸ್’ ಚಿತ್ರದ ನಿರ್ದೇಶನದ ಸಂದರ್ಭದಲ್ಲಿ ಚೆನ್ನೈನ ಬಾಕ್ಸಿಂಗ್ ಪರಂಪರೆಯ ಬಗ್ಗೆ ಮೊದಲ ಬಾರಿಗೆ ತಿಳಿದುಕೊಂಡಿದ್ದಾಗಿ ಈ ಹಿಂದೆ ತಿಳಿಸಿದ್ದರು. ಟ್ರೇಲರ್ನಲ್ಲಿ ಗಮನ ಸೆಳೆಯುವುದು ನೈಜ ಬಾಕ್ಸಿಂಗ್ ದೃಶ್ಯಗಳು. ಈ ಹಿಂದಿನ ಯಾವ ತಮಿಳು ಚಿತ್ರದಲ್ಲೂ ಇಷ್ಟು ನೈಜವಾಗಿ ಕ್ರೀಡೆಯನ್ನು ತೋರಿಸಿರಲಿಲ್ಲ ಎಂದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಇದು ಚಿತ್ರರಂಗದಲ್ಲಿ ನನ್ನ ಜೀವನವನ್ನು ನಿರ್ಧರಿಸಲಿದೆ ಎಂದು ಚಿತ್ರದ ಟ್ರೇಲರ್ ಬಿಡುಗಡೆಯ ಸಂದರ್ಭದಲ್ಲಿ ಆರ್ಯ ತಿಳಿಸಿದ್ದಾರೆ. ಚಿತ್ರಕ್ಕಾಗಿ ಒಬ್ಬ ಬಾಕ್ಸರ್ನ ಹಾವ ಭಾವಗಳ ಜೊತೆಗೆ ಅದೇ ರೀತಿಯ ದೇಹ ಚಲನೆಯನ್ನೂ ತಿದ್ದಿಕೊಳ್ಳುವುದು ಸವಾಲಾಗಿತ್ತು. ಬಹಳ ಸಮಯದ ಕಠಿಣ ಶ್ರಮದ ಪರಿಣಾಮ, ನನ್ನ ಜೀವನದಲ್ಲಿಯೇ ವಿಶೇಷವಾದ ಚಿತ್ರ ಇದಾಗಿರಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ಧಾರೆ.
ಸರ್ಪಟ್ಟ ಪರಂಬರೈ ಚಿತ್ರವು ಜುಲೈ 22ರಂದು ಆಮೆಜಾನ್ ಪ್ರೈಮ್ನಲ್ಲಿ ಬಿಡುಗಡೆಯಾಗಲು ತಯಾರಾಗಿದೆ.
(Sarpatta Parambarai Trailer released on Amazon Prime Youtube Channel Starring Arya)